Advertisement

ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಒತ್ತು; ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ

06:26 PM Oct 20, 2022 | Team Udayavani |

ಚಿತ್ರದುರ್ಗ: ಸೊಂಡೇಕೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ತಾಲೂಕಿನ ಸೊಂಡೇಕೊಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 14.90 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗೂ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಸಿಸಿ ರಸ್ತೆ, ಚೆಕ್‌ ಡ್ಯಾಂ, ದೇವಸ್ಥಾನಗಳಿಗೆ ಅನುದಾನ ನೀಡಲಾಗುತ್ತಿದೆ. ಇದರೊಟ್ಟಿಗೆ ಗಮನಕ್ಕೆ ಬಂದ ಎಲ್ಲಾ ಕೆಲಸಗಳಿಗೂ ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಭಾಗದ ಹಲವು ವರ್ಷಗಳ ಬೇಡಿಕೆಗಳಿಗೆ ಅಂತ್ಯ ಹಾಡಿದ್ದೇನೆ. 2-3 ಮೂರು ರಸ್ತೆಗಳು ಮಳೆ ಬಂದರೆ ರೈತರ ಜಮೀನಿಗೆ ತೆರಳಲು ಆಗುತ್ತಿರಲಿಲ್ಲ. ಅಂತಹ ಮಣ್ಣಿನ ರಸ್ತೆಗಳನ್ನು ಸಿಸಿ ರಸ್ತೆ ಮಾಡಿ ರೈತರ ಹಿತ ಕಾಯುವ ಕೆಲಸ ಮಾಡಿದ್ದೇನೆ ಎಂದರು.

ಉಪ್ಪನಾಯಕನಹಳ್ಳಿಯಲ್ಲಿ ದುರ್ಗಮ್ಮ ದೇವಸ್ಥಾನಕ್ಕೆ 5 ಲಕ್ಷ ರೂ. ಹುಲಿಗೆಮ್ಮ ತಿಮ್ಮಪ್ಪ ದೇವಸ್ಥಾನಕ್ಕೆ 5 ಲಕ್ಷ ರೂ., ಪಾಡುರಂಗ ದೇವಸ್ಥಾನಕ್ಕೆ 5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

Advertisement

ಓಬನಹಳ್ಳಿಯಲ್ಲಿ ನಬಾರ್ಡ್‌ ಯೋಜನೆಯಲ್ಲಿ ಸರ್ಕಾರಿ ಶಾಲೆಗೆ 2 ಕೊಠಡಿಗಳ ನಿರ್ಮಾಣಕ್ಕೆ 22 ಲಕ್ಷ ರೂ. ಮತ್ತು 3 ಕೋಟಿ ರೂ. ವೆಚ್ಚದಲ್ಲಿ 3 ಚೆಕ್‌ಡ್ಯಾಂ ಮಾಡಲಾಗುತ್ತಿದೆ. ಸೊಂಡೇಕೊಳ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಪಕ್ಕದಲ್ಲಿ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ, ಎರೇಹಳ್ಳಿ ರಸ್ತೆಯ ಡಾಂಬರೀಕರಣ ಕಾಮಗಾರಿಗೆ 75 ಲಕ್ಷ, ಸೊಂಡೇಕೊಳದಿಂದ ಉಪ್ಪನಾಯಕನಹಳ್ಳಿ ರಸ್ತೆ ಕಾಮಗಾರಿಗೆ 80 ಲಕ್ಷ ರೂ. ಸೇರಿದಂತೆ ಸೊಂಡೇಕೊಳ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಜನರ ನಿರೀಕ್ಷೆಗೆ ಮೀರಿ ಅನುದಾನ ನೀಡಿದ್ದೇನೆ ಎಂದರು.

ಇದೇ ವೇಳೆ ಸೊಂಡೇಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1850 ಕುಟುಂಬಗಳಿಗೆ ಹಸಿ ಮತ್ತು ಒಣ ಕಸದ ಬುಟ್ಟಿಗಳನ್ನು ಶಾಸಕರು ವಿತರಿಸಿದರು. ತಾಪಂ ಇಒ ಹನುಮಂತಪ್ಪ, ಬಿಇಒ ತಿಪ್ಪೇಸ್ವಾಮಿ, ಆರ್‌ಐ ಶರಣಪ್ಪ, ಗ್ರಾಪಂ ಅಧ್ಯಕ್ಷೆ ಭಾರತಮ್ಮ, ಪಿಡಿಓ ಅಂಜಿನಪ್ಪ, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next