Advertisement

ಉದ್ಯೋಗ ಮೇಳದಲ್ಲಿ 244 ಜನರಿಗೆ ನೌಕರಿ

06:31 PM Feb 25, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಒಂದು ತಿಂಗಳೊಳಗೆ ನಡೆದ ಎರಡನೇ ಉದ್ಯೋಗ ಮೇಳ ಯಶಸ್ವಿಯಾಗಿ ನಡೆದಿದ್ದು, ಬುಧವಾರ 12 ಕಂಪನಿಗಳಲ್ಲಿ 244 ಯುವಕ ಮತ್ತು ಯುವತಿಯರು ಉದ್ಯೋಗ ಗಿಟ್ಟಿಸಿಕೊಂಡರು. ನಗರದ ಎಂ.ಎಸ್‌.ಕೆ.ಮಿಲ್‌ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ಕೇಂದ್ರದ ಹಿಂಭಾಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ, ಪದವಿ, ಡಿಪ್ಲೋಮಾ,
ಕಂಪ್ಯೂಟರ್‌ ಸೈನ್ಸ್‌, ಇಂಜಿಯರಿಂಗ್‌, ಕೌಶಲ್ಯ ತರಬೇತಿ ಪಡೆದವರು, ಪದವೀಧರರು ಮೇಳದಲ್ಲಿ ಪಾಲ್ಗೊಂಡಿದ್ದರು.

Advertisement

ರಾಜ್ಯದ ಪ್ರತಿಷ್ಠಿತ ಕಂಪನಿಗಳಾದ ಬೆಂಗಳೂರಿನ ಕ್ವಿಸ್‌ ಕಾರ್ಪ್‌ ಲಿ., ಎಕ್ಸ್‌ಟ್ರಿಮ್‌ ಸಾಫ್ಟ್‌ಟೆಕ್‌, ಕಲಬುರಗಿಯ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌, ಭಾರತ ಫೈನಾನ್‌ಷಿಯಲ್‌ ಇನ್‌ಕ್ಲೂಜನ್‌ ಲಿ., ಮಠ ಕಾಪೋìರೇಟ್‌ ಸಲ್ಯೂಷನ್‌, ಕಿಸಾನ್‌ ಕ್ರಾಫ್ಟ್‌ ಅಗ್ರೋ ಫರ್ಟಿಲೈಜರ್‌, ಬೆಂಗಳೂರಿನ ಜೋಶ್‌ ಮ್ಯಾನೇಜ್‌ಮೆಂಟ್‌, ಹೈದರಾಬಾದ್‌ನ ಫುಟರಜ್‌ ಸ್ಟಾಗ್‌ ಸಲ್ಯೂಷನ್‌, ಬೆಂಗಳೂರಿನ ಪ್ರಗತಿ ಸಲ್ಯೂಷನ್‌, ತುಮಕೂರಿನ ಅಭಯ ಸರ್ವೀಸಸ್‌ ಹಾಗೂ ಎ1 ಜಾಬ್‌ ಕನ್ಸಲ್‌ಟೆನ್ಸಿ ಆ್ಯಂಡ್‌ ಸರ್ವೀಸಸ್‌ ಕಂಪನಿಗಳು ಭಾಗವಹಿಸಿ, ಸ್ಥಳದಲ್ಲೇ ಸಂದರ್ಶನ ನಡೆಸಿ ಉದ್ಯೋಗಾವಕಾಶದ ಭರವಸೆ ನೀಡಿದವು.

