ರಾಯಚೂರು: ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದ್ದು, ಅಧಿಕಾರಿಗಳು ಹೆಚ್ಚಿನ ಮಟ್ಟದಲ್ಲಿ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.100ರಷ್ಟು ಗುರಿ ತಲುಪಬೇಕು ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಕೈ ತುಂಬ ಕೆಲಸ ನೀಡಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಇದು ಅತ್ಯಂತ ಉತ್ತಮ ಯೋಜನೆಯಾಗಿದ್ದು, ಜಿಲ್ಲಾದ್ಯಂತ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ ಅಗತ್ಯವಿರುವ ರೈತರಿಗೆ ಸಕಾಲಕ್ಕೆ ಟ್ರ್ಯಾಕ್ಟರ್, ಟಿಲ್ಲರ್, ರೂಟ್ ವೇಟರ್‌ನಂತಹ ಯಂತ್ರಗಳು ಸಿಗುವ ವ್ಯವಸ್ಥೆ ಮಾಡಿಬೇಕು. ಇಲಾಖೆಯ ಸೌಲಭ್ಯಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಂಸದರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಜಲ ಜೀವನ್ ಮಿಶನ್ ಯೋಜನೆ ಆರಂಭಿಸಿದೆ. ಇದರಡಿ ಪ್ರತಿ ಗ್ರಾಮಕ್ಕೂ ಪೈಪ್‌ಲೈನ್ ಅಳವಡಿಸಿ ನಳ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ| ರಾಮಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರದಿಂದ ಲಸಿಕಾ ಅಭಿಯಾನ ಜಾರಿಗೊಳಿಸಿದ್ದು, ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಅಥವಾ ಹತ್ತಿರದ ಕೋವಿಡ್-19ರ ಲಸಿಕಾ ಕೇಂದ್ರದಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯುವಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲಿದೆ. ಪ್ರಥಮ ಡೋಸ್ ಶೇ.96ಕ್ಕಿಂತ ಹೆಚ್ಚು ಹಾಗೂ ದ್ವಿತೀಯ ಡೋಸ್ ಶೇ.71ರಷ್ಟು ಗುರಿ ತಲುಪಲಾಗಿದೆ ಎಂದರು.
ಶಾಸಕರಾದ ಡಾ| ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ದಿಶಾ ಸಮಿತಿಯ ನಾಮನಿರ್ದೇಶನ ಸದಸ್ಯರಾದ ನಾಗಪ್ಪ ನಾಯಕ ವಕೀಲರು, ಸಂಗೀತಾ ಜಗತಾಜ್, ಕೃಷ್ಣ ರಾಠೊಡ, ಡಿಸಿ ಡಾ| ಅವಿನಾಶ್ ರಾಜೇಂದ್ರ ಮೆನನ್, ಜಿಪಂ ಸಿಇಒ ನೂರ್ ಜಹಾರ್ ಖಾನಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.