Advertisement

ಗ್ರಾಮ ಪಂಚಾಯತ್‌ಗಳ ನೌಕರರ ಮಾಸಿಕ ವೇತನಕ್ಕೆ ತಡೆ

01:31 PM Jun 05, 2023 | Team Udayavani |

ಮಂಗಳೂರು: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನಕ್ಕೆ ತಂದ ಹೊಸ ಸಾಫ್ಟ್ವೇರ್‌ “ಪಂಚತಂತ್ರ 2.0’ದಲ್ಲಿ ಆಸ್ತಿ ದಾಖಲೆ ಅಪ್‌ಡೇಟ್‌ ನೀರೀಕ್ಷಿತ ಮಟ್ಟದಲ್ಲಿ ಆಗದೆ ಗ್ರಾಮ ಪಂಚಾಯತ್‌ ನೌಕರರ ಮಾಸಿಕ ವೇತನಕ್ಕೆ ತಡೆಯಾಗಿದೆ.

Advertisement

ಹೊಸ ಸಾಫ್ಟ್ವೇರ್‌ ಮೂಲಕವೇ ಆಸ್ತಿ ದಾಖಲೀಕರಿಸುವಂತೆ ಇಲಾಖೆಯಿಂದ ಸೂಚನೆ ಬಂದಿತ್ತು. ಆದರೆ ಅಲ್ಲಿ ಎದುರಾದ ಹಲವು ಸಮಸ್ಯೆಗಳಿಂದಾಗಿ ದಾಖಲೀಕರಣ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಇದನ್ನೇ ನೆಪವಾಗಿರಿಸಿ ಕೊಂಡು ಇಲಾಖೆಯು ಪಂಚತಂತ್ರ 2.0ರಲ್ಲಿ ವೇತನ ಮಾಡದಂತೆ ಪಂಚಾಯತ್‌ ನೌಕರರ “ಎಚ್‌ಆರ್‌ಎಂಎಸ್‌ ಮಾಡ್ಯುಲ್‌’ ಅನ್ನು ಲಾಕ್‌ ಮಾಡಿರುವುದು ನೌಕರರ ಆತಂಕಕ್ಕೆ ಕಾರಣವಾಗಿದೆ.

ಏನಿದು ಸಾಪ್ಟ್ವೇರ್‌ ಕಿರಿಕ್‌?:

ಗ್ರಾ.ಪಂ.ಗಳ ಸಂಪನ್ಮೂಲ ಕ್ರೋಡೀಕರಣ ಮತ್ತು ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಬಲಪಡಿಸಲು/ ಸರಳವಾಗಿಸಲು ರಾಜ್ಯ ಸರಕಾರವು 2008ರಿಂದ ಪಂಚತಂತ್ರ ವೆಬ್‌ ತಂತ್ರಾಂಶ ಸೃಷ್ಟಿಸಿದೆ. 2021-22ರಲ್ಲಿ ಹಳೆಯ ತಂತ್ರಾಂಶವನ್ನು ಬದಲಿಸಿ ಪಂಚತಂತ್ರ 2.0 ಎಂಬ ಹೊಸ ಸಾಫ್ಟ್ವೇರನ್ನು ನೀಡಿತ್ತು. ಅದರಲ್ಲಿ ಆಸ್ತಿ ದಾಖಲೆಗಳು, ಖರ್ಚು ವೆಚ್ಚ, ಹಳೆಯ ಬಾಕಿಯನ್ನು ದಾಖಲಿಸಬೇಕಾಗಿತ್ತು. ಪ್ರತೀ ತಿಂಗಳಿಗೊಮ್ಮೆಯಂತೆ ಪ್ರತೀ ಹಂತದ ಎಂಟ್ರಿಗಳನ್ನು ದಾಖಲಿಸಲು ಬೇರೆ-ಬೇರೆ ತೆರನಾಗಿ ಸಾಫ್ಟ್ವೇರ್‌ ವಿನ್ಯಾಸಗೊಳಿಸುವ ಪರಿಣಾಮ ಹಾಗೂ ತಂತ್ರಾಂಶವು ಹಲವು ಬಾರಿ ತಾಂತ್ರಿಕ ಸಮಸ್ಯೆಗೆ ಒಳಗಾಗಿ ನಿರೀಕ್ಷಿತ ಮಟ್ಟದಲ್ಲಿ ಅಪ್‌ಡೇಟ್‌ ಆಗಿಲ್ಲ ಎನ್ನುತ್ತಾರೆ ನೌಕರರು.

ವೇತನಕ್ಕೆ ತಡೆ ನ್ಯಾಯವೇ?:

