Advertisement

ನಿರಾಶ್ರಿತರ ಮಕ್ಕಳಿಗೆ ತುರ್ತು ವಸತಿ ಶಾಲೆ​​​​​​​

06:00 AM Aug 26, 2018 | |

ಮಡಿಕೇರಿ: ನಿರಾಶ್ರಿತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಆಗಬಾರದೆಂಬ ಉದ್ದೇಶದಿಂದ ಮಾದಪುರ ಸಮೀಪದಲ್ಲಿ ತಾತ್ಕಾಲಿಕ ವಸತಿ ಶಾಲೆ ನಿರ್ಮಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ವಾಸವಾಗಿರುವಂತಹ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

Advertisement

51 ನಿರಾಶ್ರಿತರ ಕೇಂದ್ರದಲ್ಲಿ ಒಂದರಿಂದ ಪಿಯು ವಿದ್ಯಾಭ್ಯಾಸ ಮಾಡುತ್ತಿರುವ 763 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 273 ವಿದ್ಯಾರ್ಥಿಗಳನ್ನು ನಿರಾಶ್ರಿತರ ಕೇಂದ್ರದ ಸಮೀಪದ ಶಾಲೆಗೆ ಸೇರಿಸಲಾಗಿದೆ.

ಉಳಿದ 490 ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ತಾತ್ಕಾಲಿಕ ವಸತಿ ಶಾಲೆ ನಿರ್ಮಿಸಿಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆ ಪೂರಕವಾದ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇ ಶಕರಿಂದ ಜಿಲ್ಲಾಡಳಿತ ಪಡೆದುಕೊಂಡಿದೆ.

ಮಡಿಕೇರಿ ನಗರದ ಬಹುತೇಕ ಶಾಲೆಗಳುಪುನಾರಂಭವಾಗಿಲ್ಲ. ಸೋಮವಾರದಿಂದ ಈ ಶಾಲೆಗಳನ್ನು ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮಳೆಹಾನಿ ಮತ್ತು ಗುಡ್ಡ ಕುಸಿತದಿಂದ ಸಂಪರ್ಕ ಕಳೆದುಕೊಂಡಿರುವಪ್ರದೇಶಗಳಲ್ಲಿರುವ 61 ಶಾಲೆಗಳು ಇನ್ನೂ ಪುನಾರಂಭವಾಗಿಲ್ಲ ಎಂದು ತಿಳಿದುಬಂದಿದೆ.

ಹಲವು ವಿದ್ಯಾರ್ಥಿಗಳು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳಾಗಬಾರದೆಂಬ ಉದ್ದೇಶದಿಂದ ತಾತ್ಕಾಲಿಕ ವಸತಿ ಶಾಲೆ ತೆರೆಯಲು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಟ್ಟಿಗೆ ಇರುತ್ತಾರೆ. 61 ಶಾಲೆಯ ಶಿಕ್ಷಕರಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ಆದ್ಯತೆ ಮೇರೆಗೆ ವಸತಿ ಶಾಲೆಗೆ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾಹಿತಿ ನೀಡಿದರು.

Advertisement

ಶಿಬಿರಕ್ಕೆ ಶಿಕ್ಷಕರು: ನಿರಾಶ್ರಿತರ ಕೇಂದ್ರದಲ್ಲಿ ಇರುವ ಮಕ್ಕಳಿಗೆ ಇಲಾಖೆಯಿಂದ ಪುಸ್ತಕ, ಡ್ರಾಯಿಂಗ್‌ ಶೀಟ್‌, ಪೆನ್‌, ಪೆನ್ಸಿಲ್‌ ಇತ್ಯಾದಿ ಸಾಮಗ್ರಿಗಳನ್ನು ಈಗಾಗಲೇ ಹಂಚಲಾಗಿದೆ. ಪುನಾರಂಭವಾಗದೇ ಇರುವ ಶಾಲೆಗಳ ಶಿಕ್ಷಕರನ್ನು ವಿವಿಧ ನಿರಾಶ್ರಿತರ ಶಿಬಿರಕ್ಕೆ ನಿಯೋಜಿಸಲಾಗಿದೆ.

