Advertisement
ವಾಸ್ತವದಲ್ಲಿ ಕಣ್ಣುಗಳು ಕುರುಡಾಗಿರುವುದಿಲ್ಲ, ಆದರೆ ಎದೆಗೂಡಿನೊಳಗಿರುವ ಹೃದಯ ಕುರುಡಾಗಿಬಿಡುತ್ತದೆ – ಕುರಾನ್ 22:46
Related Articles
Advertisement
ಆದರೆ ಶೈಮಾ ಮಾತ್ರ, ನನ್ನ ತಂಗಿ ಅಡ್ಡಾಡುವಂತಾಗುವವರೆಗೂ ನಿಮ್ಮ ಆಸ್ಪತ್ರೆಯಲ್ಲೇ ಇಟ್ಟುಕೊಳ್ಳಿ ಎಂದಳು. ಆದರೆ ದೇಶದ ಮುಂಚೂಣಿ ಆರ್ಥೋಪೀಡಿಕ್ ವೈದ್ಯರಾಗಿರುವ ಮೋದಿ ಅವರ ಸಲಹೆಯನ್ನು ಕೇಳಿದ್ದ ನಾವು, ‘ಎಮಾನ್‌ಳನ್ನು ಆಸ್ಪತ್ರೆಯಲ್ಲೇ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ’ ಎಂದೆವು. ಆಗ ಶೈಮಾ, ‘ಎಮಾನ್ ಅಡ್ಡಾಡುವಂತೆ ಮಾಡುತ್ತೇವೆಂದು ಅಬುಧಾಬಿಯ ವೈದ್ಯರು ಭರವಸೆ ನೀಡಿದ್ದಾರೆ’ ಎಂದಳು. ಆಗ ನಾವು ‘ಸುಮ್ಮ ಸುಮ್ಮನೇ ಭರವಸೆ ಕೊಡುವುದಕ್ಕೆ ನಮಗೆ ಸಾಧ್ಯವಿಲ್ಲ’ ಎಂದು ವಿವರಿಸಿದೆವು. ಭಾರತೀಯ ವೈದ್ಯರು ಮತ್ತು ಆಸ್ಪತ್ರೆಯ ಮೇಲೆ ಶೈಮಾಳ ಸಿಟ್ಟಿಗೇ ಈ ಸಂಗತಿಯೇ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಆಕೆ ನಮ್ಮ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆ ಮಾಡತೊಡಗಿದಳು. ಮಾಧ್ಯಮಗಳೂ ನಮ್ಮ ಬಗ್ಗೆ ವರದಿ ಮಾಡತೊಡಗಿದವು. ಆದರೆ ನಮ್ಮ ವೈದ್ಯಕೀಯ ತಂಡ ಮಾತ್ರ ತನ್ನ ಗಮನವನ್ನೆಲ್ಲ ರೋಗಿಯ ಕಾಳಜಿಗೇ ಮೀಸಲಿಟ್ಟಿತು. ಮಾಧ್ಯಮಗಳಲ್ಲಿ ಬಿತ್ತರವಾದ ಈ ಸುಳ್ಳು ಆರೋಪಗಳಿಗೆ ನಾವು ಮೊದಲಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ನಾನು ಮೌನ ಮುರಿದದ್ದು ಒಂದೇ ಬಾರಿ. ಅದೂ ಈಜಿಪ್ತ್ನ ಮಾಧ್ಯಮಗಳೆದುರು; ಭಾರತೀಯ ವೈದ್ಯರನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ. ಅಷ್ಟೇ ಅಲ್ಲದೆ, ಸಾವಿರಾರು ಭಾರತೀಯರು ಎಮಾನ್‌ಳ ಚಿಕಿತ್ಸೆ ಮತ್ತು ಪ್ರಯಾಣಕ್ಕಾಗಿ ದೇಣಿಗೆ ನೀಡಿರುವುದರಿಂದ ನಾನು ಮಾತನಾಡಬೇಕಾಯಿತು (ಎಮಾನ್‌ಳಿಗೆ ನಾವು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ, ನಮ್ಮ ತಂಡದಲ್ಲಿನ ವೈದ್ಯರೆಲ್ಲರೂ ಶುಲ್ಕ ಪಡೆಯದೇ ಕಾರ್ಯನಿರ್ವಹಿಸಿದ್ದಾರೆ)