ಕಲಬುರಗಿ ನಗರ ಸೇರಿದಂತೆ ವಿವಿಧ ಭಾಗಗಳ 552 ಯುವಕರು ಮತ್ತು 273 ಯುವತಿಯರು ಸೇರಿದಂತೆ ಒಟ್ಟು 825 ಅಭ್ಯರ್ಥಿಗಳು ಮೇಳದಲ್ಲಿ ಭಾಗಿಯಾಗಿದ್ದರು. ಇದರಲ್ಲಿ 244 ಜನರು ತಮ್ಮ-ತಮ್ಮ ವಿದ್ಯಾಹರ್ತೆ ಮೇಲೆ ಸ್ಥಳದಲ್ಲೇ ಉದ್ಯೋಗಕ್ಕೆ ಆಯ್ಕೆಯಾದರು. ಉದ್ಯೋಗ ಪಡೆದುಕೊಂಡರ ಪೈಕಿ 196 ಯುವಕರಿದ್ದರೆ, 48 ಜನ ಯುವತಿಯರು ಸೇರಿದ್ದಾರೆ. ಇನ್ನು 84 ವಿದ್ಯಾರ್ಥಿಗಳು ಅಪ್ರಂಟಿಸ್‌ ತರಬೇತಿ ಪಡೆಯಲು ಆಯ್ಕೆಗೊಂಡರು. ಮತ್ತೆ
ಕೆಲವರನ್ನು ಉದ್ಯೋಗ ನೇಮಕಕ್ಕೆ ಅಂತಿಮಗೊಳಿಸಿ, ನಿಗದಿತ ದಿನದಂದು ಮತ್ತೂಂದು ಸುತ್ತಿನ ಸಂದರ್ಶನಕ್ಕೆ ಬರುವಂತೆ ಕಂಪನಿಗಳು ಸೂಚಿಸಿದವು. ಕಳೆದ ಜನವರಿ 21ರಂದು ನಡೆದ ಉದ್ಯೋಗ ಮೇಳದಲ್ಲಿ 353ಕ್ಕೂ ಅಧಿಕ ಯುವಕ ಮತ್ತು ಯುವತಿಯರು ಉದ್ಯೋಗಕ್ಕೆ ಆಯ್ದೆಯಾಗಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ: ಇದಕ್ಕೂ ಮುನ್ನ ಬೆಳಗ್ಗೆ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಕೈಗಾರಿಕಾ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, ಇಂದಿನ ದಿನಮಾನದಲ್ಲಿ ಡಾಕ್ಟರೇಟ್‌ ಪದವಿ ಪಡೆದರೂ ಕೆಲಸ ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ಯುವಪೀಳಿಗೆ ಟಿವಿ ಮತ್ತು ಮೊಬೈಲ್‌ ಗಳಿಗೆ ಅಂಟಿಕೊಳ್ಳದೇ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ವಿದ್ಯಾರ್ಥಿಗಳು ಓದಿಕೊಂಡು ತಮ್ಮ ವೃತ್ತಿ ಜೀವನ ಚೆನ್ನಾಗಿ ರೂಪಿಸಿ ತಮ್ಮದೆಯಾದ ಸೇವೆಯನ್ನು ಸಮಾಜಕ್ಕೆ ನೀಡಿದಲ್ಲಿ ಅದು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ಈಗಿನ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಿಗೆ ದಾಸರಾಗದೇ ತ್ಯಾಗ ಮಾಡಿ ಶ್ರದ್ಧೆಯಿಂದ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕೆಂದು ಕರೆ ನೀಡಿದರು.

Advertisement

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ಭಾರತಿ, ಉದ್ಯೋಗ ಮತ್ತು ತರಬೇತಿ ಇಲಾಖೆ ವಿಭಾಗೀಯ ಕಚೇರಿ ಸಹಾಯಕ ನಿರ್ದೇಶಕ
ಶರಣಪ್ಪ ಮಾತನಾಡಿದರು. ಜಿಲ್ಲಾ ಉದ್ಯೋಗಾಧಿ  ಕಾರಿ ಪ್ರಭಾಕರ, ಸತೀಶಕುಮಾರ ರಾಠೊಡ, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕ- ಯುವತಿ
ಯರು ಭಾಗವಹಿಸಿದ್ದರು.

1960-80ರ ದಶಕದಲ್ಲಿ ಉದ್ಯೋಗ ವಿನಿಮಯ ಕಚೇರಿ ಮೂಲಕವೇ ಸರ್ಕಾರಿ ನೌಕರಿ ನೀಡಲಾಗುತ್ತಿತ್ತು. ಆದರೆ, ಪ್ರಸ್ತುತದಲ್ಲಿ ಐಎಎಸ್‌, ಕೆಎಎಸ್‌, ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಅನೇಕ ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ.

ರವೀಂದ್ರನಾಥ ಬಾಳಿ, ಜಂಟಿ ನಿರ್ದೇಶಕ,
ಕೈಗಾರಿಕಾ ಮತ್ತು ತರಬೇತಿ ಇಲಾಖೆ

ಉದ್ಯೋಗ ಎಂದ ಕೂಡಲೇ ಸರ್ಕಾರಿ ಕೆಲಸ ಎನ್ನುವ ಮಾತಿದೆ. 24 ವರ್ಷಗಳ ಹಿಂದೆ ನೇರವಾಗಿ ಉದ್ಯೋಗ ವಿನಿಮಯ ಕಚೇರಿಯಿಂದ ಸರ್ಕಾರಿ ಕೆಲಸ ಪಡೆಯಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಸಿಇಟಿ ಪರೀಕ್ಷೆ ಮೂಲಕ ನೇಮಕವಾಗುತ್ತಿದೆ. ಇದಕ್ಕಾಗಿ ನಿರುದ್ಯೋಗಿಗಳು ಪರೀಕ್ಷೆ ಬರೆಯಲು ಸಿದ್ಧರಿರಬೇಕು. ಉದ್ಯೋಗಾವಕಾಶ ಸಿಗುವ ಸ್ಥಳಗಳಲ್ಲಿ ಉದ್ಯೋಗ ಮಾಡುವುದು ಅಗತ್ಯವಾಗಿದೆ.

ಎಸ್‌.ಭಾರತಿ, ಸಹಾಯಕ ನಿರ್ದೇಶಕಿ,
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ

Advertisement

Udayavani is now on Telegram. Click here to join our channel and stay updated with the latest news.

Next