Advertisement

ಆಸ್ತಿಗಿಂತ ಜ್ಞಾನಕ್ಕೆ ಒತ್ತು ನೀಡಿ

12:33 PM Jun 16, 2018 | Team Udayavani |

ಕಲಬುರಗಿ: ಮಕ್ಕಳಿಗಾಗಿ ಪಾಲಕರು ಹಾಗೂ ಪೋಷಕರು ಆಸ್ತಿ  ಸಂಪಾದಿಸುವ ಬದಲು ಅವರ ಜ್ಞಾನಾಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ಶಿಕ್ಷಣ ತಜ್ಞ ಹಾಗೂ  ಬೆಂಗಳೂರಿನ ಅಕಾಡೆಮಿ ಆಫ್‌ ಕ್ರಿಯೆಟಿವ್‌ ಟೀಚಿಂಗ್‌ ಚೇರ್ಮನ್‌ ಡಾ| ಗುರುರಾಜ ಕರ್ಜಗಿ ಸಲಹೆ ನೀಡಿದರು.

Advertisement

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಆರಂಭವಾದ ಎಸಿಟಿ-ಎನ್‌ವಿ ಇಂಟರ್‌ ನ್ಯಾಶನಲ್‌ ಸ್ಕೂಲ್‌ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳಿಗೆಂದು ಸಂಪಾದಿಸಲಾದ ಆಸ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಮಕ್ಕಳಿಗೆ ನೀಡಿದ ಜ್ಞಾನದ ಆಸ್ತಿಯನ್ನು ಯಾರೂ ಕಸಿಕೊಳ್ಳಲಾಗದು ಎಂದರು.

ಮಕ್ಕಳಿಗೆ ತಮ್ಮ ಕುಟುಂಬ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ದಿಸೆಯಲ್ಲಿ ತಿಳಿವಳಿಕೆ ಮೂಡಿಸುವುದು
ಅಗತ್ಯವಾಗಿದೆ. ಮನೆ, ಸಮಾಜ ಹಾಗೂ ದೇಶದ ಬಗ್ಗೆ ಮಕ್ಕಳಲ್ಲಿ ಪ್ರೀತಿ ಬೆಳೆಸಬೇಕು. ಮಕ್ಕಳಿಗೆ ದೇಶಪ್ರೇಮ
ಕಲಿಸದ ಶಿಕ್ಷಣ ಯಾವುದೇ ರೀತಿಯಲ್ಲೂ ಉಪಯೋಗವಿಲ್ಲದ್ದು ಎಂದರು. ಶಿಕ್ಷಣದ ಅರ್ಥ ವಿಶಾಲವಾದದ್ದು, ಅದನ್ನು ಸಂಕುಚಿತವಾಗಿ ಬಳಕೆ ಮಾಡಿಕೊಳ್ಳಬಾರದು. ಶಿಕ್ಷಣ ಕೇವಲ ನನಗೆ ಮಾತ್ರ ಎಂದು ತಿಳಿಯಬಾರದು. ಅದು ಇತರರಿಗೂ ಒಳಿತು ಮಾಡುವ ಉತ್ತಮ ಉದ್ದೇಶ ಹೊಂದಿದೆ ಎಂದು ಹೇಳಿದರು.

ಎನ್‌.ವಿ. ಶಿಕ್ಷಣ ಸಂಸ್ಥೆಯಲ್ಲಿ ಮಹಾನ್‌ ನಾಯಕರು ವ್ಯಾಸಾಂಗ ಮಾಡಿದ್ದಾರೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌, ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಇಲ್ಲಿಯೇ ಓದಿದವರು. ಸಂಸ್ಥೆಯಲ್ಲಿ
ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ದೇಶದ ರಾಷ್ಟ್ರಪತಿ, ಪ್ರಧಾನಿ, ವೈದ್ಯ, ವಿಜ್ಞಾನಿ ಇತ್ಯಾದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು. ಸಂಸ್ಥೆ ಶತಮಾನಗಳ ಇತಿಹಾಸ ಹೊಂದಿದೆ. ಅಂತಾರಾಷ್ಟ್ರೀಯ ಶಾಲೆ ಈಗ ಆರಂಭವಾಗಿದೆ. ಇದರರ್ಥ ಪ್ರಪಂಚದ ಜ್ಞಾನ ಒಂದೆ ಕಡೆ ಸಿಗುವುದು ಎಂದರ್ಥ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ| ಬಿ. ಸರ್ವೋತ್ತಮರಾವ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಡಾ| ಗೌತಮ
ಜಾಹಿಗೀರದಾರ, ಖಜಾಂಚಿ ಶ್ರೀಕಾಂತ ಕುಲಕರ್ಣಿ, ದೇವರಾಜ ದೇಶಮುಖ, ಅಕಾಡೆಮಿ ಆಫ್‌ ಕ್ರಿಯೆಟಿವ್‌
ಟೀಚಿಂಗ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಸುನೀತಾ ಫಡ್ನಿಸ್‌, ಪ್ರಾಂಶುಪಾಲ ನವೀನ ಭಟ್‌ ಭಾಗವಹಿಸಿದ್ದರು.
ಶೈಲಜಾ ಪರಿಚಯಿಸಿದರು, ನಿತಾಲಿ ಸ್ವಾದಿ ನಿರೂಪಿಸಿದರು, ವಿದ್ಯಾರ್ಥಿಗಳು, ಪಾಲಕರು, ಪೋಷಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next