“ಮಾರ್ಚ್ 22′ ಚಿತ್ರದಲ್ಲಿ ನಟಿಸಿದ್ದ ಕಿರಣ್ ರಾಜ್, ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿರುವುದಷ್ಟೇ ಅಲ್ಲ, ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. “ಅಸತೋಮ ಸದ್ಗಮಯ’ ಎಂಬ ಹೆಸರಿನ ಈ ಚಿತ್ರವನ್ನು ರಾಜೇಶ್ ನಿರ್ದೇಶಿಸಿದರೆ, ಮೂಡುಬಿದ್ರೆಯ ಅಶ್ವಿನ್ ಜೆ ಪರೇರಾ ನಿರ್ಮಿಸುತ್ತಿದ್ದಾರೆ. ಕಿರಣ್ ರಾಜ್ ಜೊತೆಗೆ ರಾಧಿಕಾ ಚೇತನ್, ಲಾಸ್ಯ ನಾಗರಾಜ್, ದೀಪಕ್ ಶೆಟ್ಟಿ, ಬೇಬಿ ಚಿತ್ರಾಲಿ ಮುಂತಾದವರು ನಟಿಸಿದ್ದು, ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.
“ಅಸತೋಮ ಸದ್ಗಮಯ’ ಚಿತ್ರವನ್ನು ಐಕ್ಯೂ ವರ್ಸಸ್ ಇಕ್ಯೂ ಎಂಬ ಹಿನ್ನೆಲೆಯಿಟ್ಟುಕೊಂಡು ಮಾಡಲಾಗಿದೆಯಂತೆ. ಅಂದರೆ ಇಂಟಲಿಜೆನ್ಸ್ ಕೋಷಂಟ್ ವರ್ಸಸ್ ಎಮೋಷನ್ ಕೋಷಂಟ್ ಎಂದು ಅರ್ಥ ಮಾಡಿಸುತ್ತಾರೆ ನಿರ್ದೇಶಕ ರಾಜೇಶ್. “ಒಂದೆರೆಡು ತಲೆಮಾರುಗಳ ಹಿಂದೆ ಎಮೋಷನ್‌ಗೆ ಜಾಸ್ತಿ ಮಹತ್ವ ನೀಡಲಾಗುತಿತ್ತು. ಆಗಿನವರಿಗೆ ಅಟಾಚ್‌ಮೆಂಟ್ ಜಾಸ್ತಿ ಇತ್ತು. ಈಗ ಹಾಗಿಲ್ಲ. ಬುದ್ಧಿವಂತಿಕೆಗೆ ಬೆಲೆ ಜಾಸ್ತಿಯಾಗಿ, ಎಮೋಷನ್‌ಗಳಿಗೆ ಮಹತ್ವ ಕಡಿಮೆಯಾಗಿದೆ.
ಈ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡಿದ್ದೇವೆ. ಇದೊಂದು ಫ್ಯಾಮಿಲಿ ಚಿತ್ರವಾಗಿದ್ದು, ಕಾಮಿಡಿ, ಥ್ರಿಲ್ ಎಲ್ಲವೂ ಈ ಚಿತ್ರದಲ್ಲಿದೆ’ ಎನ್ನುತ್ತಾರೆ ರಾಜೇಶ್. ಇದೊಂದು ಪ್ಯಾಕೇಜ್ ಎನ್ನುತ್ತಾರೆ ಕಿರಣ್ ರಾಜ್. “ಬಹಳ ಒಳ್ಳೆಯ ಸ್ಕ್ರಿಪ್ಟ್ ಇದು. ಒಂದೊಳ್ಳೆಯ ಸಂದೇಶದ ಜೊತೆಗೆ ಮನರಂಜನೆ ಸಹ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇದೊಂದು ಒಳ್ಳೆಯ ಪ್ಯಾಕೇಜ್ ಸಿನಿಮಾ’ ಎನ್ನುತ್ತಾರೆ ಕಿರಣ್. ಲಾಸ್ಯಗೆ ಇದು ಮೊದಲ ಚಿತ್ರ. ಅವರಿಗೆ ಈ ಚಿತ್ರ ಸಿಕ್ಕಿದ ಸಂದರ್ಭದಲ್ಲಿ, ಹಲವರು ಹೆದರಿಸಿದ್ದರಂತೆ.
ಇನ್ನು ಬೆಂಗಳೂರು ಬಿಟ್ಟು ಬೇರೆ ಕಡೆ ಚಿತ್ರೀಕರಣಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಮನೆಯವರು ಹೆದರಿದ್ದರಂತೆ. ಆದರೆ, ಚಿತ್ರತಂಡದವರು ತಮ್ಮನ್ನು ಮಗು ತರಹ ನೋಡಿಕೊಂಡರು ಎನ್ನುತ್ತಾರೆ ಲಾಸ್ಯ. ಇನ್ನು ರಾಧಿಕಾಗೆ ರಿಯಲ್ ಲೈಫ್ನಲ್ಲಿರುವ ಕೆಲವು ಮೌಲ್ಯಗಳು ಸಹ ಈ ಚಿತ್ರದಲ್ಲೂ ಇರುವುದರಿಂದ, ಚಿತ್ರ ಒಪ್ಪಿಕೊಂಡಿದ್ದಾಗಿ ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅವರ ಲುಕ್ ವಿಭಿನ್ನವಾಗಿದೆಯಂತೆ.
ತಮ್ಮ ಹಿಂದಿನ ಮೂರು ಚಿತ್ರಗಳಿಗಿಂಥ ಈ ಲುಕ್ ವಿಭಿನ್ನವಾಗಿರುವುದರಿಂದ ಜನ ಮೆಚ್ಚಬಹುದು ಎಂಬ ನಂಬಿಕೆಯಲ್ಲಿ ಅವರಿದ್ದಾರೆ. “ಅಸತೋಮ ಸದ್ಗಮಯ’ ಚಿತ್ರಕ್ಕೆ ವಹಾಬ್ ಸಲೀಮ್ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ “ರಿಕ್ಷಾ ಡ್ರೈವರ್’ ಎಂಬ ತುಳು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಸಲೀಮ್‌ಗೆ ಇದು ಮೊದಲ ಕನ್ನಡ ಚಿತ್ರ. ಇನ್ನು ಕಿಶೋರ್ ಈ ಚಿತ್ರಕ್ಕೆ ಛಾಯಾಗ್ರಹ ಮಾಡಿದ್ದು, ಈಗಾಗಲೇ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ಹಾಡು, ಫೈಟು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಮುಗಿದರೆ, ಚಿತ್ರಕ್ಕೆ ಕುಂಬಳಕಾಯಿ.