ನವದೆಹಲಿ:ಶ್ರದ್ದಾ ವಾಲ್ಕರ್ ಭೀಕರ ಪ್ರಕರಣ ಇದೀಗ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿಯೂ ಪ್ರಸ್ತಾಪವಾಗತೊಡಗಿದ್ದು, ಒಂದು ವೇಳೆ ದೇಶದಲ್ಲಿ ಪ್ರಬಲ ನಾಯಕ ಇಲ್ಲದಿದ್ದರೆ, ಅಫ್ತಾಬ್ ನಂತಹವರು ಪ್ರತಿಯೊಂದು ನಗರದಲ್ಲಿಯೂ ಹುಟ್ಟಿಕೊಳ್ಳುತ್ತಾರೆ. ಇದರಿಂದ ನಮಗೆ ನಮ್ಮ ಸಮಾಜವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಶಬರಿಮಲೆಗೆ ಹೊರಟಿದ್ದ ಯಾತ್ರಾರ್ಥಿಗಳ ಬಸ್ ಪಲ್ಟಿ: 18 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಗುಜರಾತ್ ಚುನಾವಣಾ ಪ್ರಚಾರದ ವೇಳೆ ಶರ್ಮಾ, ಪ್ರಧಾನಿ ಮೋದಿ ಅವರ ಪರ ಬ್ಯಾಟಿಂಗ್ ಮಾಡಿದ್ದು, ದೇಶದ ಜನತೆ ಕೇಂದ್ರದಲ್ಲಿ ಮೋದಿಯವರಿಗೆ ಮೂರನೇ ಬಾರಿ ಅವಕಾಶ ನೀಡಬೇಕಾದ ಅಗತ್ಯವಿದೆ ಎಂಬುದನ್ನು ತಿಳಿಸಿರುವುದಾಗಿ ವರದಿಯಾಗಿದೆ.
ದೆಹಲಿಯಲ್ಲಿ ನಡೆದ ಶ್ರದ್ದಾ ಪ್ರಕರಣವನ್ನು ಉಲ್ಲೇಖಿಸಿದ ಸಿಎಂ ಶರ್ಮಾ, ಇದೊಂದು ಲವ್ ಜಿಹಾದ್ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೊಂದು ಮುಸ್ಲಿಮ್ ಯುವಕರ ಸಂಚು, ಹಿಂದು ಯುವತಿಯರನ್ನು ಒಲೈಸಿ ನಂತರ ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡುವ ದುರುದ್ದೇಶ ಹೊಂದಿರುವುದಾಗಿ ದೂರಿದರು.
ಅಫ್ತಾಬ್ ಮುಂಬೈನಿಂದ ಶ್ರದ್ದಾ ಬೆಹೆನ್ (ಸಹೋದರಿ)ಳನ್ನು ದೆಹಲಿಗೆ ಕರೆತಂದು, ಒಟ್ಟಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು, ನಂತರ ಲವ್ ಜಿಹಾದ್ ಹೆಸರಿನಲ್ಲಿ 35 ತುಂಡುಗಳನ್ನಾಗಿ ಕತ್ತರಿಸಿ, ಅದನ್ನು ಫ್ರಿಡ್ಜ್ ನಲ್ಲಿಟ್ಟಿದ್ದ. ಈ ಸಂದರ್ಭದಲ್ಲಿ ಶ್ರದ್ದಾಳ ಶವ ಮನೆಯಲ್ಲಿದ್ದಾಗಲೇ ಮತ್ತೊಬ್ಬ ಯುವತಿಯನ್ನು ಡೇಟಿಂಗ್ ಗಾಗಿ ಕರೆ ತಂದಿದ್ದ ಎಂದ ಶರ್ಮಾ, ಒಂದು ವೇಳೆ ದೇಶದಲ್ಲಿ ಬಲಿಷ್ಠ ನಾಯಕತ್ವ ಇಲ್ಲದಿದ್ದಲ್ಲಿ, ಅಫ್ತಾಬ್ ನಂತಹವರು ಪ್ರತಿ ನಗರದಲ್ಲಿಯೂ ಜನ್ಮತಾಳುತ್ತಾರೆ ಎಂದು ಹೇಳಿದರು.
ಈ ನಿಟ್ಟಿನ ಇದೊಂದು ತುಂಬಾ ಮುಖ್ಯವಾದ ವಿಷಯವಾಗಿದ್ದು, ನರೇಂದ್ರ ಮೋದಿ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.