ದಾವಣಗೆರೆ: ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಯುತ್ಸ್ ರೂರಲ್ ಡೆವಲಪ್‌ಮೆಂಟ್ ಆರ್ಗನೈಜೇಷನ್ ಮತ್ತು ಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಉದ್ಯಮಶೀಲತಾ ಅರಿವು ಕಾರ್ಯಕ್ರಮ ನಗರದ ಬಾಪೂಜಿ ಪಾಲಿಟೆಕ್ನಿಕ್ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಲೀಡ್ ಬ್ಯಾಂಕ್‌ನ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಸುಶೃತ್ ಡಿ. ಶಾಸ್ತ್ರೀ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರದ ವಿವಿಧ ಯೋಜನೆಗಳ ಕುರಿತು ತಿಳಿಸಿದ ಅವರು ಉದ್ಯಮದಾರರಾಗುವ ಹಂತದಲ್ಲಿ ಎದುರಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿದರು. ಬಾಪೂಜಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ನಾಗರಾಜಪ್ಪ ಡಿ. ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಠಿಣ ಪರಿಶ್ರಮದಿಂದ ಛಲ ಬಿಡದೆ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಲ್ಲಿ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯ. ಉದ್ಯಮದಾರರು ಸದಾ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ದಾವಣಗೆರೆಯ ಯೂತ್ಸ್ ರೂರಲ್ ಡೆವಲಪ್‌ಮೆಂಟ್ ಆರ್ಗನೈ ಜೇಷನ್‌ನ ಅಧ್ಯಕ್ಷ ರಮೇಶ ಬಿ. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಉದ್ಯವನ್ನು ಸ್ಥಾಪಿಸುವುದಷ್ಟೇ ಅಲ್ಲದೇ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋದರೆ ಖಂಡಿತವಾಗಿಯೂ ಯಶಸ್ವಿ ಉದ್ಯಮದಾರರಾಗಲು ಸಾಧ್ಯ ಎಂದರು. ಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆಯ ಕಾರ್ಯದರ್ಶಿ ಪ್ರವೀಣಕುಮಾರ ಎಸ್. ಮಾತನಾಡಿ, ಯುವಜನತೆ ಸ್ವ-ಉದ್ಯಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದು ಸಂತಸದ ವಿಷಯ.
ಮೊದಲು ಸಣ್ಣ ಪ್ರಮಾಣದಲ್ಲಿ ಉದ್ಯಮ ಸ್ಥಾಪಿಸಿ ಛಲ ಬಿಡದೆ ಸತತ ಪ್ರಯತ್ನ ಮಾಡಿದರೆ ಖಂಡಿತ ಉದ್ಯಮದಲ್ಲಿ ಯಶಸ್ಸು ಗಳಿಸಬಹುದು ಎಂದರು. ಉದ್ಯಮಶೀಲತಾಭಿವೃದ್ಧಿ ಕೋಶದ ಸಂಯೋಜಕ ಮಹೇಶ್ವರಪ್ಪ ಕೆ.ಎನ್. ತರಬೇತಿಯಲ್ಲಿ ಉದ್ಯಮಶೀಲರ ಗುಣಲಕ್ಷಣಗಳು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು. ಉದ್ಯಮವನ್ನು ಯಾವ ರೀತಿಯಲ್ಲಿ ಪ್ರಾರಂಭಿಸಬೇಕು.
ಉದ್ಯಮ ಆರಂಭಿಸಲು ಇರುವಂತಹ ಅವಕಾಶಗಳನ್ನು ಗುರುತಿಸುವುದು ಹೇಗೆ, ಸವಾಲುಗಳು ಎದುರಿಸುವ ಬಗೆ, ಸರ್ಕಾರಿ ಯೋಜನೆಗಳ ಮತ್ತು ವಿವಿಧ ಇಲಾಖೆಗಳ ಕುರಿತು ಬಗ್ಗೆ ಮಾಹಿತಿ ನೀಡುವುದರ ಜತೆಗೆ ಯಾವ ರೀತಿಯಲ್ಲಿ ಪಡೆದುಕೊಳ್ಳುವ ಹಂತಗಳ ಬಗ್ಗೆ ತಿಳಿಸಿದರು. ಶಿಬಿರಾರ್ಥಿ ಆಶಾ ಪ್ರಾರ್ಥಿಸಿದರು, ಬಸವರಾಜ ಜಿ. ಬಿ. ಸ್ವಾಗತಿಸಿದರು. ಸವಿತಾ ನಿರೂಪಿಸಿದರು.