ಕರ್ನಾಟಕ ಜೀವ ರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತ ಮಸೂದೆ ವಿಧಾನಸಭೆಯಲ್ಲೂ ಅಂಗೀಕಾರಗೊಂಡು ಕಾಯಿದೆ ರೂಪದಲ್ಲಿ ಜಾರಿಗೆ ಬರಲು ತಯಾರಾಗಿದೆ. ಅಪಘಾತ ಸಂಭವಿಸಿದಾಗ ಜೀವ ರಕ್ಷಣೆ ಮಾಡುವ ಸಂದರ್ಭ ಜೀವ ರಕ್ಷಿಸುವ ವ್ಯಕ್ತಿ ಅಥವಾ ವೈದ್ಯರು ಕಾನೂನಿನ ಬಲೆಯಲ್ಲಿ ಸಿಲುಕಿ ಸಮಸ್ಯೆ ಎದುರಿಸುವುದನ್ನು ತಡೆಯುವುದು ಈ ಕಾಯಿದೆಯ ಉದ್ದೇಶ. ಇಂಥ ಒಂದು ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹಿರಿಮೆಯೂ ಕರ್ನಾಟಕಕ್ಕಿದೆ. ಪ್ರತಿ ವರ್ಷ ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಈ ಮಾದರಿಯ ಕಾನೂನು ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅಗತ್ಯವಿದೆ. ರಸ್ತೆ ಅಪಘಾತಕ್ಕೆ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಾರೆ ಮತ್ತು ಇದರ ದುಪ್ಪಟ್ಟಿನಷ್ಟು ಮಂದಿ ಗಾಯಗೊಳ್ಳುತ್ತಾರೆ ಎಂಬ ವರದಿಯೇ ಈ ಕಾನೂನು ದೇಶಕ್ಕೆ ಎಷ್ಟು ಅಗತ್ಯವಿದೆ ಎಂಬುದನ್ನು ತಿಳಿಸುತ್ತದೆ. ಮಾನವೀಯ ಸ್ಪರ್ಶವುಳ್ಳ ಈ ಕಾನೂನನ್ನು ಜಾರಿಗೆ ತಂದಿರುವ ಸರಕಾರ ಅಭಿನಂದನಾರ್ಹ. 2016ರಲ್ಲಿ ರಚನೆಯಾಗಿದ್ದ ಈ ಮಸೂದೆಗೆ ಕಳೆದ ಆಗಸ್ಟ್‌ನಲ್ಲಿ ರಾಷ್ಟ್ರಪತಿ ಯವರ ಅಂಕಿತ ಬಿದ್ದಿತ್ತು. ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶ ನದಲ್ಲಿ ಸರಕಾರ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
ಅಪಘಾತ ಸಂಭವಿಸಿದ ಕೂಡಲೇ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ. ತತ್‌ಕ್ಷಣ ನೀಡುವ ಚಿಕಿತ್ಸೆಯೇ ಎಷ್ಟೋ ಜೀವಗಳನ್ನು ಉಳಿಸಬಲ್ಲುದು. ವೈದ್ಯಕೀಯ ಪರಿಭಾಷೆಯಲ್ಲಿ ತತ್‌ಕ್ಷಣಕ್ಕೆ ನೀಡುವ ಈ ಶುಶ್ರೂಷೆಯನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಎಷ್ಟೋ ಗಾಯಾಳುಗಳು ಗೋಲ್ಡನ್ ಅವರ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಉದಾಹರಣೆಗಳಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ದಯಾಳುಗಳು ಮತ್ತು ಉತ್ಸಾಹಿಗಳು ಸಾಕಷ್ಟಿದ್ದರೂ ಅನಂತರ ಎದುರಿಸಬಹುದಾದ ಕಾನೂನಿನ ತೊಡಕುಗಳು ಅವರನ್ನು ಕಟ್ಟಿ ಹಾಕುತ್ತಿತ್ತು. ಆಸ್ಪತ್ರೆಗಳು ಗಾಯಾಳುವಿನ ಎಲ್ಲ ಹೊಣೆಯನ್ನು ಕರೆತಂದವರ ಮೇಲೆ ಹೊರಿಸುತ್ತಿದ್ದವು. ಪೊಲೀಸರು ಅವರನ್ನೇ ಸಾಕ್ಷಿದಾರರನ್ನಾಗಿಸುತ್ತಿದ್ದರು. ಇದರಿಂದಾಗಿ ಗಾಯಾಳುಗಳನ್ನು ಕರೆತಂದವರು ಮಾಡಿದ ಉಪಕಾರಕ್ಕಾಗಿ ವರ್ಷಾನುಗಟ್ಟಲೆ ಪೊಲೀಸ್ ಠಾಣೆ, ಕೋರ್ಟು ಕಚೇರಿ ಎಂದು ಅಲೆದಾಡುವ ಪ್ರಸಂಗ ಎದುರಾಗುತ್ತಿತ್ತು. ಹೀಗಾಗಿ ಜನಸಾಮಾನ್ಯರು ಅಪರಿಚಿತರ ಪ್ರಾಣ ರಕ್ಷಿಸುವ ಉಸಾಬರಿಯೇ ಬೇಡ ಎಂದು ಅಪಘಾತ ಸ್ಥಳದಿಂದ ಸದ್ದಿಲ್ಲದೆ ಜಾರಿಕೊಳ್ಳುತ್ತಿದ್ದರು. ಇದನ್ನು ನೋಡಿ 2012ರಲ್ಲಿ ಸೇವ್‌ಲೈಫ್ ಫೌಂಡೇಶನ್ ಎಂಬ ಸರಕಾರೇತರ ಸಂಘಟನೆಯೊಂದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಪರಿಣಾಮವೇ ಈ ಕಾಯಿದೆ.
