ಬೆಳ್ತಂಗಡಿ: ಪ್ರವಾಹಕ್ಕೆ ಸಿಲುಕಿ ಬೆಳ್ತಂಗಡಿಯಿಂದ ಪುತ್ತೂರು ತಾಲೂಕನ್ನು ಸಂಪರ್ಕಿಸುವ ಮುಗೇರಡ್ಕ ತೂಗು ಸೇತುವೆ ಕೊಚ್ಚಿ ಹೋಗಿದ್ದರಿಂದ ಸಂಪರ್ಕ ಕಲ್ಪಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮುರುಡೇಶ್ವರದಿಂದ ಬೋಟ್ ತರಿಸಿದ್ದಾರೆ.
ಮುಗೇರಡ್ಕದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ಆ.9ರ ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದರಿಂದ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರು ಹತ್ತಾರು ಕಿ.ಮೀ. ಸುತ್ತಿ ಬಳಸಬೇಕಿತ್ತು. ಈಗ ಮುರುಡೇಶ್ವರದಿಂದ ಶ್ರೀ ವಿನಾಯಕ ಟೂರಿಸ್ಟ್‌ನವರ ಬೋಟ್ ತರಿಸಲಾಗಿದೆ.
ಇದರಲ್ಲಿ ಒಂದು ಬಾರಿಗೆ 6ರಿಂದ 7 ಮಂದಿಗೆ ಸಂಚರಿಸಬಹುದಾಗಿದ್ದು, ಶಾಸಕರು ಮಾಸಿಕ 60 ಸಾವಿರ ರೂ. ಬಾಡಿಗೆ ನೀಡಿ ಉಚಿತ ಸೇವೆ ಒದಗಿಸಿದ್ದಾರೆ.
ವಿದ್ಯಾರ್ಥಿಗಳು, ಹೈನುಗಾರರು, ಕೂಲಿ ಕಾರ್ಮಿಕರಿಗೆ ಸೇತುವೆ ಅಗತ್ಯವಿದೆ. ಹತ್ತಾರು ಕಿ.ಮೀ. ಸುತ್ತಿಬಳಸಿ ಬರುವುದನ್ನು ತಪ್ಪಿಸುವ ಸಲುವಾಗಿ ತುರ್ತು ವ್ಯವಸ್ಥೆ ಕಲ್ಪಿಸಲಾಗಿದೆ. ತೂಗು ಸೇತುವೆ ಮರುನಿರ್ಮಾಣದ ಕಡೆಗೂ ಗಮನ ಹರಿಸಲಾಗುವುದು.
-ಹರೀಶ್ ಪೂಂಜ, ಶಾಸಕ