ಹೊನ್ನಾವರ: ಜಿಲ್ಲೆಯ ಪಂಚ ನದಿಗಳಿಂದ ರಾಜ್ಯಕ್ಕೆ ಪ್ರಯೋಜನ ಪಡೆಯಲು ಬೆಂಗಳೂರಿಗರು ಕಣ್ಣು ಹಾಕಿದ್ದು ಇದೇ ಮೊದಲಲ್ಲ. ಶರಾವತಿ, ಕಾಳಿಗೆ ಅಣೆಕಟ್ಟುಗಳಾದವು, ಅಣು ವಿದ್ಯುತ್ ಸ್ಥಾವರಗಳಾದವು, ಬೇಡ್ತಿ ಅಘನಾಶಿನಿಗೆ ಆಗಬೇಕಾದ ಅಣೆಕಟ್ಟು ಹೋರಾಟದಿಂದ ನಿಂತು ಹೋಯಿತು. ವೆಂಕಟಾಪುರ ಒಂದು ಉಳಿದುಕೊಂಡಿದೆ. ಮಂತ್ರಿಗಳಾದ ಟಿಬಿ ಜಯಚಂದ್ರ ಈಗ ಅಘನಾಶಿನಿಯ ನೀರನ್ನು ಬೆಂಗಳೂರಿಗೆ ಒಯ್ಯಲು ಯೋಜನೆ ಸಿದ್ಧಪಡಿಸಿದ್ದು, ಕೇಂದ್ರ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಪೂರ್ವ, ಪಶ್ಚಿಮವಾಗಿ ಇಳಿಜಾರಿನಲ್ಲಿ ತುಂಬಿ ಹರಿಯುವ ಜಿಲ್ಲೆಯ ನದಿಗಳ ನೀರು ಮಳೆ ನಿಂತೊಡನೆ ವೇಗ-ವಿಸ್ತಾರ ಕಳೆದುಕೊಂಡು ಹಳ್ಳವಾಗುತ್ತದೆ. ಮಳೆಗಾಲದ ನೀರು ನೋಡಿದವರು ವಾಟ್ ಎ ವೇಸ್ಟ್ ಎಂದು ಬೆಂಗಳೂರಿಗೆ ನೀರು ಒಯ್ಯುವ ಆಲೋಚನೆ ಮಾಡಿದರೆ ಸಹಜ. ಬೇಸಿಗೆಯಲ್ಲಿ ಬಂದು ನೋಡಬೇಕು. ಅಘನಾಶಿನಿಯ ಎಡ-ಬಲ ದಂಡೆಯ ರೈತರಿಗೆ ನೀರು ಸಾಲುತ್ತಿಲ್ಲ. ಕುಮಟಾ-ಹೊನ್ನಾವರಕ್ಕೆ ಅಘನಾಶಿನಿಯ ಕುಡಿಯುವ ನೀರು ತರಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಮೇ ತಿಂಗಳಲ್ಲಿ ಅಘನಾಶಿನಿ ಪ್ರವಾಹ ನಿಂತು ಹೋಗಿ ಟ್ಯಾಂಕರ್ ಮೂಲಕ ಬಾವಿಯ ನೀರು ಪೂರೈಸುವ ಗತಿ ಬಂದಿದೆ. ಅಘನಾಶಿನಿಯ ಸಂಗಮದಲ್ಲಿ ದೇಶದಲ್ಲೇ ದೊಡ್ಡದಾದ ಸಾಣೆಕಟ್ಟೆ ಉಪ್ಪು ತಯಾರಿಕಾ ಕೇಂದ್ರವಿದೆ. ರೈತರು ಸಿಗಡಿ ಮತ್ತು ವಿಶೇಷ ತಳಿಯ ಭತ್ತ ಬೆಳೆಯುತ್ತಾರೆ. ಅಘನಾಶಿನಿಯ ನೀರು ಅಂತರ್ಜಲವಾಗಿ ಎಡ-ಬಲ ದಂಡೆಯ ಗ್ರಾಮದ ಬಾವಿಗಳಲ್ಲಿ ಸದಾ ನೀರಿರುವಂತೆ ಮಾಡುತ್ತದೆ. ಬೆಂಗಳೂರಿಗೆ ನೀರು ಒಯ್ದರೆ ಲಕ್ಷಾಂತರ ಜನ ಅಘನಾಶಿನಿಯ ಮಕ್ಕಳಿಗೆ ತೊಂದರೆಯಾಗುತ್ತದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜಿಲ್ಲೆಯ ಇಷ್ಟ, ಅನಿಷ್ಟಗಳನ್ನು ತಿಳಿದುಕೊಳ್ಳದ ಸರ್ಕಾರಗಳು ಜಿಲ್ಲೆಯಲ್ಲಿ ಅಣೆಕಟ್ಟು, ಅಣು ವಿದ್ಯುತ್ ಸ್ಥಾವರ, ನೌಕಾನೆಲೆಗಳನ್ನು ನಿರ್ಮಿಸಿದವು. ಪ್ರತಿಯಾಗಿ ಯಾವ ಯೋಜನೆಯನ್ನೂ ಕೊಡಲಿಲ್ಲ. ಆದ್ದರಿಂದ ಜಿಲ್ಲೆಯ ಜನ ನೀರು ಒಯ್ಯುವ ಸುದ್ದಿಯಿಂದ ಆಕ್ರೋಶಿತರಾಗಿದ್ದಾರೆ. ವಿದ್ಯುತ್ ಉತ್ಪಾದನೆ, ಕೃಷಿ ಭೂಮಿಗೆ ನೀರಾವರಿ ಹಾಗೂ ನೆರೆ ನಿಯಂತ್ರಣಕ್ಕಾಗಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಗುಜರಾತ್‌ನ ಸರ್ದಾರ ಸರೋವರ ಅಣೆಕಟ್ಟು, ಕನ್ನಂಬಾಡಿ ಅಣೆಕಟ್ಟುಗಳಿಂದ ಇದನ್ನು ಸಾಧಿಸಲಾಗಿದೆ. ಉತ್ತರ ಕನ್ನಡದ ಅಣೆಕಟ್ಟುಗಳಿಂದ ಕೇವಲ ವಿದ್ಯುತ್ ಉತ್ಪಾದನೆ ನಡೆದಿದೆ. ನೆರೆ ಆಗಾಗ ಬರುತ್ತಲೇ ಇದೆ. ನೀರಾವರಿ ಯೋಜನೆ ಮಾಡಿಲ್ಲ. ಇಲ್ಲಿ ನಮ್ಮ ಭೂಮಿ ಬರಡಾಗಿಸಿಕೊಂಡು, ನಮಗೆ ಕುಡಿಯಲು ನೀರು ಇಲ್ಲದಂತೆ ಮಾಡಿಕೊಂಡು ಬೆಂಗಳೂರಿಗೆ ಕೊಡಬೇಕೇ ಎಂದು ಕೇಳುತ್ತಿದ್ದಾರೆ. ಜನ ಹೇಗೆ ಒಪ್ಪುತ್ತಾರೆ, ಮಳೆಗಾಲದಲ್ಲಿ ಇಳಿದು ಹೋಗುವ ನದಿಯನ್ನು ನೋಡಬೇಡಿ, ಬೇಸಿಗೆಯಲ್ಲಿ ಬರಡಾಗುವ ಕೊಳ್ಳವನ್ನು ನೋಡಿ ಎನ್ನುತ್ತಿದ್ದಾರೆ. ಸರ್ಕಾರ ಇಂತಹ ಆಲೋಚನೆಗಳನ್ನು ಕೈಬಿಡದಿದ್ದರೆ ಹೊಗೆಯಾಡುವ ಸಿಟ್ಟು ಬೆಂಕಿಯಾದೀತು.
•ಜೀಯು ಹೊನ್ನಾವರ