Advertisement

ಅಂಕದ ಜತೆ ಕೌಶಲ್ಯವಿದ್ದರೆ ನೌಕರಿ ಸುಲಭ

09:21 PM Jul 23, 2019 | Lakshmi GovindaRaj |

ಮೈಸೂರು: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವಕ್ತಿತ್ವ ಮತ್ತು ಕೌಶಲವನ್ನು ರೂಪಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌ ಸಲಹೆ ನೀಡಿದರು.

Advertisement

ರಾಷ್ಟ್ರಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ದೇಜಗೌ ಪ್ರಥಮ ದರ್ಜೆ ಸಂಜೆ ಕಾಲೇಜು ಹಾಗೂ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ವತಿಯಿಂದ ನಗರದ ಜಯಲಕ್ಷ್ಮೀಪುರಂನಲ್ಲಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಎನ್ನೆಸ್ಸೆಸ್‌ ಹಾಗೂ ಕ್ರೀಡಾ ಚಟುವಟಿಕೆ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಠ್ಯ ಚಟುವಟಿಕೆ: ವಿದ್ಯಾರ್ಥಿಗಳು ತರಗತಿ ಮತ್ತು ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗಬಾರದು. ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳಲು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ನಮ್ಮನ್ನು ನಾವು ತೊಡಗಿಸಿಕೊಂಡರೆ ನಮ್ಮ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ನೆಸ್ಸೆಸ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು.

ಕೌಶಲ್ಯ ಅಗತ್ಯ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯಪುಸ್ತಕ ಮತ್ತು ಅಂಕಗಳು ಕೆಲಸಕ್ಕೆ ಬರುವುದಿಲ್ಲ. ಇವುಗಳ ಜೊತೆಗೆ ವ್ಯಕ್ತಿತ್ವ ಮತ್ತು ಕೌಶಲ ಅಗತ್ಯ. ಉತ್ತಮ ವ್ಯಕ್ತಿತ್ವ ಹಾಗೂ ಕೌಶಲ ನಮ್ಮಲ್ಲಿ ರೂಪುಗೊಳ್ಳಲು ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಪದವಿ ಹಂತ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪದವಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ, ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಹೆಜ್ಜೆಯನಿಡಬೇಕು ಎಂದು ಹೇಳಿದರು.

ಮಾನವ ಸಂಪನ್ಮೂಲ: ಇಂದು ಶೇ. 80, 90 ರಷ್ಟು ಅಂಕ ಪಡೆದರೆ ಪ್ರಯೋಜನವಿಲ್ಲ. ಅಂಕದೊಂದಿಗೆ ಕೌಶಲವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ ಪಡೆದ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ನಿಮ್ಮಲ್ಲಿ ಕೌಶವಿದ್ದರೆ ಖಾಸಗಿ ಕೇತ್ರಗಳಲ್ಲಿ ಉದ್ಯೋಗ ಸಿಗುತ್ತದೆ. ದೇಶದಲ್ಲಿ ಶೇ. ಅರ್ಧದಷ್ಟು ಭಾಗ ಯುವ ಸಮುದಾಯವಿದೆ. ಇವರಿಗೆ ಶಿಕ್ಷಣದೊಂದಿಗೆ ಕೌಶಲವೂ ಇದ್ದಿದ್ದರೇ, ಇಡೀ ಜಗತ್ತೇ ನಿಬ್ಬೆರಾಗುವಂತೆ ಸಾಧನೆ ಮಾಡಬಹುದು. ದೇಶದ ಯುವ ಶಕ್ತಿಯನ್ನು ಮಾನವ ಸಂಪನ್ಮೂಲವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

Advertisement

ಪದವಿ ಸೆಮಿಸ್ಟರ್‌ನ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಜೆ. ಶಶಿಧರ ಪ್ರಸಾದ್‌, ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ್‌, ದೇಜಗೌ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲೆ ರೇಣುಕಾ ಮೂರ್ತಿ, ಮಾನಸ ಇತರರು ಉಪಸ್ಥಿತರಿದ್ದರು.

18 ಸಾವಿರ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು: ಮೈಸೂರು ವಿವಿಯಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 18 ಸಾವಿರ ವಿದ್ಯಾರ್ಥಿಗಳು ಎನ್ನೆಸ್ಸೆಸ್‌ನಲ್ಲಿ ಹಾಗೂ 10 ಸಾವಿರ ವಿದ್ಯಾರ್ಥಿಗಳು ಎನ್‌ಸಿಸಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸಕ್ರಿಯರಾಗಿದ್ದರು. ಇದಕ್ಕೆ ಮೈಸೂರು ವಿವಿಯೂ ಪ್ರೋತ್ಸಾಹವನ್ನು ನೀಡುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಸೇವಾ ಮನೋಭಾವ ಹಾಗೂ ಸಾಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಮನೋಭಾವ ಬೆಳೆಸುವ ಮೂಲಕ ವ್ಯಕ್ತಿತ್ವವು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next