ಯಾದಗಿರಿ: ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದಿದೆ. ಕಳೆದ ಮೂರು ವರ್ಷಗಳಿಂದ ಎಲ್ಲ ವಾರ್ಡ್‌ಗಳ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಕಾಮಗಾರಿ ಕೈಗೊಂಡು ಅಭಿವೃದ್ಧಿಗೆ ಒತ್ತು ನೀಡಿರುವುದಾಗಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ತಿಳಿಸಿದರು.
ನಗರದ ವಾರ್ಡ್ 5ರಲ್ಲಿ ನಗರೋತ್ಥಾನ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಆಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡು ನಗರಕ್ಕೆ ಹೊಸ ಕಾಯಕಲ್ಪ ನೀಡುವ ಗುರಿ ಹೊಂದಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಇರುವುದರಿಂದ ಸರ್ಕಾರದ ವಿವಿಧ ಇಲಾಖೆಗಳಿಂದ ಹೆಚ್ಚಿನ ಅನುದಾನ ಹಾಗೂ ಕಾಮಗಾರಿಗಳನ್ನು ಮತಕ್ಷೇತ್ರಕ್ಕೆ ತರುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಕೂಡ ಕಾಳಜಿ ವಹಿಸುತ್ತೇನೆ ಎಂದರು. ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು.
ಅಧಿಕಾರಿಗಳು ನಿಗಾವಹಿಸಿ ಜನರಿಗೆ ಬಹುಕಾಲ ಉಪಯೋಗ ಆಗುವಂತಹ ಕಾಮಗಾರಿ ಅನುಷ್ಠಾನಗೊಳ್ಳಲು ಎಚ್ಚರಿಗೆ ನೀಡಬೇಕು ಎಂದು ಸಲಹೆ ನೀಡಿದರು. ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಯುಡಾ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಸದಸ್ಯೆ ಲಲಿತಾ ಅನಪೂರ್, ಮಂಜುನಾಥ ಜಡಿ, ಮಾರುತಿ ಕಲಾಲ್, ಶರಣು ಆಸನಾಳ, ನಗರಸಭೆ ಸಹಾಯಕ ಅಭಿಯಂತರ
ರಾಕೇಶರಡ್ಡಿ, ಇಂಜಿನಿಯರ್ ನಿಂಗಾರಡ್ಡಿ, ರಾಜು ಸೈದಾಪುರ್, ಎಸ್.ಆರ್. ಕನ್ ಸ್ಟ್ರಕ್ಷನ್ ಕಂಪನಿಯ ನಾಗರಾಜ, ವಸಂತ ಸೇರಿದಂತೆ ಇತರರು ಇದ್ದರು.