Advertisement

ನೌಕರರೇ, ಸಾರ್ವಜನಿಕರಿಗೆ ಗೌರವ ಕೊಡಿ

10:24 AM Jan 23, 2018 | Team Udayavani |

ಕಲಬುರಗಿ: ಸರಕಾರಿ ನೌಕರರು ತಮ್ಮ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಗೌರವ ಕೊಡುವ ಮೂಲಕ ನೌಕರಿ ಪ್ರೀತಿಸಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥದಿಂದ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸಲಹೆ ನೀಡಿದರು.

Advertisement

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು ಮುಗ್ಧರು. ಅವರಿಗೆ ಸರಕಾರಿ ವ್ಯವಸ್ಥೆ ಗೊತ್ತಿರುವುದಿಲ್ಲ. ಅವರು ಕಚೇರಿಗಳಿಗೆ ಬಂದಾಗ ಅವರನ್ನು ಗೌರವದಿಂದ ಕಂಡು ಅವರ ಸಮಸ್ಯೆಗಳಿಗೆ ಉತ್ತರ ನೀಡಿದರೆ, ಅದಕ್ಕಿಂತ ಮತ್ತೂಂದು ಕಾಯಕವಿಲ್ಲ. ಜಿಲ್ಲೆಯಲ್ಲಿ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುವ ನಿಟ್ಟಿನಲ್ಲಿ ನಾನು ಆದ್ಯತೆ ನೀಡಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನೌಕರರ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ದೇಹ ಸದೃಢವಾಗಿದ್ದರೆ ಕೆಲಸವೂ ಚಕಾಚಕ್ಕಾಗಿರುತ್ತದೆ. ಆದ್ದರಿಂದ ಸರಕಾರ ನೌಕರರ 40ರ ಆಸುಪಾಸಿನಲ್ಲಿರುವವರು ಬೆಳಗ್ಗೆ ನಿತ್ಯ ದೈಹಿಕ ಕಸರತ್ತು ಮಾಡಿ ಎಂದು ಸಲಹೆ ನೀಡಿದರು. ಇನ್ನೂ ಕ್ರೀಡಾಪಟುಗಳಂತೂ ದಿನವೂ ಶ್ರಮ ವಹಿಸಬೇಕು. ಇದರಿಂದ ಸ್ಪರ್ಧಾ ಮನೋಭಾವ ಹೆಚ್ಚುತ್ತದೆ. ಇದರಿಂದ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.
 
ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಕ್ರೀಡೆಯಿಂದ ನಾವು ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ. ಆದ್ದರಿಂದ ಎಲ್ಲ ನೌಕರರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಕಚೇರಿ ಕೆಲಸವು ತುಂಬಾ ಚೆನ್ನಾಗಿ ನಡೆಯುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆ ಮುಖ್ಯವಾಗುತ್ತದೆ. ಕಠಿಣ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗೂಡಿ ಖುದ್ದಾಗಿ 100 ಮೀಟರ್‌ ಓಟ ಓಡುವ ಮೂಲಕ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡಿದರು. ಇದೇ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಸ್ವೀಪ್‌ ಕಾರ್ಯಕ್ರಮದ ಅಂಗವಾಗಿ ಮತದಾರರ ಪ್ರಮಾಣ ವಚನ ಬೋಧಿಸಿದರು.

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎನ್‌. ಶಶಿಕುಮಾರ, ಐಪಿಎಸ್‌ ಪ್ರೊಬೇಷನರಿ ಅಧಿಕಾರಿ ಮಿಥುನ್‌ಕುಮಾರ, ಹೋಂಗಾರ್ಡ್‌ ಕಮಾಂಡಂಟ್‌ ಸಂತೋಷ ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ, ಯುವ ಸಬಲೀಕರಣ  ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ಆರ್‌.ಜಿ. ನಾಡಗೀರ, ರಾಜ್ಯ ಕ್ರೀಡಾ ಕಾರ್ಯದರ್ಶಿ ನಾಗೇಂದ್ರಪ್ಪ ಅವರಾದ, ವಾಸವದತ್ತಾ ಸಿಮೆಂಟ್‌ ಉಪಾಧ್ಯಕ್ಷ ರಾಜೇಶ ಕಮಿತಕರ, ಅಲ್ಟ್ರಾಟೆಕ್‌ ಸಿಮೆಂಟ್‌ ನ ಪಿ.ಸಿ.ಅಂಬಲಗಿ ಇದ್ದರು.

Advertisement

 ಶೀಘ್ರ ವೇತನ ಪರಿಷ್ಕರಣೆ : ಈಗಾಗಲೇ ರಾಜ್ಯದಲ್ಲಿ 6ನೇ ವೇತನ ಆಯೋಗ ರಚನೆ ಆಗಿದೆ.  ಫೆಬ್ರುವರಿ ಅಂತ್ಯದೊಳಗೆ ಆಯೋಗದ ವರದಿ ಸಲ್ಲಿಕೆಯಾಗಿ, ನೂತನ ವೇತನ ಜಾರಿಗೆ ಬರುವ ಸಂಭವವಿದ್ದು, ಇದೊಂದು ನೌಕರರ  ಬಳಗಕ್ಕೆ ಸಿಹಿ ಸುದ್ದಿಯಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ನೌಕರರಿಗೆ ನೀಡಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಸರಕಾರ ನೀಡುತ್ತಿದೆ. ನೌಕರರು ಖುಷಿಯಾಗಿದ್ದರೆ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬರಲಿವೆ. 
 ಡಾ| ಶರಣಪ್ರಕಾಶ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next