Advertisement

ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಒತ್ತು: ಅಂಗಡಿ

11:00 PM Oct 22, 2019 | Team Udayavani |

ವಿಜಯಪುರ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಸ್ಫೋಟ ಪ್ರಕಟರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ವಿಶೇಷ ತನಿಖೆ ನಡೆದಿದೆ. ಇದರ ಹೊರತಾಗಿಯೂ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆಗೂ ವಿಶೇಷ ಒತ್ತು ನೀಡುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಕೊಪ್ಪಳ-ಹೊಸಪೇಟೆ ಮಾರ್ಗವಾಗಿ ಸಂಚರಿಸುವ ವಿಜಯಪುರ-ಯಶವಂತಪುರ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟ ಘಟನೆ ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ರೈಲ್ವೆ ಸೇವೆ ಜೊತೆಗೆ ಸುರಕ್ಷತೆಗೂ ಒತ್ತು ನೀಡಲಾಗುತ್ತಿದ್ದು ದೇಶದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಅಂಗಡಿ ಎದುರೇ ಯತ್ನಾಳ, ಜಿಗಜಿಣಗಿ ಕಿತ್ತಾಟ
ವಿಜಯಪುರ: ಕೇಂದ್ರ ಸಚಿವ ಸುರೇಶ ಅಂಗಡಿ ಸಮ್ಮುಖದಲ್ಲೇ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಸಂಸದ ರಮೇಶ ಜಿಗಜಿಣಗಿ ವೇದಿಕೆ ಮೇಲೆಯೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಂಗಳವಾರ ವಿಜಯಪುರ-ಯಶವಂತಪುರ ನೂತನ ರೈಲು ಸೇವೆಗೆ ಚಾಲನೆ ನೀಡಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆಗಮಿಸಿದ್ದರು.

ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತಿದ್ದ ಬಸನಗೌಡ ಪಾಟೀಲ ಯತ್ನಾಳ, ಸಚಿವ ಸುರೇಶ ಅಂಗಡಿ ಅವರಿಗೆ ಜಿಲ್ಲೆಯ ರೈಲ್ವೆ ಸಮಸ್ಯೆ ಕುರಿತು ಏನನ್ನೋ ಹೇಳಲು ಮುಂದಾಗಿದ್ದರು. ಆಗ ಯತ್ನಾಳ-ಸುರೇಶ ಅಂಗಡಿ ಮಧ್ಯದಲ್ಲಿ ಕುಳಿತಿದ್ದ ಸಂಸದ ರಮೇಶ ಜಿಗಜಿಣಗಿ ಅವರು ಯತ್ನಾಳ ವಿರುದ್ಧ ಸಿಡುಕಲು ಆರಂಭಿದರು.

ಇದರಿಂದ ಕುಪಿತರಾದ ಯತ್ನಾಳ ನಾನು ಸಚಿವ ಅಂಗಡಿ ಅವರಿಗೆ ಹೇಳುತ್ತಿದ್ದೇನೆ, ನಿನಗಲ್ಲ ಎಂದು ಗರಂ ಆದರು. ಇದರಿಂದ ಕೂಡಲೇ ಎಚ್ಚೆತ್ತ ಪಕ್ಕದಲ್ಲೇ ಕುಳಿತಿದ್ದ ಶಾಸಕ ವೀರಣ್ಣ ಚರಂತಿಮಠ ಅವರು, ಸಾರ್ವಜನಿಕ ವೇದಿಕೆ ಎಂಬ ಎಚ್ಚರಿಕೆ ನೀಡಲು ಕೈಚಿವುಟುವ ಮೂಲಕ ಶಮನಗೊಳಿಸಿದರು. ಬಳಿಕ ಇಬ್ಬರೂ ನಾಯಕರು ಸಿಟ್ಟಿನಿಂದಲೇ ಮಾತನಾಡಿದರು.

Advertisement

ಸಂಸದ ರಮೇಶ ಜಿಗಜಿಣಗಿ ಮಾತನಾಡುವ ವೇಳೆಗೆ ಬಿಜೆಪಿಯಲ್ಲಿ ಯತ್ನಾಳ ಅವರ ಕಡು ವಿರೋಧಿ ಅಪ್ಪು ಪಟ್ಟಣ ಶೆಟ್ಟಿ ವೇದಿಕೆ ಮುಂಭಾಗದಲ್ಲಿ ಬರುತ್ತಿದ್ದರು. ಇದನ್ನು ಬಳಸಿಕೊಂಡ ಸಂಸದ ಜಿಗಜಿಣಗಿ, ಪಟ್ಟಣಶೆಟ್ಟರೆ ವೇದಿಕೆಗೆ ಬನ್ನಿ ಎಂದು ಹೆಸರು ಹಿಡಿದು ವೇದಿಕೆಗೆ ಆಹ್ವಾನಿಸುವ ಮೂಲಕ ಯತ್ನಾಳ ಅವರಿಗೆ ಟಾಂಗ್‌ ನೀಡಿದರು. ಇಬ್ಬರ ಜಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next