Advertisement

ಬ್ಯಾಂಕ್‌ಗಳ ವಿಲೀನಕ್ಕೆ ನೌಕರರ ವಿರೋಧ

11:55 AM Dec 27, 2018 | Team Udayavani |

ಬೆಂಗಳೂರು: ಬ್ಯಾಂಕ್‌ ಆಫ್ ಬರೋಡಾ, ದೇನಾ ಬ್ಯಾಂಕ್‌ ಹಾಗೂ ವಿಜಯ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಮಹಾ ಒಕ್ಕೂಟ, ಯುನೈಟೆಡ್‌ ಫಾರಂ ಆಫ್ ಬ್ಯಾಂಕ್‌ ಯುನಿಯನ್ಸ್‌ ಮತ್ತು ಬ್ಯಾಂಕ್‌ ನೌಕರರು ಹಾಗೂ ಇತರೆ ಸಂಘಟನೆಗಳ ಸದಸ್ಯರು ಬುಧವಾರ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಿರ್ಧಾರ ಅಸಮರ್ಥನೀಯವಾಗಿದ್ದು, ದೇಶದ ಆರ್ಥಿಕತೆ ಮತ್ತು ಸಾರ್ವಜನಿಕರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಅಲ್ಲದೆ, ಬ್ಯಾಂಕ್‌ ನೌಕರರಿಗೆ ಉದ್ಯೋಗದ ಅಭದ್ರತೆ ಕಾಡಲಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳಿಗೂ ಕುತ್ತು ಬರಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisement

ಈಗಾಗಲೇ ಭಾರತೀಯ ಸ್ಟೇಟ್‌ ಬ್ಯಾಂಕ್‌ ಜತೆ ಕೆಲ ಬ್ಯಾಂಕ್‌ಗಳ ವಿಲೀನ ಮಾಡಿರುವುದರಿಂದ ಹಾನಿಕಾರಕ ಪರಿಣಾಮಗಳಾಗಿವೆ. ಇದರಿಂದ ಸ್ಟೇಟ್‌ ಬ್ಯಾಂಕ್‌ ತನ್ನ ಬ್ಯಾಲೆನ್ಸ್‌ ಶೀಟ್‌ನಲ್ಲಿ ನಷ್ಟ ತೋರಿಸಿದೆ. ಅನೇಕ ಶಾಖೆಗಳನ್ನು ಮುಚ್ಚಲಾಗಿದೆ. ಸಿಬ್ಬಂದಿ ಕೊರತೆ ಎದುರಾಗಿದೆ. ವ್ಯಾಪಾರ ವಹಿವಾಟುಗಳು ಕುಂಠಿತಗೊಂಡಿವೆ.
ಮರು ಪಾವತಿಯಾಗದ ಸಾಲಗಳು ಹೆಚ್ಚಾಗಿವೆ.

ಬ್ಯಾಂಕ್‌ ಆಫ್ ಬರೋಡಾ, ದೇನಾ ಬ್ಯಾಂಕ್‌ ಹಾಗೂ ವಿಜಯ ಬ್ಯಾಂಕ್‌ಗಳ ವಿಲೀನದಿಂದ ಇದೇ ರೀತಿಯ ಪರಿಣಾಮ ಎದುರಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಬ್ಯಾಂಕ್‌ಗಳ ವಿಲೀನದ ಮಾಡುವ ಬದಲು,
ವಿಸ್ತರಣೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ. ಬೇರೆ ದೇಶಗಳಿಗೆ ಹೊಲಿಸಿದರೆ ನಮ್ಮ ದೇಶದಲ್ಲಿ ಬ್ಯಾಂಕ್‌ಗಳ ವಿಸ್ತರಣೆ ಹೆಚ್ಚಾಗಿಲ್ಲ. ಸುಸ್ತಿ ಸಾಲಗಳ ಮರುಪಾವತಿ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡು ಬ್ಯಾಂಕಿಂಗ್‌ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕಿದೆ. ಆದರೆ, ಕೇಂದ್ರ ಸರ್ಕಾರ ವಿಲೀನದ ಮೂಲಕ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ ಎಂದು ದೂರಿದರು. ವಿಲೀನ ಮಾಡುವುದರಿಂದ ಬ್ಯಾಂಕ್‌ಗಳ ಮುಚ್ಚುವಿಕೆ, ಕೆಲಸದ ಅಭದ್ರತೆ ಮತ್ತು ಉದ್ಯೋಗ ವಕಾಶಗಳ ಕೊರತೆ ಉಂಟಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಿಲ್ಲಿಸಿ, ಬ್ಯಾಂಕ್‌ಗಳ ಅಭಿ ವೃದ್ಧಿಯತ್ತ ಗಮನ ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಮಹಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಸ್‌.ಕೆ.ಶ್ರೀನಿವಾಸ್‌, ಯುನೈಟೆಡ್‌ ಫಾರಂ ಆಫ್ ಬ್ಯಾಂಕ್‌ ಯುನಿಯನ್ಸ್‌ನ ಸದಸ್ಯರು ಹಾಗೂ ಇತರೆ ಬ್ಯಾಂಕ್‌ ನೌಕರರು ಹಾಗೂ ಇತರೆ ಸಂಘಟನೆಗಳ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next