ಈ ಶಿಕ್ಷಕರು ಅಲ್ಲಿರುವ ಮಕ್ಕಳಿಗೆ ಶಿಕ್ಷಣ ನೀಡಲಿದ್ದಾರೆ. ಸರ್ಕಾರದಿಂದ ವ್ಯವಸ್ಥೆಯಾದ ನಂತರ ಮುಂದಿನ ಜಾಗಕ್ಕೆ ಮಕ್ಕಳು ಹಾಗೂ ಶಿಕ್ಷಕರನ್ನು ವರ್ಗಾಯಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ವಾಲ್ಟರ್‌ ಡೆಮೆಲ್ಲೋ ವಿವರಿಸಿದರು.

ವಿಶೇಷ ಕಿಟ್‌: ಮಳೆಹಾನಿಯಿಂದ ನಿರಾಶ್ರಿತರಾಗಿರುವ ಕುಟುಂಬದ 763 ಮಕ್ಕಳಿಗೆ ವಿಶೇಷ ಕಿಟ್‌ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಪ್ರಸ್ತಾವನೆ ಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಬ್ಯಾಗ್‌, ಪಠ್ಯಪುಸ್ತಕ,ನೋಟ್‌ ಬುಕ್‌, ಪೆನ್‌, ಪೆನ್ಸಿಲ್‌ ಸೇರಿ
ಮಕ್ಕಳ ಅಗತ್ಯಕ್ಕೆ ಅನುಗುಣವಾದ ಕೆಲವು ವಸ್ತುಗಳನ್ನು ಈ ಕಿಟ್‌ನಲ್ಲಿ ನೀಡುತ್ತೇವೆ.ಜಿಲ್ಲಾಡಳಿತದ ಅನುಮತಿ ದೊರೆತ ಕೂಡಲೇ ಸಾವಿರ ಕಿಟ್‌ ತರಿಸಿ, ಅಗತ್ಯ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುತ್ತೇವೆ ಎಂದರು.

ಅಂಗನವಾಡಿ, ಶಾಲೆಗೆ ಬಿಸ್ಕತ್‌-ಬ್ರೆಡ್‌ ವಿತರಣೆ
ನಿರಾಶ್ರಿತರಿಗಾಗಿ ರಾಜ್ಯದ ವಿವಿಧ ಭಾಗದಿಂದ ಬಂದಿರುವ ಬಿಸ್ಕತ್‌, ಬ್ರೆಡ್‌, ಹಾಲಿನ ಪುಡಿ ಸೇರಿ ವಿವಿಧ ಸಾಮಗ್ರಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿರುವುದನ್ನು ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಡಲು ಜಿಲ್ಲಾಡಳಿತ ಆದೇಶಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ವಸತಿ ನಿಲಯ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಯಲದ ಮಕ್ಕಳಿಗೆ ಮತ್ತು ಆಶ್ರಮ ಶಾಲೆಯ ಮಕ್ಕಳಿಗೆ ಹೆಚ್ಚುವರಿಯಾಗಿರುವ ಅಗತ್ಯ ಸಾಮಗ್ರಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳು, ವಸತಿ ನಿಲಯಗಳು ಮೇಲ್ವಿಚಾರಕರು ತಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ಕೇಂದ್ರದ ಎರಡು ದಾಸ್ತಾನು, ಕುಶಾಲನಗರ, ಪೊನ್ನಂಪೇಟೆಯ ದಾಸ್ತಾನು ಕೇಂದ್ರದಿಂದ ಬಿಸ್ಕತ್‌, ಬ್ರೆಡ್‌, ಹಾಲಿನಪುಡಿ ಪ್ಯಾಕೇಟ್‌ಗಳನ್ನು ಕೊಂಡೊಯ್ಯುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.

ಚಿತ್ರ: ಎಚ್‌. ಫ‌ಕ್ರುದ್ದೀನ್‌
– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next