Advertisement

ಪಠ್ಯೇತರ ಚಟುವಟಿಕೆಗೂ ಮಹತ್ವ ಕೊಡಿ

09:34 AM Sep 26, 2017 | |

ಕಲಬುರಗಿ: ಮಕ್ಕಳು ಸರ್ವಾಂಗೀಣವಾಗಿ ವಿಕಸನ ಹೊಂದಬೇಕಾದರೆ ಪಠ್ಯಕ್ರಮಕ್ಕೆ ನೀಡಿದಷ್ಟೆ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಂಸ್ಕೃತಿಕ, ಕ್ರೀಡೆಗೂ ಕೊಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಹೇಳಿದರು. 

Advertisement

ನಗರದ ಸಂತ್‌ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 2017-18ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಮತ್ತು ವಿಜ್ಞಾನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚಿನ ಅಂಕಗಳು ಪಡೆಯುತ್ತಿದ್ದಾರೆ. ಆದರೆ ಪಠ್ಯೇತರ ಚಟುವಟಿಯಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಶಿಕ್ಷಕ ಸಮುದಾಯ ಮಕ್ಕಳಿಗೆ ಸೈಕ್ಷಣಿಕ ಚಟುವಟಿಕೆ ಜತೆಯಲ್ಲಿಯೆ ಕಲೆ, ಸಾಹಿತ್ಯ, ಪರಿಸರ, ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರದ ಬಗ್ಗೆಯೂ ಅರಿಯಲು ಅವರನ್ನು ಪ್ರೇರೇಪಿಸಿ ಅವರಲ್ಲಿನ ಸೂಪ್ತ ಪ್ರತಿಭೆ ಹೊರಹೊಮ್ಮಲು ಕಾರಣರಾಗಬೇಕು. ಇತರೆ ಭಾಗಕ್ಕೆ ಹೋಲಿಸಿದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಮಕ್ಕಳಲ್ಲಿ ಭಾಷಾ ಜ್ಞಾನದ ಕೊರತೆಯಿದೆ. ಉದ್ಯೋಗ-ಸಂದರ್ಶನದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಇರುವುದರಿಂದ ಭಾಷಾ ಕೌಶಲ್ಯ ಹೆಚ್ಚಿಸುವತ್ತ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರ ಪ್ರತಿನಿಧಿ ಸುವ ಶಾಸಕರು ಶಿಕ್ಷಣ ಮತ್ತು ಶಿಕ್ಷಕರ ಅನೇಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸೆ. 27ರಂದು ಸಭೆ ಸೇರಲಿದ್ದೇವೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಜಿಲ್ಲೆಯ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಆಯ್ಕೆಗೊಂಡವರು ರಾಜ್ಯ ಮಟ್ಟಕ್ಕೆ ನಂತರ ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ಹೇಳಿದರು. 

Advertisement

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಅವರು ಡೋಲಕ್‌ ಬಾರಿಸುವ ಮೂಲಕ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿದರು.

ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಬಿ. ಗುತ್ತೇದಾರ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ| ಶಿವಲಿಂಗಪ್ಪ ಗೌಳೆ, ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಇದ್ದರು. ವಿಷಯ ಪರಿವೀಕ್ಷಕ ಯುವರಾಜ ಗಾದಿ ಸ್ವಾಗತಿಸಿದರು. ಶಿವಶಂಕ್ರಪ್ಪ ಮಂಠಾಳ ವಂದಿಸಿರು. ಜಿಲ್ಲಾ ವಿಷಯ ಪರೀವೀಕ್ಷಕ ಎಸ್‌.ಪಿ.ಸುಳ್ಳದ ನಿರೂಪಿಸಿದರು. 

ಮಿಲೇನಿಯಮ್‌ ಶಾಲೆಯ ಕು. ಲಾವಣ್ಯ ಅವರಿಂದ ಭರತನಾಟ್ಯ ಮತ್ತು ಅಫಜಲಪುರ ತಾಲೂಕು ಇಂಗಳಿಗೆ ಸರ್ಕರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next