*** 2016ರ ಸೆಪ್ಟೆಂಬರ್ ತಿಂಗಳಲ್ಲಿ ಜಗತ್ತಿನ ಮಾಧ್ಯಮಗಳು ವಿಶ್ವದ ಅತ್ಯಂತ ದಢೂತಿ ಮಹಿಳೆ ಎಂದು ಎಮಾನ್ ಕುರಿತು ವರದಿ ಮಾಡುವವರೆಗೂ ಆಕೆಯ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದೇ ತಿಂಗಳ ಅಂತ್ಯದಲ್ಲಿ ‘ನನ್ನ ತಂಗಿಗೆ ಚಿಕಿತ್ಸೆ ನೀಡಿ’ ಎಂಬ ಪತ್ರ ಶೈಮಾಳಿಂದ ನನಗೆ ಬಂತು. ಸೌದಿ ಅರೇಬಿಯಾದ ಪರಿಚಿತ ವೈದ್ಯರೊಬ್ಬರೂ ‘ಎಮಾನ್‌ಳಿಗೆ ಚಿಕಿತ್ಸೆ ಕೊಡುತ್ತೀರಾ? ಯೋಚಿಸಿ ನೋಡಿ..’ ಎಂದು ಹೇಳಿದರು. 25 ವರ್ಷದಿಂದ ಹಾಸಿಗೆಯಲ್ಲೇ ಜೀವತ್ಛವವಾಗಿದ್ದ ಮಹಿಳೆಗೆ ಸಹಾಯ ಮಾಡುವುದಿಲ್ಲ ಎಂದು ಒಬ್ಬ ವೈದ್ಯನಾಗಿ ನನಗೆ ಹೇಳಲಾಗಲಿಲ್ಲ. ಎಮಾನ್ ಮತ್ತಾಕೆಯ ಕುಟುಂಬವನ್ನು ನೋಡಲು ನಾನು ಎರಡು ಬಾರಿ ಅಲೆಕ್ಸಾಂಡ್ರಿಯಾಕ್ಕೆ ಹೋಗಿಬಂದೆ. ನಾನು ಪ್ರಚಾರಕ್ಕಾಗಿ ಈ ಚಿಕಿತ್ಸೆಗೆ ಒಪ್ಪಿಕೊಂಡೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಎಮಾನ್ ಕುಟುಂಬದ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ, ಆಕೆಯನ್ನು ಮುಂಬೈಗೆ ಕರೆತರಲು ಪ್ರಯತ್ನಿಸುತ್ತಿದ್ದೇನೆ ಎನ್ನುವುದು ಮಾಧ್ಯಮದವರಿಗೆ ಬಿಡಿ, ಖುದ್ದು ನನ್ನ ಸಹೋದ್ಯೋಗಿಗಳಿಗೂ ಗೊತ್ತಿರಲಿಲ್ಲ. ಈ ಪ್ರಕರಣ ಮಾಧ್ಯಮಗಳಿಗೆ ತಿಳಿದದ್ದು ನಾನು ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿದ ಮೇಲೆಯೇ. ಎಮಾನ್‌ಳಿಗೆ ಎದ್ದು ಓಡಾಡಲು ಸಾಧ್ಯವಾಗದ ಕಾರಣ ಆಕೆಗೆ ಫಾರ್ಮಾಲಿಟಿ ಮುಗಿಸಿ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಆಗ ಅನಿವಾರ್ಯವಾಗಿ ನಾನು ಸಹಾಯ ಕೋರಿ ನಮ್ಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ವಿಟರ್‌ನಲ್ಲಿ ಸಂಪರ್ಕಿಸಿದೆ. ಸ್ವರಾಜ್ ಕೂಡಲೇ ವೀಸಾದ ವ್ಯವಸ್ಥೆ ಮಾಡಿಸಿದರು.