ಗಾಯಾಳುಗಳನ್ನು ರಕ್ಷಿಸುವವರಿಗೆ ಮತ್ತು ಚಿಕಿತ್ಸೆ ನೀಡುವ ವೈದ್ಯರಿಗೆ ಕಾನೂನಿನ ರಕ್ಷಣೆ ಇದೆ ಎಂದಾದರೆ ಅದು ಮಾಡುವ ಧನಾತ್ಮಕ ಪರಿಣಾಮ ಬಹಳವಿದೆ. ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನ ಸಂಖ್ಯೆಯನ್ನು ತಗ್ಗಿಸುವಲ್ಲಿ ಈ ಕಾನೂನು ಪ್ರಮುಖ ಪಾತ್ರ ವಹಿಸಲಿದೆ. ಆದರೆ ನಿಮ್ಮ ಹಿತ ರಕ್ಷಿಸುವ ಈ ಮಾದರಿಯ ಒಂದು ಕಾನೂನು ಇದೆ ಮತ್ತು ಅದನ್ನು ಬಳಸಿಕೊಂಡು ಜೀವಗಳನ್ನು ಉಳಿಸಲು ನೆರವಾಗಬೇಕು ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯ. ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಜೀವ ಉಳಿಸುವವರಿಗೆ ಕಾನೂನಿನ ರಕ್ಷಣೆ ನೀಡುವ ಜತೆಗೆ ಹಣಕಾಸಿನ ರೂಪದಲ್ಲಿ ಪ್ರೋತ್ಸಾಹ ಧನವನ್ನು ನೀಡುವ ಸಲಹೆಯನ್ನೂ ಈ ಸಂದರ್ಭದಲ್ಲಿ ಪರಿಗಣಿಸಬಹುದು. ಇದಕ್ಕಾಗಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಿದರೆ ಇನ್ನೂ ಉತ್ತಮ.
ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರಕಾರ ಪ್ರತ್ಯೇಕ ಬಜೆಟ್ ಅನುದಾನ ಒದಗಿಸಬೇಕು. ಅದೇ ರೀತಿ ಕಾಯಿದೆಯನ್ನು ಅನುಷ್ಠಾನಿಸುವಲ್ಲಿ ಆಸ್ಪತ್ರೆಗಳ ಪಾತ್ರವೂ ಇದೆ. ಎಲ್ಲ ಆಸ್ಪತ್ರೆಗಳಲ್ಲಿ ಜೀವ ಉಳಿಸುವವರ ಹಕ್ಕುಗಳನ್ನು ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಅಂತೆಯೇ ವೈದ್ಯರೂ ಗಾಯಾಳುಗಳನ್ನು ಕರೆತಂದವರನ್ನೇ ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ಓಡಾಡಿಸಬಾರದು. ಮಸೂದೆ ಜಾರಿಯಾದ ಬಳಿಕ ಅದರ ಪ್ರಯೋಜನ ತುರ್ತು ಸಂದರ್ಭದಲ್ಲಿ ಸಿಗುವಂತಾಗಲು ಎಲ್ಲರೂ ಬದ್ಧರಾಗುವುದೂ ಅಷ್ಟೇ ಅಗತ್ಯವಾಗಿದೆ. ಇದಕ್ಕೆ ತಕ್ಕಂತೆ ಜನರ ಮನೋಭಾವ ಬದಲಾಗಿ ಅಂತಿಮವಾಗಿ ಜನರಿಗೆ ಪ್ರಯೋಜನವಾಗುವುದು ಅಗತ್ಯ.