Advertisement

Foeticide: ಭ್ರೂಣ ಹತ್ಯೆ- ಪರಿಶೀಲನ ಕಾರ್ಯಾಚರಣೆ ಚುರುಕು

12:02 AM Nov 29, 2023 | Team Udayavani |

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಶೀಲನ ಕಾರ್ಯ ಚುರುಕುಗೊಳಿಸಿದ್ದು, ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ಲ್ಯಾಬ್‌ ಹಾಗೂ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.

Advertisement

ಪ್ರಕರಣ ಬೆಳಕಿಗೆ ಬಂದ ಅನಂತರ ಎಚ್ಚೆತ್ತಿರುವ ಮೈಸೂರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಿಲ್ಲಾದ್ಯಂತ ಪರಿಶೀಲನ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ. ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮೈಸೂರಿನಲ್ಲೂ ಭ್ರೂಣ ಹತ್ಯೆ ಪ್ರಕರಣ ನಡೆದಿರುವುದು ಚರ್ಚೆಗೆ ಗ್ರಾಸವಾಯಿತು.

ಮಾಧ್ಯಮಗಳಲ್ಲಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಡೆದಿರುವ ಬಗ್ಗೆ ವರದಿಯಾಗುತ್ತಿದೆ. ಸಂಬಂಧಪಟ್ಟ ಆಸ್ಪತ್ರೆ ಬಗ್ಗೆ ಮಾಹಿತಿ ಇದೆಯಾ ಎಂದು ಸಭೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ಆಸ್ಪತ್ರೆ, ಲ್ಯಾಬ್‌ ಹಾಗೂ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ ಇಡುವುದು ಮತ್ತು ಅವುಗಳ ಕಾರ್ಯಾಚರಣೆ ಬಗ್ಗೆ ತಿಳಿಯಲು ಜಿಲ್ಲಾದ್ಯಂತ ಪರಿಶೀಲನೆ ನಡೆಸಲಾಗುವುದು ಎಂದರು.

ಮುಂಜಾಗ್ರತೆ ವಹಿಸಲು ಸೂಚನೆ

ನಗರ ವ್ಯಾಪ್ತಿಯಲ್ಲಿ ಪಾಲಿಕೆ ಅಧಿಕಾರಿಗಳು ವೈದ್ಯಕೀಯ ಸೇವೆ ಹೆಸರಿನಲ್ಲಿ ಅಕ್ರಮಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಭ್ರೂಣ ಹತ್ಯೆ ಸಂಬಂಧ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಭಾಗಿ ಇದ್ದರೆ ಅವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಆರೋಗ್ಯ ಇಲಾಖೆಯ ಲೋಪದೋಷ

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಮಂಡ್ಯ ಜಿಲ್ಲಾಡಳಿತದ ಆರೋಗ್ಯ, ಕಂದಾಯ ಹಾಗೂ ಲೋಕಾಯುಕ್ತ ಅಧಿಕಾರಿಗಳು ಹಾಡ್ಯ ಗ್ರಾಮದ ಆಲೆಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭ್ರೂಣ ಪತ್ತೆ ಹೇಗೆಲ್ಲ ನಡೆಯುತಿತ್ತು ಎಂಬುದನ್ನು ಸ್ಥಳೀಯರಿಂದಲೂ ಮಾಹಿತಿ ಕಲೆ ಹಾಕಿದರು. ಆಲೆಮನೆ ಮಾಲಕರು, ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ವಿಶೇಷ ತಂಡ ರಚನೆ

ಪ್ರಕರಣ ನಡೆದಿದೆ ಎನ್ನಲಾದ ಆಲೆಮನೆ ಒಂಟಿ ಶೆಡ್‌ಗಳ ಪರಿಶೀಲನೆಗೆ ವಿಶೇಷ ತಂಡ ರಚಿಸಲಾಗಿದೆ. ಇದರ ಬಗ್ಗೆ ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ಮೂರು ಆರೋಪಿತರಿಂದ ಮಾಹಿತಿ ತಿಳಿದಿದೆ. ಸಾರ್ವಜನಿಕರು ಈ ತರಹದ ಕೃತ್ಯ ಕಂಡು ಬಂದರೆ ಮಾಹಿತಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕೆ.ಮೋಹನ್‌ ತಿಳಿಸಿದ್ದಾರೆ.

ರಾಮನಗರದಲ್ಲೂ ಶಂಕೆ

ಇತ್ತೀಚೆಗೆ ಆರೋಗ್ಯ ಇಲಾಖೆ ರಾಜ್ಯಮಟ್ಟದ ಸಭೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ವರದಿಯಾಗಿತ್ತು. 2017ರಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ವರದಿ ನೀಡಿದ್ದ ಮಕ್ಕಳ ಹಕ್ಕುಗಳ ರಕ್ಷಣ ಸಮಿತಿ ಮಂಡ್ಯದ ಅನಂತರ ರಾಮನಗರದಲ್ಲಿ ಭ್ರೂಣ ಹತ್ಯೆ ಮತ್ತು ಸ್ತ್ರೀ ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಉಲ್ಲೇಖ ಮಾಡಿತ್ತು.

