Advertisement

ಸಂಘಟನೆ ಕೇಂದ್ರಿತ ಪಕ್ಷ ಬೆಳೆಸಲು ಒತ್ತು

01:13 AM Aug 23, 2019 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯನ್ನು ಮತ್ತೆ ಸಂಘಟನೆ ಪರಿಧಿಯೊಳಗೆ ತಂದು ಮೂಲ ಆಶಯದಂತೆ ಮುಂದಿನ ಕಾರ್ಯ ಚಟುವಟಿಕೆಗಳು ನಡೆಯುವಂತೆ ಮಾಡುವ ನಿಟ್ಟಿನಲ್ಲಿ ವರಿಷ್ಠರು ಇಟ್ಟಿರುವ ಕೆಲ ಹೆಜ್ಜೆಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು, ನಾಯಕರಲ್ಲಿ ಹುಮ್ಮಸ್ಸು ಹೆಚ್ಚಿಸುವ ಜತೆಗೆ ಸಂಘಟನೆ ಕೇಂದ್ರಿತವಾಗಿ ಪಕ್ಷ ಬೆಳೆಯುವ ವಿಶ್ವಾಸ ಮೂಡಿಸಿದೆ.

Advertisement

ಇನ್ನೊಂದೆಡೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹಗೊಂಡ ಶಾಸಕರ ಹಿತ ಕಾಯುವುದು, ಅವರಿಗೆಂದೇ ಆಯ್ದ ಖಾತೆಗಳನ್ನು ಕಾಯ್ದಿರಿಸಿ ಅವರ ಇಚ್ಛೆಯಂತೆ ಸದ್ಯ ಪರಿಸ್ಥಿತಿ ನಿಭಾಯಿಸುವ ವ್ಯವಸ್ಥೆಯ ಮೊರೆ ಹೋಗುತ್ತಿರುವುದು ಪಕ್ಷದ ನಿಷ್ಠಾವಂತ ಶಾಸಕರು, ಕಾರ್ಯಕರ್ತರಲ್ಲಿ ಬೇಸರಕ್ಕೆ ಕಾರಣವಾಗಿದೆ. ಅನರ್ಹ ಶಾಸಕರನ್ನು ಪಕ್ಷದಲ್ಲಿ ಒಳಗೊಳ್ಳುವಿಕೆ ಬಗ್ಗೆ ವರಿಷ್ಠರ ನಡೆ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಈವರೆಗಿನ ಸರ್ಕಾರದ ಆಡಳಿತ ವೈಖರಿ, ನಿರ್ಣಾಯಕ ಹಂತದ ಸಂದರ್ಭದಲ್ಲಿನ ಬೆಳವಣಿಗೆಯನ್ನು ಗಮನಿಸಿದರೆ 2008ರ ಬಿಜೆಪಿ ಸರ್ಕಾರ ಹಾಗೂ ಹಾಲಿ ಸರ್ಕಾರದ ಅಧಿಕಾರ ನಿರ್ವಹಣೆಯಲ್ಲಿನ ವ್ಯತ್ಯಾಸ, ಬದಲಾವಣೆ ಸ್ಪಷ್ಟವಾಗಿ ಕಾಣುತ್ತದೆ. ಈಗ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದು ಇಲ್ಲವೇ ಅವರ ಅನುಮತಿ ಪಡೆದು, ಅವರ ಸೂಚನೆಯಂತೆಯೇ ಮುಂದುವರಿಯುವುದು ಆಡಳಿತ ನಡೆಸುವವರಿಗೆ ಅನಿವಾರ್ಯ.

ಹೈಕಮಾಂಡ್‌ ನಿಗಾ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಸಂದರ್ಭ ನಿರ್ಮಾಣವಾದ ನಂತರ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ, ಸ್ಪೀಕರ್‌ ಆಯ್ಕೆ, ಸಚಿವರ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷದ ಹೈಕಮಾಂಡ್‌ ಸ್ಪಷ್ಟ ನಿರ್ದೇಶನ, ಸೂಚನೆ ನೀಡುತ್ತಾ ಬಂದಿದೆ. ಅದರಲ್ಲಿ ಬಹುತೇಕ ಪಾಲನೆಯಾಗಿವೆ. ಇದು ರಾಜ್ಯ ಬಿಜೆಪಿ ನಾಯಕರು ಹಾಗೂ ಸರ್ಕಾರದ ಆಡಳಿತ ಪ್ರತಿ ಹಂತದಲ್ಲೂ ಹೈಕಮಾಂಡ್‌ ನಿಗಾ ವಹಿಸಿರುವುದಕ್ಕೆ ಪುಷ್ಠಿ ನೀಡುವಂತಿವೆ.

