ಕಲಬುರ್ಗಿ: ನೆಲದ ವೈಚಾರಿಕ ಕವಿ ಕುವೆಂಪು ಕರೆಯಂತೆ ವಿಶ್ವ ಮಾನವರಾಗಲು ಜಾತಿ, ಧರ್ಮ, ಮೌಡ್ಯಾಚಾರಣೆಗಳ ಕಟ್ಟುಪಾಡುಗಳಿಂದ ಹೊರ ಬರಬೇಕು. ಅಸಮಾನತೆ ಬಂಧನಗಳ ಜಡತ್ವದಿಂದ ಬಿಡುಗಡೆ ಆಗಬೇಕೆಂದು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಹೇಳಿದರು.
ನಗರದ ಡಾ| ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನಲ್ಲಿ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ “ಕುವೆಂಪು ಬದುಕು-ಸಾಹಿತ್ಯ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಮತಗಳಿವೆ. ಇವುಗಳ ನಡುವೆಯೂ ನಮ್ಮದು “ಮನುಜ ಮತ ವಿಶ್ವಪಥ’ ಆಯ್ಕೆಯಾಗಬೇಕು. ಪೂರ್ಣ ದೃಷ್ಟಿ, ಸಮನ್ವಯ ಮತ್ತು ಸರ್ವೋದಯ ವಿಚಾರಗಳನ್ನು ಕುವೆಂಪು ನಮಗೆ ಆಸ್ತಿಯಾಗಿ ಕೊಟ್ಟಿದ್ದಾರೆ. ಗುಡಿ, ಚರ್ಚ್, ಮಸೀದಿಗಳಲ್ಲಿ ದೇವರಿಲ್ಲ, ನೇಗಿಲ ಯೋಗಿಯ ಮನೆಯಲ್ಲಿ ದೇವರಿದ್ದಾನೆ ಎಂದು ಹೇಳುವ ಮೂಲಕ ಕುವೆಂಪು ಕಾಯಕ ತತ್ವ ಎತ್ತಿ ಹಿಡಿದಿದ್ದಾರೆ. ನಾನು ನನಗಾಗಿ ಎನ್ನದೆ ನಾವು ನಮಗಾಗಿ ಎಂದು ಬದುಕುವ ಪರಿಕಲ್ಪನೆ ಕೊಟ್ಟು ಸಂಪ್ರದಾಯ ಭೇದಗಳ ಗೋಡೆಗಳನ್ನು ತಿರಸ್ಕರಿಸಿದ್ದಾರೆ ಎಂದರು.
ಆವಿಷ್ಕಾರ ವೇದಿಕೆ ಜಿಲ್ಲಾ ಸಂಚಾಲಕಿ ಅಶ್ವಿನಿ ಮಾತನಾಡಿ, ಮತ ಮೌಡ್ಯಗಳಲ್ಲಿ ಹಂಚಿ ಹೋಗಿರುವ ಜನರಿಗೆ ವೈಚಾರಿಕ ಚಿಂತನೆಗಳನ್ನು ಪರಿಚಯಿಸುವ ಅವಶ್ಯಕತೆಯಿದೆ. ಸಮಾಜದ ಹಿನ್ನೆಡೆಗೆ ಕಾರಣವಾಗುತ್ತಿರುವ ಸಾಂಪ್ರದಾಯಿಕ ಬಂಧನಗಳಿಂದ ವಿದ್ಯಾರ್ಥಿಗಳು, ಯುವಜನರು ಬಿಡುಗಡೆಯಾಗಬೇಕು. ಉತ್ತಮ ಕಲೆ, ಸಾಹಿತ್ಯ, ಸಿನೆಮಾಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಸಾಂಸ್ಕೃತಿಕ ವಾತಾವರಣ ಶುಚಿಯಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪೀಪಲ್ಸ್ ಏಜುಕೇಷನ್ ಸಂಸ್ಥೆ ಕಾರ್ಯದರ್ಶಿ ಡಾ| ಮಾರುತಿರಾವ್ ಡಿ.ಮಾಲೆ ಕುವೆಂಪು ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು. ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಚಾರ್ಯ ಗಿರೀಶ ಎಂ. ಮೀಶಿ, ಉಪನ್ಯಾಸಕ ಡಾ| ವಸಂತ ನಾಸಿ, ಆವಿಷ್ಕಾರದ ಪುಟ್ಟರಾಜ ಲಿಂಗಶೆಟ್ಟಿ, ಮಹಾದೇವಿ ನಾಗೂರ, ಶ್ರೀಶರಣ ಹೊಸಮನಿ, ಎಂ. ಹೇರೂರ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಚಾರಗಳನ್ನು ಮೆಚ್ಚುವ ನಾವು ಜಾತಿ, ವರ್ಗ, ವರ್ಣ ಭೇದಗಳಿಲ್ಲದ ವೈಜ್ಞಾನಿಕ ಮನೋಭಾವದಡಿ ಬದುಕು ರೂಢಿಸಿಕೊಂಡಾಗ ಮಾತ್ರ ಸರ್ವೋದಯ ಸಮಾಜ ಉದಯವಾಗಲು ಸಾಧ್ಯ.
–ಡಾ| ವಿಕ್ರಮ ವಿಸಾಜಿ, ಪ್ರಾಧ್ಯಾಪಕ, ಸಿಯುಕೆ