ಮಲೇಬೆನ್ನೂರು: ಕಳೆದ ನಾಲ್ಕು ತಿಂಗಳ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಹೊರಗುತ್ತಿಗೆ ನೌಕರರು ಮಲೇಬೆನ್ನೂರಿನ ನೀರಾವರಿ ನಿಗಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ನಮ್ಮಿಂದ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ವೇತನದ ಬಗ್ಗೆ ಇಇ ಅವರನ್ನು ವಿಚಾರಿಸಿದರೆ ಸಂಬಳ ನೀಡುವುದು ಗುತ್ತಿಗೆದಾರನ ಕೆಲಸ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ನಾವುಗಳು ಸಂಬಳ ಪಡೆಯಲು ಪ್ರತಿ ಬಾರಿಯೂ ಹೋರಾಟ, ಪ್ರತಿಭಟನೆ ಮಾಡಿಯೇ ಸಂಬಳ ಪಡೆಯಬೇಕಾಗಿರುವುದು ದುರ್ದೈವ ಎಂದು ಹೊರಗುತ್ತಿಗೆ ನೌಕರರು ಅರೋಪಿಸಿದರು. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಒಬ್ಬ ವ್ಯಕ್ತಿಯೇ ನಾಲೆ ನಿರ್ವಹಣೆ ಗುತ್ತಿಗೆ ಪಡೆಯುತ್ತಿದ್ದಾನೆ. ಪ್ರತಿ ತಿಂಗಳು ಇಪಿಎಫ್ ಮತ್ತು ಇಎಸ್‌ಐ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಇದರಿಂದ ಪ್ರತಿ ವರ್ಷವೂ ವೇತನ ತಡವಾಗಿ ನೀಡುತ್ತಿದ್ದಾನೆ. ಎಸ್.ಆರ್. ದರದ ಪ್ರಕಾರಪೇಮಂಟ್ ಕೊಡದೆ ಕಡಿಮೆ ಕೊಡುತ್ತಿದ್ದಾನೆ. ಇಂತಹ ಗುತ್ತಿಗೆದಾರರನ್ನು ಅಧಿ ಕಾರಿಗಳು ಇದುವರೆಗೂ ಬ್ಲ್ಯಾ ಕ್ ಲಿಸ್ಟ್‌ಗೆ ಹಾಕುವ ಧೈರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇಇ ಶೆಟ್ಟರ್ ರಾಜಶೇಖರ್ ಆಬಣ್ಣ ಮಾತನಾಡಿ, ಗುತ್ತಿಗೆದಾರ ಸರಿಯಾಗಿ ಹೊರಗುತ್ತಿಗೆ ನೌಕರರಿಗೆ ವೇತನ ನೀಡುವ ಜವಾಬ್ದಾರಿ ಗುತ್ತಿಗೆದಾರನದು. ಗುತ್ತಿಗೆದಾರ ಇಪಿಎಫ್ ಹಾಗೂ ಇಎಸ್‌ಐ ತುಂಬುತ್ತಿಲ್ಲ. ಈ ಕಾರಣದಿಂದ ಗುತ್ತಿಗೆ ನೌಕರರಿಗೆ ಪೇಮೆಂಟ್ ವಿಳಂಬವಾಗುತ್ತಿದೆ. ಗುತ್ತಿಗೆದಾರನ ಕರ್ತವ್ಯ ಲೋಪದ ಕುರಿತು ಮೇಲಧಿ ಕಾರಿಗಳಿಗೆ ವರದಿ ನೀಡಿದ್ದೇವೆ. ಗುತ್ತಿಗೆದಾರನಿಗೆ ನೋಟಿಸ್ ಸಹ ಕೊಟ್ಟಿದ್ದೇವೆ. ಅವನ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಮೇಲಧಿ ಕಾರಿಗಳಿಗೆ ಮಾತ್ರ ಇದೆ ಎಂದರು.
ಜ.6ರೊಳಗೆ ಬಾಕಿ ವೇತನ ಪಾವತಿಯಾಗದಿದ್ದರೆ, ಜ.6ರಿಂದ ಇಲ್ಲಿನ ನೀರಾವರಿ ನಿಗಮ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ. ಶೀಘ್ರದಲ್ಲೇ ಭದ್ರಾ ನಾಲೆಗೆ ನೀರು ಬಿಡುವ ಸಾಧ್ಯತೆಯಿದ್ದು, ನಾವು ನೀರಿನ ನಿರ್ವಹಣೆ ಮಾಡದೆ, ಪ್ರತಿಭಟನೆ ನಡೆಸುತ್ತೇವೆ. ಇದರಿಂದ ಕೊನೆ ಭಾಗಕ್ಕೆ ನೀರು ತಲುಪದೆ, ರೈತರಿಗೆ ತೊಂದರೆಯಾದರೆ, ಮುಂದಾಗುವ ಅವ್ಯವಸ್ಥೆಗೆ ನೀವೇ ಜವಾಬ್ದಾರಿಯಾಗುತ್ತೀರಿ ಎಂದು ಹೊರಗುತ್ತಿಗೆ ನೌಕರರು ಎಚ್ಚರಿಕೆ ನೀಡಿ, ಇಇಗೆ ಮನವಿ ಪತ್ರ ಅರ್ಪಿಸಿದರು.
ಎಸ್‌ಇ, ಹಾಗೂ ಸಿಇಗೆ ನಿಮ್ಮ ಮನವಿ ಪತ್ರ ತಲುಪಿಸುವುದಾಗಿ ಇಇ ಶೆಟ್ಟರ್ ರಾಜಶೇಖರ್ ಆಬಣ್ಣ ಭರವಸೆ ನೀಡಿದರು. ಮಲೇಬೆನ್ನೂರು ಉಪ ವಿಭಾಗದ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎ.ಕೆ.ಆಂಜನೇಯ, ಬಿ.ಶಿವಪ್ಪ, ಆಂಜನೇಯ, ಯಶವಂತ್, ಲಕ್ಕಪ್ಪ, ಮಹೇಶ್, ಹನುಮಂತಪ್ಪ, ಮತ್ತಿತರರು ಇದ್ದರು.