ಯಲಬುರ್ಗಾ: ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆವಹಿಸಿ ಎಂದು ಶಾಸಕ ಹಾಲಪ್ಪ ಆಚಾರ್ ಪಿಡಿಒಗಳಿಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ನೀರು ಮತ್ತು ನೈರ್ಮಲ್ಯ ತುರ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ನೀರಿನ ಗಂಭೀರ ಸಮಸ್ಯೆ ಹಾಗೂ ಕುಡಿವ ನೀರು ಶುದ್ಧೀಕರಣ ಘಟಕಗಳು ದುರಸ್ತಿಗೆ ಬಂದರೇ ತಕ್ಷಣವೇ ಸಂಬಂಧಪಟ್ಟ ತಾಪಂ, ಜಿಪಂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದರು.
ಈಗಾಗಲೇ ಕೋವಿಡ್ 19 ವೈರಸ್ ತಡೆಗೆ ಹಲವಾರು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಜಾಗೃತಿಯೊಂದಿಗೆ ಗ್ರಾಮಗಳಲ್ಲಿ ಬ್ಲಿಚಿಂಗ್ ಪೌಡರ್ ಸಿಂಪರಣೆ ಹಾಗೂ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡುವ ಕಾರ್ಯ ಮಾಡಿ. ಬರ ನಿರ್ವಹಣೆ ಹಾಗೂ ಕುಡಿವ ನೀರಿಗೆ ಹೆಚ್ಚಿನ ಹಣ ಬಂದಿಲ್ಲ. ಆದರಿಂದ ವಿನಾಕಾರಣ ಖರ್ಚು ಮಾಡಬೇಡಿ. ಗ್ರಾಮಲೆಕ್ಕಾಧಿಕಾರಿಗಳು ನಿತ್ಯ ಗ್ರಾಮಗಳಿಗೆ ಹೋಗಿ ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಿ ನಿತ್ಯ ತಹಶೀಲ್ದಾರ್ ಅವರಿಗೆ ಪ್ರಗತಿ ವರದಿ ಒಪ್ಪಿಸುವಂತೆ ಸೂಚಿಸಿದರು.
ಪೈಪ್‌ಲೈನ್ ಹಾಗೂ ಹೊಸ ಬೋರ್‌ವೆಲ್ ನೆಪದಲ್ಲಿ ಬೇಕಾಬಿಟ್ಟಿ ಹಣ ಖರ್ಚು ಮಾಡಿ ಅನಗತ್ಯ ಹಣ ಖರ್ಚು ಮಾಡಿದರೆ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಜಿಪಂ ಎಇಇ ಶಿವುಕುಮಾರಗೆ ಸೂಚಿಸಿದರು.
ಕೆಇಬಿ ಎಇಇ ಗೋಪಾಲಸ್ವಾಮಿ ಮಾತನಾಡಿದರು. ತಹಶೀಲ್ದಾರ್ ಶ್ರೀಶೈಲ ತಳವಾರ, ಇಒ ಜಯರಾಂ, ಪಿಡಿಒಗಳಾದ ಹನುಮಂತಗೌಡ ಪಾಟೀಲ, ಹನುಮಂತರಾಯ ಯಕಂಚಿ, ರವಿಕುಮಾರ ಲಿಂಗಣ್ಣನವರ, ವೀರಭದ್ರಗೌಡ, ರಾಮಣ್ಣ ಹೊಸಮನಿ, ರಾಮಣ್ಣ ದೊಡ್ಡಮನಿ, ಬಸವರಾಜ, ತಾಪಂ ಸಿಬ್ಬಂದಿ, ಕಂದಾಯ ಸಿಬ್ಬಂದಿ ಇತರರು ಇದ್ದರು.