Advertisement

ಮಹಿಳಾ ಉದ್ಯಮಿಗಳಿಗೆ ನೆರವಾದ ಉದ್ಯೋಗಿನಿ ಯೋಜನೆ

12:31 PM Aug 01, 2020 | mahesh |

ಉಡುಪಿ: ರಾಜ್ಯ ಸರಕಾರ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾರಿಗೆ ತಂದ “ಉದ್ಯೋಗಿನಿ’ ಯೋಜನೆಯಡಿ ಜಿಲ್ಲೆಯ 654 ಮಹಿಳೆಯರು ಗುಡಿ ಕೈಗಾರಿಕೆ ಸೇರಿದಂತೆ ನಾನಾ ಸಣ್ಣ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.

Advertisement

ಆರ್ಥಿಕ ಸ್ವಾವಲಂಬಿ
ರಾಜ್ಯ ಸರಕಾರ ಉದ್ಯೋಗಿನಿ ಯೋಜನೆಯನ್ನು 2013ರಲ್ಲಿ ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಆರ್ಥಿಕವಾಗಿ ಸದೃಢರಲ್ಲದ, ಬಡತನ ರೇಖೆಗಿಂತ ಕೆಳಗಿರುವ ಮಹಿಳೆ ಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಸಣ್ಣ ಉದ್ಯಮದಲ್ಲಿ ಆರಂಭ ಮತ್ತು ಚೇತರಿಕೆಗಾಗಿ ನೀಡುವ ಸಾಲ ನೀಡಲಾಗುತ್ತದೆ.

ಮಾನದಂಡ ಏನು?
ಈ ಯೋಜನೆಯ ಪ.ಜಾತಿ, ಪ.ಪಂ. ಫ‌ಲಾನುಭವಿಗಳಿಗೆ ವಾರ್ಷಿಕ 2 ಲ.ರೂ., ಇತರ ವರ್ಗದ ಫ‌ಲಾನುಭವಿ ಗಳಿಗೆ 1.5
ಲ.ರೂ. ಆದಾಯ ಮಿತಿ ಹೊಂದಿರಬೇಕು. 18ರಿಂದ 55 ವರ್ಷದೊಳಗಿನ ಎಲ್ಲ ವರ್ಗದ ಮಹಿಳೆಯರಿಗೆ ಸಾಲ ಒದಗಿಸಲಾಗುತ್ತದೆ. ಶಾಸಕರ ನೇತೃತ್ವದ ಸಮಿತಿ ಮೂಲಕ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

3 ಲ.ರೂ. ಸಾಲ ಸೌಲಭ್ಯ
ಖಾಸಗಿ ಸಂಸ್ಥೆಗಳಿಂದ ಅತೀ ಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆಯುವ ಮಹಿಳಾ ಉದ್ಯಮಿಗಳಿಗೆ ಈ ಯೋಜನೆ ಬಹಳ ಪ್ರಯೋಜನಕಾರಿ. ಫ‌ಲಾನುಭವಿಗಳು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು. ಫ‌ಲಾನುಭವಿಗಳಿಗೆ 3.ಲ.ರೂ ವರೆಗೆ ಸಾಲವನ್ನು ನೀಡಲಾಗುತ್ತಿದ್ದು, ಪ.ಜಾತಿ ಹಾಗೂ ಪ.ಪಂ.ದವರಿಗೆ 1.50 ಲ.ರೂ. ಹಾಗೂ ಇತರರಿಗೆ 90,000 ಸಬ್ಸಿಡಿ ನೀಡಲಾಗುತ್ತದೆ.

ಸಾಲ ಪಡೆಯುವುದು ಹೇಗೆ?
ಜಿಲ್ಲೆಗಳಲ್ಲಿರುವ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಯೋಜನೆ ಕಾರ್ಯಗತವಾಗಲಿದೆ. ತಾಲೂಕು, ಜಿಲ್ಲಾ ಕೇಂದ್ರದ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ನಿಗಮದ ಮೂಲಕ ನಿರೀಕ್ಷಕರು ಅರ್ಜಿಗಳನ್ನು ಸ್ವೀಕರಿಸುವರು.

Advertisement

88 ಸಣ್ಣ ಉದ್ಯಮಕ್ಕೆ ಸಾಲ ಸೌಲಭ್ಯ
ಮನೆಗಳಲ್ಲಿಯೇ ಕುಳಿತು ಮಾಡುವ ವ್ಯಾಪಾರ, ಗುಡಿ ಕೈಗಾರಿಕೆಗಳಾದ ಉಪ್ಪಿನ ಕಾಯಿ ತಯಾರಿಕೆ, ಹಪ್ಪಳ, ಊದು ಬತ್ತಿ, ಬೀಡಿ, ಕುರುಕುಲು ತಿಂಡಿ, ಬಟ್ಟೆ ವ್ಯಾಪಾರ, ಸಣ್ಣ ಪ್ರಮಾಣದ ಗಾರ್ಮೆಂಟ್ಸ್‌ , ಹಿಟ್ಟಿನ ಗಿರಣಿ, ಪೋಟೋ ಸ್ಟುಡಿಯೋ, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ.

ಉತ್ತಮ ಪ್ರತಿಕ್ರಿಯೆ
ಜಿಲ್ಲೆಯಲ್ಲಿ ಉದ್ಯೋಗಿನಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಇದೆ. ಗುರಿಗಿಂತ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆೆ. ಯೋಜನೆಯಡಿ ಶೇ. 85 ರಷ್ಟು ಸಾಲದ ಮರುಪಾವತಿ ಇದೆ.
-ಶೇಸಪ್ಪ , ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next