***
ಎಮಾನ್‌ಳ ವೈದ್ಯಕೀಯ ದಾಖಲೆಗಳನ್ನು ನೋಡಿದಾಗ ಒಬ್ಬ ಬಾರಿಯಾಟ್ರಿಕ್ ಸರ್ಜನ್ ಕೊಡಬಹುದಾದ ಭರವಸೆಯನ್ನೇ ನಾನು ಕೊಟ್ಟೆನಷ್ಟೆ. ಆಕೆ ಎದ್ದು ಅಡ್ಡಾಡುವಂತೆ ಮಾಡುತ್ತೇನೆ ಎಂದು ನಾನು ಶೈಮಾಗೆ ಹೇಳಿರಲಿಲ್ಲ. ಈ ವಿಷಯದಲ್ಲಿ ಆಕೆ ಸುಳ್ಳು ಹೇಳುತ್ತಿದ್ದಾಳೆ. ಭರವಸೆ ನೀಡಿದಂತೆಯೇ ಎಮಾನ್‌ತೂಕವನ್ನು ಇಳಿಸಿದ್ದೇನೆ. ಅಷ್ಟಕ್ಕೂ ನಾನು ಬಾರಿಯಾಟ್ರಿಕ್ ಸರ್ಜನನೇ ಹೊರತು ಮೂಳೆ ಚಿಕಿತ್ಸಕನಲ್ಲವಲ್ಲ. ದಯವಿಟ್ಟೂ ಒಂದು ವಿಷಯ ನೆನಪಿಡಿ. ಎಮಾನ್ ಮುಂಬೈಗೆ ಬಂದಾಗ ಆಕೆಯ ಭಾರ 500 ಕೆ.ಜಿಯಿತ್ತು. ದೇಹದ ಅಗಲ 5 ಅಡಿಯಷ್ಟಿತ್ತು. ಹೀಗಾಗಿ ನಾವು ಆಕೆಯ ಗಾತ್ರಕ್ಕೆ ತಕ್ಕಂಥ ವಿಶೇಷ ಕಾರ್ಗೋ ವಿಮಾನವನ್ನು ಪಡೆದು, ಅದರಲ್ಲಿ ವೈದ್ಯಕೀಯ ಪರಿಕರಗಳನ್ನು ಅಳವಡಿಸಿದೆವು. ಏರ್‌ಪೋರ್ಟ್‌ಗೆ ಕರೆತರಲು ಆಕೆಯ ಮನೆಯ ಗೋಡೆಯನ್ನು ಒಡೆಸಬೇಕಾಯಿತು. ಮುಂಬೈನಲ್ಲಿ ನಮ್ಮ ಆಸ್ಪತ್ರೆಯ ಲಿಫ್ಟ್ ಎಮಾನ್ ಗಾತ್ರಕ್ಕೆ ಸರಿಹೊಂದುವುದಿಲ್ಲವಾದ್ದರಿಂದ, ಚಿಕಿತ್ಸಾ ಕೊಠಡಿಗೆ ಸಾಗಿಸಲು ಕ್ರೇನ್ ಬಳಸಿದೆವು. ಈ ಯಾವ ಕೆಲಸವೂ ಸರಳವಾಗಿರಲಿಲ್ಲ ಮತ್ತು ಅಪಾಯದಿಂದಲೂ ಹೊರತಾಗಿರಲಿಲ್ಲ. ಎಮಾನ್‌ಳಿಗಾಗಿಯೇ 550 ಕೆಜಿ ಸಾಮರ್ಥ್ಯದ ವಿಶೇಷ ಬೆಡ್ ಅನ್ನು ಉತ್ಪಾದಕ ಕಂಪನಿಯಿಂದ ತರಿಸಿಕೊಂಡೆವು. ತೂಕ ಮಾಪಕವನ್ನೂ ಹೊಂದಿದ್ದ ಈ ಬೆಡ್ ಅನ್ನು ಆ ಕಂಪನಿ ಉಚಿತವಾಗಿ ನೀಡಿ ಹೃದಯವೈಶಾಲ್ಯ ಮೆರೆಯಿತು. ನಾವು ಎಮಾನ್‌ಳ ತೂಕವನ್ನು ಪರೀಕ್ಷಿಸಿಲ್ಲ ಎಂದು ಶೈಮಾ ಆರೋಪಿಸಿದ್ದಾಳಾದ್ದರಿಂದ ಇದನ್ನೆಲ್ಲ ಹೇಳಬೇಕಾಗಿದೆ. ಚಿಕಿತ್ಸೆಯ ನಂತರ ಆಕೆಯ ಭಾರ ಗಣನೀಯವಾಗಿ ಕಡಿಮೆಯಾದ ಮೇಲೆ, 250 ಕೆ.