Advertisement

ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ; ಅಮರನಾಥ ಪಾಟೀಲ್

04:51 PM Jan 13, 2021 | Team Udayavani |

ಕಲಬುರಗಿ: ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂದು ವಿಧಾನ ಪರಿಷತ್‌ ಮಾಜಿ
ಸದಸ್ಯ ಅಮರನಾಥ ಪಾಟೀಲ್‌ ಹೇಳಿದರು.

Advertisement

ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್‌. ಶಿವರಾಮೇಗೌಡರ ಬಣ), ಕಲಾವೈಭವ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶಭಕ್ತರು. ತಮ್ಮ ಸಂದೇಶಗಳ ಮೂಲಕ ಬ್ರಿಟಿಷರ ದಾಸ್ಯದಲ್ಲಿ ನರಳುತ್ತಿದ್ದ
ಭಾರತೀಯರಿಗೆ ಸ್ಫೂರ್ತಿ ತುಂಬಿ, ಸ್ವಾತಂತ್ರ್ಯ ಸಂಗ್ರಾಮ ರೂಪಿಸುವ ನಾಯಕರನ್ನು ನಿರ್ಮಿಸಿದರು. ಹೀಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.

ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಾದವರಲ್ಲ. ಇಡೀ ವಿಶ್ವವೇ ಅವರ ಸಂದೇಶಗಳನ್ನು ಗೌರವಿಸಿ, ಅನುಸರಣೆ ಮಾಡುತ್ತಿದೆ. ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಅವರ ಜನ್ಮ ದಿನಾಚರಣೆ ಆಚರಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅವರು ನಿಜಕ್ಕೂ ವಿಶ್ವಮಾನ್ಯ ಮತ್ತು ವಿಶ್ವ ಮಾನವರೇ ಸರಿ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ್‌ ಮಾತನಾಡಿ, ಸ್ವಾರ್ಥಿಗಳು, ಢೋಂಗಿಗಳು, ಆಷಾಢ ಭೂತಿಗಳೇ ಹೆಚ್ಚಾಗುತ್ತಿರುವ ಇಂದಿನ
ದಿನಗಳಲ್ಲಿ ವಿವೇಕಾನಂದರ ಸಂದೇಶಗಳು ಹೆಚ್ಚಿನ ಮಹತ್ವ ಪಡೆದುಕೊಂಡಿವೆ. ದೇಶಕ್ಕಾಗಿ ನಾನು ಎಂಬುವವರಿಗಿಂತ, ನನಗಾಗಿ ದೇಶ ಎನ್ನುವವರ ಸಂಖ್ಯೆ
ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಎಚ್‌.ನಿರಗುಡಿ ಮಾತನಾಡಿ, ವಿದ್ಯಾರ್ಥಿಗಳು, ಯುವಜನರು ವಿವೇಕಾನಂದರ ಜೀವನ ಚರಿತ್ರೆ ಓದುವ
ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಸಮಾಜದ ನ್ಯೂನತೆ ಸರಿಪಡಿಸಲು ಪ್ರತಿಯೊಬ್ಬರು ಕಟಿಬದ್ಧರಾಗಬೇಕು ಎಂದರು.

Advertisement

ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಸರ್ಗ ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್‌, ಕಾಂಗ್ರೆಸ್‌
ಯುವ ಮುಖಂಡ ಮಲ್ಲಿಕಾರ್ಜುನ ನೀಲೂರ್‌, ಚಂದ್ರಶೇಖರ ಜಮಾದಾರ್‌ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next