Advertisement

Uttarkashi; ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಇನ್ನೂ 4-5 ದಿನಗಳು ಬೇಕು

04:41 PM Nov 19, 2023 | Vishnudas Patil |

ಉತ್ತರಕಾಶಿ: ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 8 ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಧಾನ ಮಂತ್ರಿ ಕಚೇರಿ (PMO) ನಾಲ್ಕು ವಿಭಿನ್ನ ಕಡೆಗಳಲ್ಲಿ ರಕ್ಷಣ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ, ಪ್ರತಿಯೊಂದನ್ನು ಬೇರೆ ಬೇರೆ ಸಂಸ್ಥೆ ನಿರ್ವಹಿಸುತ್ತಿದೆ.ಪಿಎಂಒ ಅಧಿಕಾರಿಗಳು ಮತ್ತು ತಜ್ಞರ ತಂಡವು 41 ಜನರನ್ನು ರಕ್ಷಿಸಲು ಕೇವಲ ಒಂದು ಯೋಜನೆಗೆ ಬದಲಾಗಿ ನಾಲ್ಕು ಯೋಜನೆಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ.

Advertisement

ರಕ್ಷಣ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾನುವಾರ ಉತ್ತರಾಖಂಡ್ ತಲುಪಿದ್ದಾರೆ. ಆಗರ್ ಯಂತ್ರ ಸರಿಯಾಗಿ ಕೆಲಸ ಮಾಡಿದರೆ ಸುಮಾರು 2 ರಿಂದ 3 ದಿನಗಳಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸಬಹುದು ಎಂದು ಗಡ್ಕರಿ ಹೇಳಿದ್ದಾರೆ. ಕಾರ್ಮಿಕರನ್ನು ಜೀವಂತವಾಗಿರಲು ಮತ್ತು ಅವರ ಯೋಗಕ್ಷೇಮ ಖಚಿತಪಡಿಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ವಿಶೇಷ ಯಂತ್ರಗಳನ್ನು ತರಲು ಬಿಆರ್‌ಒ ಮೂಲಕ ರಸ್ತೆಗಳನ್ನು ಮಾಡಲಾಗುತ್ತಿದೆ. ಇಲ್ಲಿಗೆ ಹಲವಾರು ಯಂತ್ರಗಳು ಬಂದಿವೆ. ರಕ್ಷಣ ಕಾರ್ಯಾಚರಣೆಯನ್ನು ಕೈಗೊಳ್ಳಲು ಪ್ರಸ್ತುತ ಎರಡು ಆಗರ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಪ್ರಧಾನಿ ಕಾರ್ಯಾಲಯದ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಅವರು ರಕ್ಷಣ ಕಾರ್ಯಗಳಿಗೆ ಇನ್ನೂ ನಾಲ್ಕೈದು ದಿನಗಳು ತಗಲುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸ್ಥಳಾಂತರಿಸುವ ಮಾರ್ಗವು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಇದು ಸುರಂಗದ ಪ್ರವೇಶದ್ವಾರದಲ್ಲಿ ಸುರಕ್ಷತಾ ಬ್ಲಾಕ್ ಗಳನ್ನು ಅಳವಡಿಸುವುದನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

Advertisement

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಭಾನುವಾರ ಮಧ್ಯಾಹ್ನದ ವೇಳೆಗೆ ಸಿಲ್ಕ್ಯಾರಾ ಸುರಂಗಕ್ಕೆ ಹೊಸ ರಸ್ತೆಯನ್ನು ನಿರ್ಮಿಸುತ್ತದೆ ಎಂದು ರಕ್ಷಣ ತಂಡದ ಅಧಿಕಾರಿಗಳು ಭರವಸೆ ಹೊಂದಿದ್ದಾರೆ. ಇದು ಸಂಕಷ್ಟದಲ್ಲಿರುವ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಮತ್ತೊಂದು ಮಾರ್ಗವನ್ನು ಒದಗಿಸುತ್ತದೆ ಮತ್ತು ಶುಕ್ರವಾರದಿಂದ ನಿಲ್ಲಿಸಲಾಗಿದ್ದ ರಕ್ಷಣ ಕಾರ್ಯಾಚರಣೆಯನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುರಂಗ ತಜ್ಞ, ಪ್ರೊಫೆಸರ್ ಅರ್ನಾಲ್ಡ್ ಡಿಕ್ಸ್ ಅವರನ್ನು ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಸಂಪರ್ಕಿಸಲಾಗಿದೆ. ಅವರು ರಕ್ಷಣ ತಂಡಕ್ಕೆ ಸಹಾಯ ಮಾಡಲು ಭಾರತಕ್ಕೆ ಆಗಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next