ಸಾಕು ಬಾತುಕೋಳಿಯ ಮೈಕಟ್ಟು ದಪ್ಪ.ಚಿಕ್ಕ ಪುಕ್ಕದ ಬಾಲ. ಬಲವಾದ, ಉದ್ದದ ರೆಕ್ಕೆ, ದಟ್ಟ ಬಿಳಿ ಬಣ್ಣದ ಹೊಳಪಿನ ಗರಿ,ತಿಳಿ ಕಿತ್ತಳೆ ಬಣ್ಣದ ಚುಂಚು, ಚಿಕ್ಕ ಚಿಕ್ಕ ಜಾಲಪಾದವಿರುವ ತಿಳಿ ಕಿತ್ತಳೆ ಬಣ್ಣದ ಕಾಲು ಈ ಹಕ್ಕಿಗೆ ಇದೆ.
ಚಿತ್ರದಲ್ಲಿರುವುದು ಸಾಕು ಬಾತುಕೋಳಿ. ಉತ್ತರ ಸಮುದ್ರದ ಹಕ್ಕಿ. ನೆದರ್ಲೆಂಡ್, ಜರ್ಮನಿಯ ಮೂಲ ನಿವಾಸಿ. ಅಂಡಮಾನ್ ಪ್ರದೇಶದ ಪಕ್ಷಿಯಾದುದರಿಂದ ಇದಕ್ಕೆ (lews) ಎನ್ನುವ ಹೆಸರು ಬಂದಿದೆ. ಇದು ಜರ್ಮನ್ ವೈಟ್ ಮತ್ತು ಅಮೇರಿಕನ್ ವೈಟ್‌ಗಳ ಮಿಶ್ರತಳಿಯಾಗಿದೆ. ಇದು ಬಿಳಿದಾದ ಚಿಕ್ಕ ಬಾತುಕೋಳಿ. ತಿಳಿ ಕಿತ್ತಳೆ ಬಣ್ಣದ ಚುಂಚು, ಚಿಕ್ಕ ಚಿಕ್ಕ ಜಾಲಪಾದವಿರುವ ತಿಳಿ ಕಿತ್ತಳೆ ಬಣ್ಣದ ಕಾಲು ಇದೆ. ಇದು ತುಂಬಾ ವೇಗವಾಗಿ ಬೆಳೆಯುತ್ತದೆ. ಸುಮಾರು 9 ಕಿಲೋ ತೂಕ ಇರುತ್ತದೆ. ಇದರ ಕಾಲು ಚಿಕ್ಕದು. ಆಯತವರ್ತುಲಾಕರದ ತಲೆ, ಉದ್ದವಾದ ಕುತ್ತಿಗೆ, ಸಮುದ್ರ ನೀಲಿ ಬಣ್ಣದ ಕಣ್ಣು, ದೇಹವು ವರ್ತುಲಾಕಾರವಾಗಿ ದುಂಡಗಿದೆ.
ದಪ್ಪವಾದ ಮೈಕಟ್ಟು, ಚಿಕ್ಕ ಪುಕ್ಕದ ಬಾಲ ಇದೆ. ಇದರ ರೆಕ್ಕೆ ತುಂಬಾ ಬಲವಾಗಿದೆ ಮತ್ತು ಉದ್ದದ ರಕ್ಕೆಗಳಿವೆ. ಇದರ ಗರಿ ತುಂಬಾ ದಟ್ಟವಾಗಿದ್ದು ಬಿಳಿ ಬಣ್ಣದ ಹೊಳಪಿನ ಗರಿಗಳಿವೆ. ಹುಲ್ಲು ಮತ್ತು ನೀರಿರುವ ಜಾಗದಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಇದು ಶೀತ ಪ್ರದೇಶದಲ್ಲೂ ಮತ್ತು ಸಮಶೀತೋಷ್ಣ ಪ್ರದೇಶದಲ್ಲು ಮರಿ ಮಾಡುತ್ತದೆ. ಗಂಡು ಹಕ್ಕಿ ಹೆಣ್ಣು ಹಕ್ಕಿಗಿಂತ ಸ್ವಲ್ಪ ದೊಡ್ಡದಾಗಿದ್ದು ಸ್ವಲ್ಪ ದೊಡ್ಡ ಧ್ವನಿಯನ್ನು