Advertisement

ಹೊಸ ಸಾಫ್ಟ್ವೇರ್‌ನಲ್ಲಿ ಎಲ್ಲ ಎಂಟ್ರಿಗಳನ್ನು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಲಾಗಿನ್‌ ಮೂಲಕವೇ ಕ್ಲರ್ಕ್‌/ಡಾಟಾ ಎಂಟ್ರಿ ಆಪರೇಟರ್‌ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಪಂಚಾಯತ್‌ನಲ್ಲಿ ಪಿಡಿಒ ಅಗತ್ಯ. ಆದರೆ ಕ್ಷೇತ್ರ ಭೇಟಿ, ವಿವಿಧ ಮೀಟಿಂಗ್‌ಗಳಿಗೆ ಅವರು ಹೋದಾಗ ಎಂಟ್ರಿ ಸಾಧ್ಯವಾಗುತ್ತಿಲ್ಲ. ಜತೆಗೆ 1 ಎಂಟ್ರಿಗೆ 30 ನಿಮಿಷ ಅಗತ್ಯ. ಎರಡು ಪಂಚಾಯತ್‌ಗಳ ಪ್ರಭಾರ ಹೊತ್ತಿರುವ ಪಿಡಿಒ ಗಳು ಇರುವಲ್ಲಿ ಎಂಟ್ರಿಯೇ ಆಗುತ್ತಿಲ್ಲ. ಇನ್ನೂ ಕೆಲವೆಡೆ ಪಿಡಿಒ ಸಹಕಾರ ಇಲ್ಲದ್ದರಿಂದ ಎಂಟ್ರಿ ತಡವಾಗಿದೆ. ಇದಾವುದನ್ನೂ ಪರಿಗಣಿಸದೆ ಕೇವಲ ಕಾರ್ಮಿಕರ ಸಂಬಳ ತಡೆ ಹಿಡಿಯುವ ಶಿಕ್ಷೆ ನೀಡುವುದು ಯಾವ ನ್ಯಾಯ ಎನ್ನುತ್ತಾರೆ ನೌಕರರು.

ತಾಂತ್ರಿಕ ಸಮಸ್ಯೆಗಿಲ್ಲ ಪರಿಹಾರ!:

ಗ್ರಾಮ ಪಂಚಾಯತ್‌ನ ಎಲ್ಲ ಕಾರ್ಯಗಳನ್ನು ಆನ್‌ಲೈನ್‌ ಮಾಡುವ ಸಲುವಾಗಿ ಎಲ್ಲ ಡಾಟಾಗಳನ್ನು ಹೊಸದಾಗಿ ಎಂಟ್ರಿ ಮಾಡಲಾಗುತ್ತಿದೆ. ಆದರೆ ಹಳೆಯ ಪಂಚತಂತ್ರದಲ್ಲಿ ದಾಖಲಾದ ವಿವರ ಹೊಸ ಸಾಫ್ಟ್ವೇರ್‌ಗೆ ದಾಖಲಿಸುವ ಸಂದರ್ಭ ನಾನಾ ರೀತಿಯ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಕೆಲವೆಡೆ ಆಸ್ತಿ ಲೆಕ್ಕಾಚಾರವೇ ವ್ಯತ್ಯಾಸವಾಗುತ್ತಿದೆ. ತೆರಿಗೆ ವಿವರದಲ್ಲೂ ಗೊಂದಲ ಆಗಿ ಈಗ ತೆರಿಗೆ ಪಾವತಿಸಿದವರಿಗೆ ಕೈಯಲ್ಲಿ ಬರೆದ ರಶೀದಿ ನೀಡಬೇಕಾಗಿದೆ. ಹಲವು ಪಂಚಾಯತ್‌ನಲ್ಲಿ ಸರ್ವರ್‌ ಸಮಸ್ಯೆಯೇ ಬಹುವಾಗಿ ಕಾಡುತ್ತಿದೆ. ಕಳೆದ 1 ತಿಂಗಳು ಚುನಾವಣ ಕಾರ್ಯವೇ ಇತ್ತು. ಆದರೂ ಪಂಚಾಯತ್‌ನ

ಉಳಿದ ಕಾರ್ಯದ ನಡುವೆ ಹಲವು ಸಮಸ್ಯೆಗಳ ನಡುವೆಯೂ ಪಂಚತಂತ್ರ ಅಪ್‌ಡೇಟ್‌ ಮಾಡುತ್ತಿದ್ದರೂ ಕಳೆದ ತಿಂಗಳ ವೇತನಕ್ಕೆ ತಡೆ ಎದುರಾಗುವ ಆತಂಕ ಇದೆ ಎನ್ನುತ್ತಾರೆ ಪಂಚಾಯತ್‌ ಕಾರ್ಮಿಕರೊಬ್ಬರು.

ಪಿಡಿಒ ಬಯೋಮೆಟ್ರಿಕ್‌ ನೀಡದೆ ಪಂಚತಂತ್ರ ಲಾಗಿನ್‌ ಆಗುವುದಿಲ್ಲ. ಆದರೆ ಪಿಡಿಒಗಳು ಕೆಲಸದ ಒತ್ತಡದಿಂದ ಕಚೇರಿಯಲ್ಲಿ ಇಲ್ಲದೆ ಪಂಚತಂತ್ರದ ಪರಿಷ್ಕರಣೆ ಮಾಡಲು ಗ್ರಾ.ಪಂ. ನೌಕರರಿಗೆ ಆಗುತ್ತಿಲ್ಲ. ಸಮಸ್ಯೆಯನ್ನು ಪರಿಗಣಿಸದೆ ಕನಿಷ್ಠ ಕೂಲಿ ಕಾಯ್ದೆಯಡಿ ಕೆಲಸ ನಿರ್ವಹಿಸುತ್ತಿರುವ ಪಂಚಾಯತ್‌ ಕಾರ್ಮಿಕರ ವೇತನವನ್ನು ತಡೆಹಿಡಿಯುವುದು ಅನ್ಯಾಯ. ಇದರಿಂದಾಗಿ ಅವರು ಬೀದಿಗೆ ಬರುವಂತಾಗಿದೆ. – ದೇವಿಪ್ರಸಾದ್‌ ಬೊಳ್ಮ, ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘ

ಪಂಚಾಯತ್‌ ಕಾರ್ಮಿಕರ ವೇತನವನ್ನು ಪಂಚತಂತ್ರದಲ್ಲಿ ತಡೆ ಹಿಡಿದಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಇಲಾಖಾ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. – ಪ್ರಿಯಾಂಕ್‌ ಖರ್ಗೆ, ಸಚಿವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ

-ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next