Advertisement

ಗ್ರಾಮೀಣಕ್ಕೆ ಒತ್ತು; ಎಲ್ಲರಿಗೂ ವಿದ್ಯುತ್ತು

01:04 AM Jul 06, 2019 | Team Udayavani |

ರಾಷ್ಟ್ರಪಿತ ಮಹಾತ್ಮಾಗಾಂಧಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ, ಗಾಂಧಿಯವರ ‘ಗ್ರಾಮ ಸ್ವರಾಜ್‌’ ಪರಿಕಲ್ಪನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಾದ ‘ಉಜ್ವಲ ಯೋಜನೆ’ ಹಾಗೂ ‘ಸೌಭಾಗ್ಯ ಯೋಜನೆ’ಗಳು ಗ್ರಾಮೀಣ ಜನರ ಉತ್ತಮ ಬದುಕಿಗೆ ಅವಕಾಶ ಕಲ್ಪಿಸಿವೆ. ‘ಉಜ್ವಲ’ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 7 ಕೋಟಿಗೂ ಅಧಿಕ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಆ ಮೂಲಕ ಗ್ರಾಮೀಣ ಭಾಗದ ಜನರು ಸ್ವಚ್ಛ ರೀತಿಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ಕಲ್ಪಿಸುವ ಮೂಲಕ, ಅವರ ಆರೋಗ್ಯಕ್ಕೆ ಮಹತ್ವ ನೀಡಲಾಗಿದೆ.

Advertisement

ಅಲ್ಲದೆ, 2022ರ ವೇಳೆಗೆ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು. ಅಂತ್ಯೋದಯ ಯೋಜನೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಸರ್ಕಾರದ ಸೌಲಭ್ಯ ಪಡೆಯಲು ಬಯಸುವ ಎಲ್ಲಾ ಕುಟುಂಬಗಳಿಗೆ ಈ ಯೋಜನೆ ತಲುಪಲಿದೆ ಎಂದು ಸಚಿವರು ತಿಳಿಸಿದರು.

ಮಿನರೇಗಾ, ಪಿಎಂಎವೈಗೆ ಅನುದಾನ ಕಡಿತ:
ಗ್ರಾಮೀಣ ಭಾಗದ ಅಭಿವೃದ್ಧಿಯತ್ತ ತಮ್ಮ ಚಿತ್ತ ಹರಿಸಿರುವ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 1.17 ಲಕ್ಷ ಕೋಟಿ ರೂ.ಗಳ ಅನುದಾನ ಘೋಷಿಸಿದ್ದಾರೆ. ಕಳೆದ ಬಾರಿ ಇದಕ್ಕೆ 1.12 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.

ಆದರೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮಿನರೇಗಾ) ಹಾಗೂ ಪ್ರಧಾನಮಂತ್ರಿ ಆವಾಸ ಯೋಜನೆ (ಪಿಎಂಎವೈ-ಗ್ರಾಮೀಣ)ಗಳಿಗೆ ನೀಡಲಾಗುವ ಅನುದಾನವನ್ನು ಕಡಿತಗೊಳಿಸಿದ್ದಾರೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು 60 ಸಾವಿರ ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಇದಕ್ಕಾಗಿ 61,084 ಕೋಟಿ ರೂ.ಮೀಸಲಿಡಲಾಗಿತ್ತು. ಪ್ರಧಾನಮಂತ್ರಿ ಆವಾಸ ಯೋಜನೆಯ ಅನುದಾನವನ್ನು 19 ಸಾವಿರ ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಕಳೆದ ಬಾರಿ ಯೋಜನೆಗೆ 19,900 ಕೋಟಿ ರೂ.ಮೀಸಲಿಡಲಾಗಿತ್ತು.

‘ಪ್ರಧಾನ ಮಂತ್ರಿ ಆವಾಸ್‌ ಯೋಜನಾ-ಗ್ರಾಮೀಣ (ಪಿಎಂಎವೈ-ಜಿ)ಯಡಿ 2022ರ ವೇಳೆಗೆ ಪ್ರತಿ ಕುಟುಂಬಕ್ಕೂ ವಸತಿ ಸೌಕರ್ಯ ಕಲ್ಪಿಸಲಾಗುವುದು.

Advertisement

ರಸ್ತೆಗಳ ಉನ್ನತೀಕರಣ
ಗ್ರಾಮೀಣ ಭಾಗದ ಸಂಪರ್ಕ ಸೇತುವಾಗಿರುವ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ), ಗ್ರಾಮೀಣ ಭಾಗದ ಜನರ ಆರ್ಥಿಕ-ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲದ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ರಸ್ತೆಗಳ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ನಡೆದಿದೆ. ಕಳೆದ 1 ಸಾವಿರ ದಿನಗಳ ಅವಧಿಯಲ್ಲಿ ಪ್ರತಿನಿತ್ಯ 130-135 ಕಿ.ಮೀ.ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಉನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪಿಎಂಜಿಎಸ್‌ವೈ ಯೋಜನೆಯಡಿ ಪರಿಸರ ಸ್ನೇಹಿ ತಂತ್ರಜ್ಞಾನ (ಗ್ರೀನ್‌ ಟೆಕ್ನಾಲಜಿ) ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ತ್ಯಾಜ್ಯ ಪ್ಲ್ರಾಸ್ಟಿಕ್‌ ಹಾಗೂ ತಂಪು ಮಿಶ್ರಿತ ತಂತ್ರಜ್ಞಾನ ಬಳಸಿ 30 ಸಾವಿರ ಕಿ.ಮೀ.ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ಇಂಗಾಲ ಬಳಕೆಯ ಪ್ರಮಾಣದಲ್ಲಿ ಗಣನೀಯ ಕಡಿತ ಕಂಡು ಬಂದಿದೆ ಎಂದು ಸಚಿವರು ತಿಳಿಸಿದರು. ಗ್ರಾಮೀಣ ಭಾಗದ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಕಂಡು ಬರುತ್ತಿದೆ. ಈ ದಿಸೆಯಲ್ಲಿ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ಉನ್ನತೀಕರಣಗೊಳಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ, ಪಿಎಂಜಿಎಸ್‌ವೈ-3ರಡಿ ಮುಂದಿನ 5 ವರ್ಷಗಳ ಅವಧಿಯಲ್ಲಿ 1,25,000ಕಿ.ಮೀ. ರಸ್ತೆಗಳ ಉನ್ನತೀಕರಣಕ್ಕಾಗಿ 80,250 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next