ಕಾರವಾರ: ಕೇಂದ್ರ ಸರಕಾರ ಒಂದು ಭಾರತ ಒಂದು ತುರ್ತು ಕರೆಸಂಖ್ಯೆ’ ಪರಿಕಲ್ಪನೆಯಡಿ ದೇಶದಾದ್ಯಂತ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯ ಜನರು ಎಲ್ಲ ರೀತಿಯ ತುರ್ತು ಸೇವೆಗಳಿಗಾಗಿ ಇನ್ನುಮುಂದೆ 100 ರ ಬದಲಾಗಿ 112 ಸಂಖ್ಯೆಗೆ ಸಂಪರ್ಕಿಸಿ ಅಗತ್ಯ ತುರ್ತು ಸೇವೆಗಳನ್ನು ಪಡೆಯಬಹುದು ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಶನಿವಾರ ಇಲಾಖಾ ವಾಹನಗಳ ಚಾಲನೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಇದೊಂದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ತುರ್ತು ಸೇವೆ ಸಂಖ್ಯೆಗಳನ್ನು ಈ ಯೋಜನೆಯಡಿ ಸಾರ್ವಜನಿಕರಿಗೆ ಎಲ್ಲ ರೀತಿಯ ತುರ್ತು ಸೇವೆಗಳನ್ನು ಅತೀ ಶಿಘ್ರದಲ್ಲಿ ಒದಗಿಸುವ ಗುರಿಯೊಂದಿಗೆ ದೇಶದಾದ್ಯಂತ ಏಕರೂಪದಲ್ಲಿ ಏಕೀಕೃತಗೊಳಿಸಲಾಗಿದೆ ಎಂದರು.
ಎಸ್ಪಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ರಾಜ್ಯ ಸರಕಾರದ ಆದೇಶದಂತೆ ಈ ಯೋಜನೆಯನ್ನು ರಾಜ್ಯ ಪೊಲೀಸ್ ಇಲಾಖೆ ಹಂತ ಹಂತವಾಗಿ ವಾಹನಗಳನ್ನು ಜಿಲ್ಲಾವಾರು ನಿಯೋಜಿಸುವ ಮೂಲಕ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ಈಗ ಪೊಲೀಸ್ ಪ್ರಧಾನ ಕಚೇರಿಂದ ಉತ್ತರ ಕನ್ನಡ ಜಿಲ್ಲೆಗೆ ಒಟ್ಟು 16 ವಾಹನಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. ಈ ವಾಹನಗಳನ್ನು ಈ ಹಿಂದೆ 100 ಸಂಖ್ಯೆಗೆ ಬರುತ್ತಿದ್ದ ಕರೆಗಳು ಮತ್ತು ಅಪರಾಧ ಘಟಿಸಿದ ಸ್ಥಳಗಳ ಆಧಾರದ ಮೇಲೆ ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರ ಏಕೀಕೃತ ತುರ್ತು ಸಂಖ್ಯೆ-112 ಅನ್ನು ನಿಗದಿಪಡಿಸಿದ್ದು, ರಾಜ್ಯಾದ್ಯಂತ ಸಾರ್ವಜನಿಕರಿಂದ ಬರುವ ಮೂಲಕ ಅಗತ್ಯ ಮಾಹಿತಿ ಕಲೆಹಾಕಿ ಗರಿಷ್ಠ ನಿಖರತೆಯಿಂದ ಶೀಘ್ರವಾಗಿ ಕಾರ್ಯಾ ನಿರ್ವಹಿಸಲಾಗುವುದು ಎಂದರು.
ಜಿಲ್ಲೆಯ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಮೂಲಕ ತುರ್ತು ಸೇವೆ ಅಗತ್ಯವಿರುವ ವ್ಯಕ್ತಿಯ ಅತೀ ಹತ್ತಿರ ಲಭ್ಯವಿರುವ ತುರ್ತು ಸೇವಾ ವಾಹನಕ್ಕೆ ಸೂಚನೆಗಳನ್ನು ನೀಡಲಾಗುತ್ತದೆ. 112ಗೆ ಬರುವ ಧ್ವನಿ ಕರೆ, ಮೆಸೇಜ್ ಸಂದೇಶಗಳು, 112ಕ್ಕೆ ಬರುವ ವಿನಂತಿಗಳು, ಬರುವ ಇಮೇಲ್‌ಗಳಿಗೆ ಅತೀ ಶೀಘ್ರವಾಗಿ ಸ್ಪಂದಿಸುವ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲಾಗಿದೆ. 24ಗಿ7 ಸೇವೆ ಲಭ್ಯವಿದ್ದು, ಸೇವೆ ಪೂರ್ಣಗೊಳಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಆರ್. ದಿಲೀಪ್, ಕಾರವಾರ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಕಾರವಾರ ಸಿಪಿಐ ಸಂತೋಷ ಶೆಟ್ಟಿ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.