ಜಿ ಭಾರ ಹೊರುವ ಸಾಮರ್ಥ್ಯವುಳ್ಳ ಬೆಡ್‌ಗೆ ಸ್ಥಳಾಂತರಿಸಿದೆವು. ಫೆಬ್ರವರಿ ತಿಂಗಳ ಆದಿಯಲ್ಲಿ, ನಮ್ಮ ಸೈಫೀ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿ ನಿರ್ಮಾಣ ಮಾಡಲು ಮುಂದಾದೆವು. ಇದರ ನಿರ್ಮಾಣಕ್ಕೆ ಮುಂಬೈ ನಗರಾಡಳಿತದ ತಕರಾರು ಎದುರಾಯ್ತು. ಯಾವಾಗ ಎಮಾನ್‌ಳ ಆಗಮನ ಖಚಿತವಾಯಿತೋ ಆಗ ನಮ್ಮ ತಂಡ ಮೂರು ದಿನ ನಿರಂತರ ಓಡಾಡಿ ಮುನ್ಸಿಪಾಲಿಟಿಯಿಂದ ಎಲ್ಲಾ ಅನುಮತಿಯನ್ನೂ ಪಡೆದು ವಿಶೇಷ ಕೊಠಡಿಯನ್ನು ನಿರ್ಮಿಸಿ, ಆಕೆಗಾಗಿ ಸಜ್ಜಾಗಿ ನಿಂತಿತು. ಎಮಾನ್ ನಮ್ಮಲ್ಲಿ ಅಡ್ಮಿಟ್ ಆಗುತ್ತಿದ್ದಂತೆಯೇ ನರ್ಸ್‌ಗಳು ತಮ್ಮ ರಜೆಗಳನ್ನು ಕ್ಯಾನ್ಸಲ್ ಮಾಡಿಕೊಂಡರು. ಉಳಿದ ಸಿಬ್ಬಂದಿಯೂ ಎಮಾನ್ ಮತ್ತು ಶೈಮಾಗಾಗಿ ತಮ್ಮ ರಜೆಯನ್ನು ರದ್ದು ಮಾಡಿಕೊಂಡು ದುಡಿದರು. ಈ ಎಲ್ಲಾ ತ್ಯಾಗಗಳ ಬಗ್ಗೆ ನಾವು ಇದುವರೆಗೂ ಮಾತನಾಡಿರಲಿಲ್ಲ. ಶೈಮಾ ‘ನರ್ಸ್‌ಗಳು ನನ್ನ ತಂಗಿಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ’ ಎಂದು ಆರೋಪಿಸಿದ ವರದಿಯನ್ನು ಮಾಧ್ಯಮಗಳಲ್ಲಿ ಓದಿ ನಿಜಕ್ಕೂ ಮನಸ್ಸಿಗೆ ನೋವಾಗಿದೆ. ಹೀಗಾಗಿ ಇದನ್ನೆಲ್ಲ ಹೇಳಬೇಕಾಗಿದೆ. ಎಮಾನ್ ವಿಷಯದಲ್ಲಿ ನಾನು ಮತ್ತು ನಮ್ಮ ತಂಡ ನೀಡಿದ ಚಿಕಿತ್ಸೆಯ ಬಗ್ಗೆ ನನಗೆ ಭರವಸೆ ಮತ್ತು ಹೆಮ್ಮೆಯಿದೆ. ಭಾರತೀಯ ವೈದ್ಯಲೋಕದ ಪ್ರಗತಿ ಮತ್ತು ಪ್ರತಿಭೆಯನ್ನು ಈ ವಿದ್ಯಮಾನ ಜಗತ್ತಿಗೆ ಸಾರಿದೆ. ಎಮಾನ್ ಈಗ ಸಾಮಾನ್ಯ ನಾಗರಿಕ ವಿಮಾನಗಳಲ್ಲಿ ಹಾರಾಡುವುದಕ್ಕೂ ಸಮರ್ಥಳಾಗಿದ್ದಾಳೆ. ನಿಜಕ್ಕೂ ಇದು ಅದ್ಭುತ ಪ್ರಗತಿಯೇ ಸರಿ. (ಆದಾಗ್ಯೂ ಆಕೆಯೊಂದಿಗೆ ವೈದ್ಯರಿರಬೇಕು ಎನ್ನುವುದು ನಮ್ಮ ಸಲಹೆ). ಎಮಾನ್, ತನ್ನ ಗುಣಾತ್ಮಕತೆಯಿಂದಾಗಿ, ಸಂಗೀತದ ಮೇಲಿನ ಪ್ರೀತಿಯಿಂದಾಗಿ ನಮ್ಮ ತಂಡದ ಪ್ರತಿಯೊಬ್ಬರ ಮನಸ್ಸನ್ನೂ ಗೆದ್ದಿದ್ದಾಳೆ. ನಾವು ಕೊಠಡಿಗೆ ಪ್ರವೇಶಿಸಿದಾಗಲೆಲ್ಲ ಫ್ಲೈಯಿಂಗ್ ಕಿಸ್‌ಗಳನ್ನು ಆಕೆ ನಮ್ಮತ್ತ ತೂರಿಬಿಡುತ್ತಿದ್ದಳು. ದುರದೃಷ್ಟವಶಾತ್, ಕೆಲವು ದಿನಗಳ ಹಿಂದೆ ಆಕೆ ನಮ್ಮತ್ತ ಸಿಹಿಮುತ್ತು ತೂರುವುದನ್ನು ನಿಲ್ಲಿಸಿಬಿಟ್ಟಳು. ಶೈಮಾ ತನ್ನ ತಂಗಿಯ ಜೊತೆಗಿನ ಬಾಂಧವ್ಯವನ್ನು, ನಮ್ಮ ವಿರುದ್ಧ ಬಳಸಿಕೊಂಡದ್ದೇ ಇದಕ್ಕೆ ಕಾರಣವಾಯಿತು. ಕಳೆದ ಮೂರು ತಿಂಗಳಿಂದ ಎಮಾನ್‌ಳ ಚೇತರಿಕೆಗಾಗಿ ಹಗಲುರಾತ್ರಿಯೆನ್ನದೆ ನಿಸ್ವಾರ್ಥವಾಗಿ ಶ್ರಮಿಸಿದ ನಮ್ಮ ತಂಡಕ್ಕೆ ಇದನ್ನು ನೋಡಿ ನಿಜಕ್ಕೂ ತೀವ್ರ ಬೇಸರವಾಗಿದೆ. ಈ ಎಲ್ಲಾ ಅನವಶ್ಯಕ ಪ್ರಹಸನವನ್ನು ನೋಡಿದ ಮೇಲೆ ನಾನು ಶೈಮಾಗೆ ಹೇಳುವುದಿಷ್ಟೆ: ನಾನು ಆಕೆಯ ವಿರುದ್ಧ ಸಿಟ್ಟಿನಿಂದ ಟ್ವೀಟ್ ಮಾಡಿದ್ದೆ. ಅದು ಆ ಕ್ಷಣದ ನೋವಿನ ಪ್ರತಿಕ್ರಿಯೆಯಷ್ಟೇ ಆಗಿತ್ತು. ಶೈಮಾ ಇಷ್ಟೆಲ್ಲಾ ಮಾಡಿದರೂ, ಆಕೆಯನ್ನು ನಾನು ಕ್ಷಮಿಸುತ್ತೇನೆ. ಎಮಾನ್ ನನ್ನ ಪಾಲಿಗೆ ಎಂದೆಂದಿಗೂ ವಿಶೇಷ ವ್ಯಕ್ತಿಯಾಗಿಯೇ ಇರುತ್ತಾಳೆ ಮತ್ತು ಆಕೆಯೊಂದಿಗೆ ನಾನು ಬೆಳೆಸಿಕೊಂಡ ಬಾಂಧವ್ಯವೂ ವಿಶಿಷ್ಟವಾಗಿಯೇ ಇರಲಿದೆ. ಈಗ ಆಕೆ ಚಿಕಿತ್ಸೆಗಾಗಿ ಬೇರೆಡೆ ಹೋಗಿದ್ದಾಳೆ. ನಾನು ಅಂದು ಭರವಸೆ ನೀಡಿದಂತೆ- ಪ್ಲ್ರಾನ್ ಮಾಡಿದಂತೆ ಹಂತಹಂತವಾಗಿ ಚಿಕಿತ್ಸೆ ಕೊಡಲು ಈಗ ಸಾಧ್ಯವಿಲ್ಲ ಎನ್ನುವ ಸಂಗತಿ ನನ್ನ ಮನಸ್ಸನ್ನು ಕೊರೆಯುತ್ತಿದೆ. ಆದಾಗ್ಯೂ ಆಕೆಯ ಸಾಮರ್ಥಯದ ಮೇಲೆ ನನಗೆ ಭರವಸೆಯಿದೆ. ಬೇಗನೇ ಚೇತರಿಸಿಕೊಳ್ಳುತ್ತಾಳೆ ಎನ್ನುವ ವಿಶ್ವಾಸವಿದೆ. ಎಮಾನ್‌ಳಿಗೆ ಒಳ್ಳೆಯದಾಗಲೆಂದು ನಾವು ಹೃದಯಪೂರ್ವಕ ವಾಗಿ ಹಾರೈಸುತ್ತೇವೆ. – ಡಾ. ಮುಫಜಲ್ ಲಕ್ಡಾವಾಲಾ, ಬಾರಿಯಾಟ್ರಿಕ್ ಸರ್ಜನ್