Advertisement

ನೌಕರರು ಆತ್ಮಾವಲೋಕನ ಮಾಡಿಕೊಳ್ಳಲಿ

12:26 PM Dec 09, 2018 | Team Udayavani |

ರಾಯಚೂರು: ಸರ್ಕಾರಿ ನೌಕರರು ಕೇವಲ ಸೌಲಭ್ಯಗಳ ಬಗ್ಗೆ ಮಾತ್ರ ಚಿಂತಿಸದೆ ಕೆಲಸದ ಬಗ್ಗೆಯೂ ಶ್ರದ್ಧೆ ವಹಿಸಬೇಕು. ಸರ್ಕಾರ ನೀಡುವ ಸಂಬಳಕ್ಕೆ ನಾವು ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡತಿಳಿ ಹೇಳಿದರು.

Advertisement

ರಾಜ್ಯ ಸರ್ಕಾರಿ ನೌಕರರ ಸಂಘವು ಶನಿವಾರ ನಗರದ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರು ಕೇವಲ ನಿಮ್ಮ ಸಮಸ್ಯೆಗಳ ಚರ್ಚೆ ಮಾತ್ರವಲ್ಲದೇ ನಿಮ್ಮಿಂದ ಆಗಬೇಕಾದ
ಕೆಲಸದ ಕುರಿತೂ ಚರ್ಚಿಸಬೇಕು. ಇಂದು ಸಾಕಷ್ಟು ನೌಕರರು ಗಡಿಯಾರ ನೋಡಿ ಕೆಲಸ ಮಾಡುತ್ತಾರೆ.

ಒಂದೊಂದು ಕಡತ ವಾರವಾದರೂ ವಿಲೇವಾರಿ ಆಗುವುದಿಲ್ಲ. ಇಂದು ನೀವು ಶ್ರದ್ಧೆಯಿಂದ ಕೆಲಸ ಮಾಡಿದ್ದರೆ ಸಿಎಂ ಜನಸ್ಪಂದನ ಸಭೆಯಲ್ಲಿ ಸಹಸ್ರಾರು ಅರ್ಜಿಗಳು ಬರುತ್ತಿರಲಿಲ್ಲ ಎಂದರು.

ಚೆನ್ನಾಗಿ ಕೆಲಸ ಮಾಡಿದರೆ ಯಾರೂ ಕಿರೀಟ ತೊಡಿಸುವುದಿಲ್ಲ. ಹಾಗಂತ ಆತ್ಮಸಾಕ್ಷಿ ವಿರುದ್ಧವಾಗಿ ಕೆಲಸ ಮಾಡುವುದಲ್ಲ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ನಮ್ಮ ನಿಮ್ಮ ಪಾಲಿಗೆ ರಾಜ್ಯದ ಜನರೇ ದೇವರು. ಆದರೆ, ಇಂದು ಅವರ ಪಾಲಿಗೆ ನೀವು ದೇವರಾಗದಿದ್ದರೂ ಪರವಾಗಿಲ್ಲ, ದೆವ್ವಗಳಾಗದಿರಿ ಎಂದರು.

ಸರ್ಕಾರಿ ನೌಕರರಲ್ಲೇ ಹತ್ತಾರು ಸಂಘಗಳು ಹುಟ್ಟಿಕೊಂಡಿವೆ. ಕೆಲವರು ನಮಗೆ ಕೆಲಸ ಮಾಡಿ ಎಂದರೆ, ಮರುಕ್ಷಣವೇ ಕೆಲವರು ಅದು ಬೇಡ ಮತ್ತೂಂದು ಮಾಡಿ ಎನ್ನುತ್ತಾರೆ. ನೀವೆಲ್ಲ ಒಗ್ಗಟ್ಟಾಗಿ ಬಂದಾಗ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು.