ಸಂಘಟನೆ ಕೇಂದ್ರಿತ: ರಾಜ್ಯ ಬಿಜೆಪಿಯಲ್ಲಿರಲಿ, ಸರ್ಕಾರದಲ್ಲಿರಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು, ಪಕ್ಷ- ಸಂಘಟನೆಯ ಆಶಯಕ್ಕೆ ವ್ಯತಿರಿಕ್ತ ನಿಲುವು, ನಿರ್ಧಾರ ಕೈಗೊಳ್ಳುವುದು ಹಾಗೂ ಪಕ್ಷ ಮೀರಿ ಪ್ರಾಬಲ್ಯ ಸಾಧಿಸಲು ಅವಕಾಶ ನೀಡದ ರೀತಿಯಲ್ಲಿ ವರಿಷ್ಠರು ಆರಂಭದಿಂದಲೇ ನಿಯಂತ್ರಣ ಸಾಧಿಸಲಾರಂಭಿಸಿದಂತಿದೆ. ಅದಕ್ಕೆ ಪೂರಕವಾಗಿ ಸ್ಪೀಕರ್‌ ಸ್ಥಾನಕ್ಕೆ ಸಂಘಟನೆ ಹಿನ್ನೆಲೆಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡಿರುವುದು. ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಸಂಘಟನೆ ಮೂಲದ ಕಟ್ಟರ್‌ ಹಿಂದುತ್ವವಾದಿ ಸಂಸದರಾದ ನಳಿನ್‌ ಕುಮಾರ್‌ ಕಟೀಲ್ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಕೇಂದ್ರಿತವಾಗಿ ಬೆಳೆಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವಂತಿದೆ.

Advertisement

ಈ ಸೂಕ್ಷ್ಮವನ್ನು ಅರಿತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರಿಷ್ಠರ ಸೂಚನೆಯನ್ನು ತಮ್ಮ ಇತಿಮಿತಿಯೊಳಗೆ ಪಾಲಿಸುವ ಮೂಲಕ ಸ್ಪಂದಿಸುತ್ತಿದ್ದಾರೆ. ಸಾಧ್ಯವಾದಷ್ಟು ಸಂಘರ್ಷಕ್ಕಿಳಿಯದೆ ಮಾತುಕತೆ, ಚರ್ಚೆ ಮೂಲಕವೇ ತಮ್ಮ ಲೆಕ್ಕಾಚಾರಗಳೂ ತಪ್ಪಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಅದೇ ಪ್ರಯತ್ನದ ಭಾಗವೆಂಬಂತೆ ಸದ್ಯ ದೆಹಲಿ ಪ್ರವಾಸದಲ್ಲಿದ್ದು, ಖಾತೆ ಹಂಚಿಕೆ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚಿಸುವ ಚಿಂತನೆಯಲ್ಲಿದ್ದಾರೆ.

ಪಕ್ಷ ನಿಷ್ಠರಲ್ಲಿ ಆತಂಕ: ವರಿಷ್ಠರ ಈ ನಡೆ ಪಕ್ಷದ ನಿಷ್ಠಾವಂತ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ 17 ಅನರ್ಹಗೊಂಡ ಶಾಸಕರ ಹಿತ ಕಾಯಲು ಮುಂದಾಗಿರುವುದು ಪಕ್ಷ ನಿಷ್ಠರ ಬೇಸರಕ್ಕೆ ಕಾರಣವಾಗಿದೆ. ಅನರ್ಹಗೊಂಡಿರುವ ಶಾಸಕರಿಗೆ ಆಯ್ದ ಖಾತೆಗಳನ್ನು ಕಾಯ್ದಿರಿಸುವುದು, ಆ ಖಾತೆ ಹಾಗೂ ಅವರು ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರಮುಖ ನಿರ್ಧಾರಗಳನ್ನು ಅವರ ಗಮನಕ್ಕೆ ತಂದು ಮುಂದುವರಿಯುವ ವ್ಯವಸ್ಥೆ ಕಲ್ಪಿಸುವುದು ಸಂಘಟನೆ ಮೇಲೆ ಪರಿಣಾಮ ಬೀರುವುದೇ ಎಂಬ ಆತಂಕ ನಿಷ್ಠರನ್ನು ಕಾಡುತ್ತಿದೆ.

