ಧಾರವಾಡ: ಎದೆ ನೋವಿನಿಂದ ಬಳಲುತ್ತ ಬಂದ ವೃದ್ಧೆಗೆ ಸರಿಯಾಗಿ ತುರ್ತು ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದ ವ್ಯಕ್ತಿಗಳಿಬ್ಬರು ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಗೋವನಕೊಪ್ಪ ಗ್ರಾಮದ ಮಾಬೂಬಿ ಗೋಲಂದಾಜಿ (70) ಎಂಬ ವೃದ್ಧೆಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಮಕ್ಕಳಾದ ಇಮಾಮ್ ಹುಸೇನ್ ಗೋಲಂದಾಜ ಹಾಗೂ ಮೆಹಬೂಬ ಗೋಲಂದಾಜ ಎಂಬುವರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಕರ್ತವ್ಯದಲ್ಲಿದ್ದ ಡಾ|ಬಿ.ಜಿ.ದೊಡಮನಿ ಎಂಬ ವೈದ್ಯರು ವೃದ್ಧೆ ಮಾಬೂಬಿ ಅವರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಾಬೂಬಿ ಆಸ್ಪತ್ರೆಯೇ ಮೃತಪಟ್ಟಿದ್ದಾರೆ. ಇದರಿಂದ ಕೆರಳಿದ ಮಕ್ಕಳು, ಸರಿಯಾಗಿ ಚಿಕಿತ್ಸೆ ನೀಡದ ಕಾರಣ ತಾಯಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ವೈದ್ಯನ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ನಡೆಸುವುದನ್ನು ಬಿಡಿಸಲು ಅಲ್ಲೇ ಇದ್ದ ನರ್ಸ್‌ಗಳು ಹಾಗೂ ಇನ್ನುಳಿದ ವೈದ್ಯರು ಮುಂದಾದರೂ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಹಲ್ಲೆ ಮಾಡಿದ ಆ ಇಬ್ಬರನ್ನೂ ಉಪನಗರ ಠಾಣೆಗೆ ಕರೆದೊಯ್ದರು.
ಈ ಎಲ್ಲ ದೃಶ್ಯಾವಳಿಗಳು ಆಸ್ಪತ್ರೆಯಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಗಲಾಟೆಯ ಮಧ್ಯೆ ಮೃತಪಟ್ಟ ಮಾಬೂಬಿ ಅವರ ಮೃತದೇಹ ಅನಾಥವಾಗಿ ಆಸ್ಪತ್ರೆಯಲ್ಲಿ ಬಿದ್ದಿತ್ತು. ಇತ್ತ ಪೊಲೀಸರು ವೈದ್ಯರ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋದರೆ ಅವರೊಂದಿಗೆ ಬಂದಿದ್ದ ಮಹಿಳೆಯರು ದಿಚ್ಚು ತೋಚದೇ ಆಸ್ಪತ್ರೆಯಲ್ಲಿ ಗೋಳಾಡುತ್ತ ಕುಳಿತಿದ್ದ ದೃಶ್ಯ ಕಂಡು ಬಂತು.
ನಂತರ ಪೊಲೀಸರು ಮಾಬೂಬಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಡಾ|ಬೂಜಿ ದೊಡ್ಡಮನಿ ಹಾಗೂ ಜಿಲ್ಲಾಸ್ಪತ್ರೆಯ ಸರ್ಜನ್ ಗಿರಿಧರ್ ಅವರು ಇಮಾಮ್‌ಸಾಬ್ ಹಾಗೂ ಮೆಹಬೂಬ್ ಅವರ ವಿರುದ್ಧ ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆಗೆ ಮುಂದಾದ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.