Advertisement

ಎನ್‌ಪಿಎಸ್‌ ರದ್ದತಿ ವಿಷಯ ಸರ್ಕಾರದ ಮಟ್ಟದಲ್ಲಿದೆ. ಇನ್ನೊಂದು ತಿಂಗಳಲ್ಲಿ ರದ್ದಾಗುವ ಸಾಧ್ಯತೆ ಇದೆ. 371 (ಜೆ) ಅನುಷ್ಠಾನ ಸಮಿತಿಯಲ್ಲಿ ಸದಸ್ಯನಾಗಿರುವ ಹಿನ್ನೆಲೆ ನಮ್ಮ ಭಾಗದ ಶಿಕ್ಷಣ, ಉದ್ಯೋಗದಲ್ಲಿನ ಮೀಸಲಾತಿ ಸೌಲಭ್ಯದ ಬಗ್ಗೆ ಸದನದಲ್ಲಿ ಮಾತನಾಡುವೆ. ಮುಖ್ಯವಾಗಿ ಈ ಭಾಗದಲ್ಲಿ ಬಡ್ತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯವಾಗುತ್ತಿರುವ ವಿಚಾರ ಗಮನಕ್ಕಿದೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಉಪನ್ಯಾಸಕ ಡಾ| ಎನ್‌.ಕೆ.ಪದ್ಮನಾಭ ವಿಷಯ ಮಂಡಿಸಿ, ಸರ್ಕಾರಿ ನೌಕರರಿಗೆ ಹಂತ ಹಂತವಾಗಿ ಅಭದ್ರತೆ ಕಾಡುತ್ತಿದೆ. ಪ್ರತಿ ಹಂತದಲ್ಲೂ ಸರ್ಕಾರ ನೌಕರರ ಹಿತ ಮರೆಯುತ್ತಿದೆ. ಮುಖ್ಯವಾಗಿ ಪಿಂಚಣಿ ಸೌಲಭ್ಯ ರದ್ದು, ಏಜೆನ್ಸಿ ಮೂಲಕ ನೇಮಕಾತಿ, ಅನಗತ್ಯ ಕೆಲಸದ ಹೊರೆ, ಶಾಲೆಗಳನ್ನು ದುರ್ಬಲ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಬಗ್ಗೆ ನಮ್ಮ ಜನಪ್ರತಿನಿಧಿಗಳು ನಮ್ಮ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮು ಮಾತನಾಡಿದರು. ಮೆಹಬೂಬ್‌ ಪಾಷಾ ಮೂಲಿಮನಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಬಸನಗೌಡ ದದ್ದಲ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಶರತ್‌ ಬಿ., ಜಿಪಂ ಸಿಇಒ ನಲಿನ್‌ ಅತುಲ್‌, ಮುಖಂಡರಾದ ತಿಮ್ಮಯ್ಯ ಪುರ್ಲೆ, ಎ.ಪುಟ್ಟಸ್ವಾಮಿ, ಬಸವರಾಜ ಗುರಿಕಾರ, ಸಿ.ಎಸ್‌.ಷಡಕ್ಷರಿ, ಆರ್‌. ಶ್ರೀನಿವಾಸ ಸೇರಿ ಅನೇಕರಿದ್ದರು.

ನಿಯಮ ಮೀರಿ; ಮುರಿಯದಿರಿ ಕೆಲವೊಮ್ಮೆ ಜನರ ಕೆಲಸ ಮಾಡಬೇಕಾದಾಗ ನಿಯಮ ಮೀರಬೇಕಾಗುತ್ತದೆ. ಆದರೆ, ಬಹುತೇಕ ನೌಕರರು ನಿಯಮಗಳನ್ನು ಮುರಿದು ಕೆಲಸ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅಂಥ ಕೆಲಸ ಮಾಡದಿರಿ. ಕೆಲ ಅಧಿಕಾರಿಗಳಿಗೆ ತಪ್ಪು ಹುಡುಕುವುದೇ ಕೆಲಸ. ಸಣ್ಣ ದೋಷ ಕಂಡರೂ ಕಡತವನ್ನೂ ಮೂಲೆಗೆ ಸೇರಿಸುತ್ತಾರೆ. ಚಿಕ್ಕಪುಟ್ಟ ತಪ್ಪುಗಳಿದ್ದರೆ ಸರಿಪಡಿಸಿ ಆ ಕೆಲಸ ಆಗುವಂತೆ ಮಾಡಿ.  ವೆಂಕಟರಾವ್‌ ನಾಡಗೌಡ,ಜಿಲ್ಲಾ ಉಸ್ತುವಾರಿ ಸಚಿವ

ತಂತ್ರಜ್ಞಾನ ಬಳಸಿಕೊಳ್ಳಿ ದೇಶದಲ್ಲಿ ಪೇಪರ್‌ರಹಿತ ಕಚೇರಿಗಳನ್ನು ಕಂಡಿದ್ದೇನೆ. ಈಗಾಗಲೇ ಬಹುತೇಕ ಕಚೇರಿಗಳು ಶೇಕಡಾವಾರು ಅದೇ ರೀತಿ ನಿರ್ಮಾಣಗೊಳ್ಳುತ್ತಿವೆ. ಆದರೂ ಅಧಿಕಾರಿಗಳು ಸಕಾಲಕ್ಕೆ ಕಡತಗಳ ವಿಲೇವಾರಿ ಮಾಡುವುದಿಲ್ಲ. ಸಿಬ್ಬಂದಿ ಜತೆ ಸಮನ್ವಯತೆ ಸಾಧಿಸುವ ಮೂಲಕ ಆಗುವ ಕೆಲಸಗಳನ್ನು ತ್ವರಿತವಾಗಿ ಮುಗಿಸಬೇಕು. ಅದಕ್ಕೆ ಆದೇಶ ಬರಲಿ, ನಮ್ಮನ್ನು ಯಾರಾದರೂ ಪ್ರಶ್ನಿಸಲಿ ಎಂದು ಕಾಯುವುದಲ್ಲ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಸಚಿವ ನಾಡಗೌಡ ಸಲಹೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next