Advertisement

ಮಳೆನೀರು ಬಳಕೆಗೆ ಒತ್ತು ನೀಡಿ

09:13 AM Jul 30, 2019 | Team Udayavani |

ಧಾರವಾಡ: ಕರ್ನಾಟಕದಲ್ಲಿ ಸೀಮಿತ ದಿನಗಳ ಅವಧಿಯಲ್ಲಿ ಮಳೆ ಆಗುತ್ತಿದ್ದು, ಅದನ್ನು ವರ್ಷವಿಡೀ ಬಳಸಲು ಅನುಕೂಲವಾಗುವಂತೆ ಜಲ ಸಂರಕ್ಷಣೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹೇಳಿದರು.

Advertisement

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ(ವಾಲ್ಮಿ)ಯಲ್ಲಿ ಜಲಾಮೃತ ಯೋಜನೆಯ ತಾಂತ್ರಿಕ ಕೈಪಿಡಿ ಸಿದ್ಧಪಡಿಸುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದಶಕಗಳಿಂದ ಬರಗಾಲ ಹಾಗೂ ಸತತ ಜಲ ಸಂಕಷ್ಟದಿಂದ ರಾಜ್ಯ ಬಳಲುತ್ತಿದ್ದು, ಇದಕ್ಕೆ ಪರಿಹಾರವಾಗಿ 2019ನ್ನು ಜಲ ವರ್ಷ ಎಂದು ಸರಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಲಾಮೃತ ಎಂಬ ಯೋಜನೆಯನ್ನು ಘೋಷಿಸಿ ಅನುಷ್ಠಾನಗೊಳಿಸುತ್ತಿದೆ. ಇಲ್ಲಿಯವರೆಗೆ ಜಲ ಸಂಕಷ್ಟವನ್ನು ಪರಿಹರಿಸುವ ಮಾತುಗಳೇ ಆಗಿವೆ. ಆದರೆ ಇದೀಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಲಾಮೃತ ಯೋಜನೆ ರೂಪದಲ್ಲಿ ಒಂದು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದರು.

ಜಲ-ನೆಲ ಸಂರಕ್ಷಣೆಯಲ್ಲಿ ಲಭ್ಯವಿರುವ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಜೊತೆಗೆ ಸಮುದಾಯ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜಲಾಮೃತ ಕುರಿತಂತೆ ಸಮಾಜದ ವಿವಿಧ ಸಮುದಾಯಗಳ ಅವಶ್ಯಕತೆಗಳನ್ನು ಪೂರೈಸಲು ಕೆರೆಗಳ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣ, ಜಲ ಸಾಕ್ಷರತೆ, ಕುಡಿಯುವ ನೀರು, ಅರಣ್ಯೀಕರಣ ಮುಂತಾದ ವಿಷಯಗಳನ್ನು ಒಳಗೊಂಡು ತಾಂತ್ರಿಕ ಕೈಪಿಡಿ ತಯಾರಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದು ತಿಳಿಸಿದರು.

ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ಜಲ ಸಂಕಷ್ಟ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅದು ಕೇವಲ ಮಾಹಿತಿ ವಿನಿಮಯ ಹಾಗೂ ಚರ್ಚೆಯ ವಿಷಯವಾಗಿತ್ತು. ಇದೀಗ ಕರ್ನಾಟಕ ರಾಜ್ಯ ಸರ್ಕಾರವು ಜಲಾಮೃತ ಯೋಜನೆ ಮೂಲಕ ಒಂದು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜಲಾಮೃತ ಯೋಜನೆ ದೇಶಕ್ಕೆ ಮಾದರಿಯಾಗಲಿದೆ. ಯೋಜನೆಯು ಕೇವಲ ಸರ್ಕಾರದ ಯೋಜನೆಗಳಲ್ಲಿ ಒಂದಾಗಿರದೇ ಜನರನ್ನು ಒಳಗೊಂಡು ಕರ್ನಾಟಕದ ಜಲ ಸುಭದ್ರತೆಗೆ ನಾಂದಿಯಾಗಲಿದೆ ಎಂದರು.

Advertisement

ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹಾಗೂ ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿದರು. ಜಿಪಂ ಸಿಇಒ ಬಿ.ಸಿ. ಸತೀಶ, ಮುಖ್ಯ ಎಂಜಿನಿಯರ್‌ ಪ್ರಕಾಶಕುಮಾರ ಸೇರಿದಂತೆ 25 ಜನ ವಿಷಯ ತಜ್ಞರು, ಗ್ರಾಪಂ ಅಧ್ಯಕ್ಷರು, ಮಹಿಳೆಯರು ಹಾಗೂ ವಾಲ್ಮಿ ಸಿಬ್ಬಂದಿ ಇದ್ದರು. ಆರ್‌.ಎಂ. ಭಟ್ ಸ್ವಾಗತಿಸಿದರು. ಮಹದೇವಗೌಡ ಹುತ್ತನಗೌಡರ ನಿರೂಪಿಸಿದರು. ಕೃಷ್ಣಾಜಿರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next