ಅನರ್ಹರ ಸಂತುಷ್ಟಿಗೆ ಅತೃಪ್ತಿ: ಒಂದೆಡೆ ವರಿಷ್ಠರು ಸಂಘಟನೆ ಕೇಂದ್ರಿತವಾಗಿ ಪಕ್ಷವನ್ನು ಬೆಳೆಸುವ ಕಾರ್ಯ ಕೈಗೊಂಡು ಮತ್ತೂಂದೆಡೆ ಅನ್ಯ ಪಕ್ಷಗಳನ್ನು ತೊರೆದು ಕಾನೂನು ಹೋರಾಟದ ಸಂಘರ್ಷದಲ್ಲಿರುವ ಅನರ್ಹ ಶಾಸಕರನ್ನು ಸಂತುಷ್ಟಿಪಡಿಸಲು ಸರ್ಕಾರ ಹಾಗೂ ವರಿಷ್ಠರು ತಕ್ಕ ಮಟ್ಟಿಗೆ ಸ್ಪಂದಿಸುತ್ತಿರುವುದು ಸಚಿವ ಸ್ಥಾನ ಕೈತಪ್ಪಿದ ಹಾಗೂ ಪಕ್ಷನಿಷ್ಠ ಶಾಸಕರ ಅತೃಪ್ತಿಗೆ ಕಾರಣವಾಗಿದೆ. ಈ ಹೊಸ ಪರಿಪಾಠ ಸಂಘಟನೆಯ ಮೇಲೆ ಅಡ್ಡ ಪರಿಣಾಮ ಬೀರದಂತೆ ವರಿಷ್ಠರು ಎಚ್ಚರ ವಹಿಸಿ ಕ್ರಮ ವಹಿಸಬೇಕು ಎಂಬುದು ಪಕ್ಷ ನಿಷ್ಠರ ಆಶಯ ಎಂದು ಮೂಲಗಳು ಹೇಳಿವೆ.

ಸಂಘಟನೆಗೆ ಹಾನಿಯಾಗದಂತೆ ಎಚ್ಚರ

ವ್ಯಕ್ತಿ ಕೇಂದ್ರಕ್ಕಿಂತ ಸಂಘಟನೆ ಕೇಂದ್ರಿತವಾಗಿ ಪಕ್ಷ ಬೆಳೆಸುವ ನಿಟ್ಟಿನಲ್ಲಿ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಇದು ಮುಂದೆ ಇನ್ನಷ್ಟು ವ್ಯಾಪಕವಾಗಿ ನಡೆಯಲಿದೆ. ಬಿಜೆಪಿ ಸರ್ಕಾರ ರಚನೆಗೆ ಒಂದಿಷ್ಟು ಮಂದಿ ಪರೋಕ್ಷವಾಗಿ ನೆರವಾಗಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯವಾಗಿದ್ದು, ಆದ್ಯತೆ ನೀಡಬೇಕಾಗುತ್ತದೆ. ಇದರಿಂದ ಕೆಲವರಿಗೆ ಅಸಮಾಧಾನವಾಗುವುದು ಸಹಜ. ಆದರೆ ಇದು ತಾತ್ಕಾಲಿಕ. ಅನರ್ಹಗೊಂಡ ಶಾಸಕರು ನಿಲುವಿನಂತೆಯೇ ಸದ್ಯ ಆಯಾ ಖಾತೆಗಳ ಕಾರ್ಯ ನಿರ್ವಹಣೆಗೆ ಅವಕಾಶವಿರುವುದಿಲ್ಲ. ಸಾಧ್ಯವಿರುವ ಕಡೆ ಅವರ ನಿರೀಕ್ಷೆಗಳಿಗೆ ಸ್ಪಂದಿಸಬಹುದಷ್ಟೇ. ಆದರೆ ಇದು ಯಾವುದೇ ರೀತಿಯಲ್ಲೂ ಸಂಘಟನೆಯ ಮೇಲೆ ಪರಿಣಾಮ ಬೀರದಂತೆ ವರಿಷ್ಠರು ಹಾಗೂ ರಾಜ್ಯ ನಾಯಕರು ನಿರಂತರವಾಗಿ ಎಚ್ಚರ ವಹಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
-ಎಂ. ಕೀರ್ತಿಪ್ರಸಾದ್‌
Advertisement

Udayavani is now on Telegram. Click here to join our channel and stay updated with the latest news.

Next