ಹೊರಡಿಸುತ್ತದೆ. ಗಂಡು ಹೆಣ್ಣು ಎರಡೂ ಹಿಸ್ಸೀಸ್ ಎಂದು ಧ್ವನಿ ಹೊರಡಿಸುತ್ತಾ ಮೊಟ್ಟೆ ಮತ್ತು ಮರಿಗಳನ್ನು ಕಾಪಾಡುತ್ತವೆ. ಕೆಲವೊಮ್ಮೆ ಇತರ ಬಾತುಗಳಂತಯೇ ಕೊಕ್ ಕೊಕ್ ಎಂದು ಧ್ವನಿ ಹೊರಡಿಸುತ್ತದೆ. ಕೆಲವೊಮ್ಮೆ ವೈರಿಗಳಿಂದ ಮರಿಗಳನ್ನು ಕಾಪಾಡಲು ರೆಕ್ಕೆ ಬಿಚ್ಚಿ ಕುಪ್ಪಳಿಸುತ್ತಾ ಒಂದು ಪ್ರಕಾರದ ಗಡಸು ಧ್ವನಿಯನ್ನು ಹೊರಡಿಸಿ ವೈರಿಗಳನ್ನು ಹಿಮ್ಮೆಟ್ಟಿಸುತ್ತವೆ. ಗುಡವಿ ಪಕ್ಷಿಧಾಮದ ದಾರಿಯಲ್ಲಿ ಬನವಾಸಿಗೆ ಸಮೀಪದ ನೀರಿನ ಹೊಂಡಗಳಲ್ಲಿ ಈ ಹಕ್ಕಿ ಕಾಣಿಸಿದೆ. ಬೆಂಗಳೂರಿನ ದೊರೆ ಕೆರೆಯಲ್ಲಿ ಸ್ಪಾಟ್‌ಬಿಲ್, ಫೆಲಿಕನ್, ನೀರು ಕಾಗೆ, ಕಪ್ಪುರೆಕ್ಕೆ ಮೆಟ್ ಗೋಲ್ ಹಕ್ಕಿ ಇವುಗಳ ಜೊತೆಯಲ್ಲೂ ಕಾಣಿಸಿದೆ. ಮರಿಗಳನ್ನು ವೈರಿಗಳಿಂದ ಕಾಪಾಡಲು ತಮ್ಮ ರೆಕ್ಕೆಯನ್ನು ಆಯುಧದಂತೆ ಉಪಯೋಗಿಸಿ ಪ್ರತಿರೋಧ ವ್ಯಕ್ತ ಪಡಿಸುತ್ತದೆ. ಇವು ಬಹಳ ದೂರ ವಲಸೆ ಹೋಗುವುದಿಲ್ಲ. ಇದು ಮರಿಯಾಗಿ 2-3 ವರ್ಷಗಳಲ್ಲಿ ಪ್ರೌಢಾವಸ್ಥೆಗೆ ಬರುತ್ತದೆ. ಆಗ ಮಿಲನಕ್ಕೆ ಸಿದ್ಧವಾಗುವುದು. ವರ್ಷದ ಆರಂಭದಿಂದಲೇ ಮೊಟ್ಟೆ ಇಡಲು ಪ್ರಾರಂಭಿಸುವುದು ಇದರ ವಿಶೇಷ. ಫೆಬ್ರವರಿಯಿಂದ ಮೊಟ್ಟೆ ಇಡಲು ಆರಂಭಿಸಿ 30 ರಿಂದ 40 ಮೊಟ್ಟೆ ಇಡುತ್ತದೆ. ವಸಂತಕಾಲ ಆರಂಭವಾದಂತೆಯೇ ಕಾವು ಕೊಟ್ಟು 28 ರಿಂದ 34 ದಿನಗಳವರೆಗೆ ಕಾವು ಕೊಟ್ಟಾಗ ಮರಿಯಾಗುತ್ತದೆ. ಗಂಡು ಹೆಣ್ಣು ಎರಡೂ ಸರತಿಯಂತೆ ಕಾವು ಕೊಟ್ಟು ಮರಿ ಮಾಡಿ, ಮರಿಗಳ ಪೋಷಣೆ ಮಾಡುತ್ತವೆ. ಮರಿ 4 ರಿಂದ 4.5 ಕೆ. ಜಿ. ಭಾರ ಇರುತ್ತದೆ. ಇದರಲ್ಲಿ ಅನೇಕ ಮಿಶ್ರ ತಳಿಗಳಿವೆ.
ಪಿ. ವಿ. ಭಟ್ ಮೂರೂರು