Advertisement

ನೌಕರರ ಸಮಸ್ಯೆ ಪರಿಹಾರಕ್ಕೆ ಹೋರಾಟ

02:49 PM Jun 10, 2018 | |

ಪುತ್ತೂರು: ಡಿ ಗ್ರೂಪ್‌ ನೌಕರರ ನೇಮಕಾತಿ ಹಾಗೂ ವೇತನ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಕಾಣಿಸುತ್ತಿದೆ. ಇದರ ಬಗ್ಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು. ಹೋರಾಟ ನಡೆಸುವಾಗ ಎಲ್ಲರೂ ಕೈಜೋಡಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್‌ ಕುಟಿನ್ಹಾ ಹೇಳಿದರು.

Advertisement

ಶನಿವಾರ ಪುತ್ತೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ರಾಜ್ಯ ಸರಕಾರಿ ಡಿ ಗ್ರೂಪ್‌ ನೌಕರರ ತಾಲೂಕು
ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಡಿ ಗ್ರೂಪ್‌ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದೆ. ಇದು ಸರಿಯಲ್ಲ. ಡಿ ಗ್ರೂಪ್‌ ನೌಕರರನ್ನು ಖಾಯಂ ಆಗಿ, ನೇರ ನೇಮಕಾತಿ ಮೂಲಕ ನೇಮಿಸಬೇಕು. ನೇರ ನೇಮಕಾತಿ ನಡೆಸುವ ಬಗ್ಗೆ ಈಗಾಗಲೇ ಪ್ರಸ್ತಾಪ ಸಲ್ಲಿಕೆಯಾಗಿದೆ. ಆದರೆ ಇದುವರೆಗೆ ಜಾರಿಯಾಗಿಲ್ಲ. ವೇತನ ನೀಡುವಲ್ಲೂ ತಾರತಮ್ಯ ನಡೆಯುತ್ತಿದೆ. ಪ್ರತಿ ತಿಂಗಳ 5ನೇ ತಾರೀಕಿಗೆ ವೇತನ ಸಿಗುವಂತೆ ಆಗಬೇಕು. ನಿವೃತ್ತಿ ಹೊಂದಿದವರಿಗೆ ಭತ್ಯೆಯೂ ಸಿಗುತ್ತಿಲ್ಲ. ಈ ಎಲ್ಲ ಬೇಡಿಕೆಗಳ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದ ಡಿ ಗ್ರೂಪ್‌ ನೌಕರರ ಮಕ್ಕಳಿಗೆ ಮುಂದಿನ ವಾರ್ಷಿಕ ಸಭೆಯಲ್ಲಿ ಗೌರವಿಸಲಾಗುವುದು ಎಂದು ಘೋಷಿಸಿದರು.

ಅಭಿನಂದನೆ
ಸಂಘದ ತಾಲೂಕು ಅಧ್ಯಕ್ಷ ಮೌರೀಸ್‌ ಮಸ್ಕರೇನಸ್‌ ಮಾತನಾಡಿ, ಸಂಘದ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಇಲ್ಲಿವರೆಗೆ ನಿರಂತರ ಹೋರಾಟ ಹಮ್ಮಿಕೊಂಡು ಬರಲಾಗುತ್ತಿದೆ. ಮುಂದೆಯೂ ಹೋರಾಟ ಮುಂದುವರಿಸಲಾಗುವುದು. ನೌಕರರ ಸಮಸ್ಯೆಗಳನ್ನು ಸಂಘದ ಮುಂದೆ ತರಬೇಕು. ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸುವಂತಾಗಬೇಕು ಎಂದ ಅವರು, ನಿವೃತ್ತಿ ಹೊಂದಿದ ಡಿ ಗ್ರೂಪ್‌ ನೌಕರರಿಗೆ ಅಭಿನಂದನೆ ಸಲ್ಲಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿರಿಲ್‌ ರೋಬರ್ಟ್‌ ಡಿ’ಸೋಜಾ ಮಾತನಾಡಿ, ಇದೀಗ ಜಿಲ್ಲಾ ಸಂಘ 60 ವರ್ಷವನ್ನು ಪೂರೈಸಿದ್ದು 61ನೇ ವರ್ಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಮುಂದಿನ ದಿನಗಳಲ್ಲಿ ಸಂಘದ ಬೇಡಿಕೆಗಳು ಏನು ಎನ್ನುವುದರ ಬಗ್ಗೆ ಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಕೊಡುಗೆ ನೀಡಬೇಕು ಎಂದರು.

ನಿವೃತ್ತ ಹೊಂದಿದ ಡಿ ಗ್ರೂಪ್‌ ನೌಕರರಾದ ಪಿ.ಎ. ಅಬ್ದುಲ್‌ ರಹಿಮಾನ್‌, ಜಿನ್ನಪ್ಪ ಶೆಟ್ಟಿ ಹಾಗೂ ಬಾಬು ಅವರನ್ನು ಈ ಸಂದರ್ಭ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯು.ಕೆ. ನಾರಾಯಣ, ಕೇಂದ್ರ ಸ್ಥಾನದ ಲೆಕ್ಕಪರಿಶೋಧಕ ಪಿ.ಕೆ. ಸುಧಾಕರ, ನಿವೃತ್ತ ಡಿ ಗ್ರೂಪ್‌ ನೌಕರ ಅಬ್ದುಲ್‌ ರಹಿಮಾನ್‌ ಪಿ.ಕೆ. ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಗಣೇಶ್‌ ಹೆಗ್ಡೆ ವರದಿ ವಾಚಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next