ಆರೋಗ್ಯ ಇಲಾಖೆಯ ಲೋಪದೋಷ

ಬೆಂಗಳೂರು, ನ. 28: ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಲೋಪದೋಷಗಳು ಕಂಡು ಬಂದಿವೆ ಎಂದು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿ ವೈದ್ಯ ಚಂದನ್‌ ಬಲ್ಲಾಳ್‌, ತನ್ನ ಆಸ್ಪತ್ರೆಯನ್ನು ಕೆಪಿಎಂಇ (ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷನ್‌ಮೆಂಟ್‌) ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ ಎಂಬುದು ಗೊತ್ತಾಗಿದೆ. ಅದನ್ನು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದರು. ಮತ್ತೂಂದೆಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಹಿಳೆ ಸೇರಿ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಪೈಕಿ ಒಬ್ಟಾತ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ಜತೆ 2021ರಲ್ಲಿ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಸ್ಕ್ಯಾನಿಂಗ್‌ ಯಂತ್ರ ಕೊಟ್ಟಿದ್ದ ಸಿದ್ದೇಶ್‌

ಪ್ರಕರಣದ ಮೊದಲ ಆರೋಪಿ, ಮಧ್ಯವರ್ತಿ ಶಿವಲಿಂಗೇಗೌಡನ ಪತ್ನಿ ಸುನಂದಾ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವೀರೇಶ್‌ ಸ್ನೇಹಿತ ಸಿದ್ದೇಶ್‌ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸಿದ್ದೇಶ್‌, ಕೈಯಲ್ಲಿ ಕೊಂಡೊಯ್ಯುವ ಸ್ಕ್ಯಾನಿಂಗ್‌ ಯಂತ್ರಗಳನ್ನು ವೀರೇಶ್‌ಗೆ ನೀಡಿದ್ದಾನೆ. ಆದರೆ, ಆರೋಗ್ಯ ಇಲಾಖೆ ಪ್ರಕಾರ ಇಂತಹ ಯಂತ್ರಗಳನ್ನು ಐಸಿಯು ಅಥವಾ ಶಸ್ತ್ರ ಚಿಕಿತ್ಸೆ ಕೋಣೆಯಲ್ಲಿ ಮಾತ್ರ ಇಡಬೇಕು. ಅಲ್ಲದೆ, ಕೆಲವು ವೈದ್ಯರು ಮಾತ್ರ ಈ ಯಂತ್ರ ಖರೀದಿಸಿದ್ದಾರೆ. ಹೀಗಾಗಿ ಯಂತ್ರದ ಮಾಡೆಲ್‌ ಹಾಗೂ ಇತರ ಮಾಹಿತಿ ಪಡೆದು ಯಾವ ವೈದ್ಯರ ಹೆಸರಿಗೆ ಯಂತ್ರ ಕೊಡಲಾಗಿತ್ತು ಸೇರಿ ಯಂತ್ರದ ಎಲ್ಲ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗುತ್ತದೆ. ಇನ್ನು ಶಿವಲಿಂಗೇಗೌಡನ ಪತ್ನಿ ಸುನಂದಾ, ತನಗೆ ಪರಿಚಯ ಇರುವ ಮಹಿಳೆಯರಿಗೆ ಗರ್ಭಪಾತ ಮಾಡಿಸುತ್ತಿದ್ದಳು. ಪತಿಯ ಸೂಚನೆ ಮೇರೆಗೆ ಅಕ್ರಮ ದಂಧೆಯಲ್ಲಿ ತೊಡಗಿದ್ದಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

3 ತಿಂಗಳು, 242 ಗರ್ಭಪಾತ

ಪ್ರಕರಣದ ವಿಚಾರಣೆಯಲ್ಲಿ ಬಂಧಿತರು, 3 ವರ್ಷಗಳಿಂದ ಬರೋಬ್ಬರಿ 900ಕ್ಕೂ ಹೆಚ್ಚು ಗರ್ಭಪಾತ ಮಾಡಿದ್ದಾರೆಂಬ ಮಾಹಿತಿ ಇದೆ. ಈ ಹಿಂದೆ ಪ್ರತಿ ತಿಂಗಳು 25-27 ಗರ್ಭಪಾತ ಮಾಡುತ್ತಿದ್ದರೆ, 2023ರ ಜುಲೈ 21ರಿಂದ ಅಕ್ಟೋಬರ್‌ 16 ರವರೆಗೆ ಬರೋಬ್ಬರಿ 242 ಗರ್ಭಪಾತ ಮಾಡಿದ್ದಾರೆ. ಅಂದರೆ ಪ್ರತಿ ತಿಂಗಳಿಗೆ 70-80 ಗರ್ಭಪಾತ ಮಾಡಿದ್ದಾರೆ. ಮೂರು ವರ್ಷದಲ್ಲಿ ಗರ್ಭಪಾತ ಮಾಡಿದ ಸಂಖ್ಯೆ ಸಾವಿರ ಗಡಿ ದಾಟಿರುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next