ವಾಷಿಂಗ್ಟನ್: ಅತಿಮಾನುಷ ಶಕ್ತಿಗಳ ಕುರಿತ ಸಿನಿಮಾಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇದೀಗ ಜಗತ್ತಿನ ನಂಬರ್ ವನ್ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಮನುಷ್ಯನ ಮೆದುಳಿಗೆ ಕೃತಕ ಬುದ್ದಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್ ಅಳವಡಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಮಸ್ಕ್ ಒಡೆತನದ ನ್ಯೂರಾಲಿಂಕ್ ಮೆಡಿಕಲ್ ಡಿವೈಸ್ ಕಂಪನಿ ಸಂಶೋಧನೆ ನಡೆಸಿರುವುದಾಗಿ ವರದಿಯಾಗಿತ್ತು.
ಸಂಕಷ್ಟಕ್ಕೆ ಸಿಲುಕಿದ ಮಸ್ಕ್:
ಮಸ್ಕ್ ಒಡೆತನದ ನ್ಯೂರಾಲಿಂಕ್ ಮೆಡಿಕಲ್ ಡಿವೈಸ್ ಕಂಪನಿ ಮನುಷ್ಯನ ಮೆದುಳಿಗೆ ಚಿಪ್ ಅಳವಡಿಸುವ ಸಂಶೋಧನೆಗೆ ಪ್ರಾಣಿಗಳನ್ನು ಬಳಸಿಕೊಂಡಿದ್ದು, ಇದರಲ್ಲಿ ವನ್ಯಜೀವಿ ನೀತಿಗಳ ಉಲ್ಲಂಘನೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಫೆಡರಲ್ ತನಿಖೆ ಎದುರಿಸುವಂತಾಗಿದೆ ಎಂದು ವರದಿ ತಿಳಿಸಿದೆ.
ಕೃತಕ ಬುದ್ದಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್ ಅಭಿವೃದ್ಧಿಪಡಿಸಲು ಸಾಕಷ್ಟು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ತಾನು ಕೂಡಾ ಬ್ರೈನ್ ಚಿಪ್ ಅಳವಡಿಸಿಕೊಳ್ಳುವುದಾಗಿ ಮಸ್ಕ್ ಘೋಷಿಸಿಕೊಂಡಿದ್ದಾರೆ.
ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಹುಟ್ಟಿನಿಂದ ಕುರುಡರಾಗಿದ್ದವರು, ಪಾರ್ಶ್ವವಾಯು ಪೀಡಿತರು, ಪಾರ್ಕಿನ್ ಸನ್ ಕಾಯಿಲೆಗೆ ಒಳಗಾದವರು ತಮ್ಮ ಶಾಶ್ವತ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ವರದಿ ವಿವರಿಸಿದೆ.
ಮತ್ತೊಂದೆಡೆ ಬ್ರೈನ್ ಚಿಪ್ ಪ್ರಯೋಗವನ್ನು ಶೀಘ್ರವೇ ಯಶಸ್ವಿಗೊಳಿಸುವಂತೆ ಎಲಾನ್ ಮಸ್ಕ್ ಒತ್ತಡ ಹೇರುತ್ತಿದ್ದು, ಇದರ ಪರಿಣಾಮ ಸಾವಿರಾರು ಪ್ರಾಣಿಗಳ ಜೀವಕ್ಕೆ ಕುತ್ತು ಬಂದಿರುವುದಾಗಿ ಉದ್ಯೋಗಿಗಳು ಆರೋಪಿಸಿರುವ ನಡುವೆ ನ್ಯೂರಾಲಿಂಕ್ ಕಂಪನಿ ತನಿಖೆಯನ್ನು ಎದುರಿಸುವಂತಾಗಿದೆ ಎಂದು ವರದಿ ವಿವರಿಸಿದೆ.
ಬ್ರೈನ್ ಚಿಪ್ ಪ್ರಯೋಗಕ್ಕಾಗಿ 2018ರಿಂದ 280ಕ್ಕೂ ಹೆಚ್ಚು ಕುರಿ, ಹಂದಿ, ಇಲಿ ಮತ್ತು ಕೋತಿಗಳು ಸೇರಿದಂತೆ 1,500ಕ್ಕೂ ಅಧಿಕ ಪ್ರಾಣಿಗಳು ಆಹುತಿಯಾಗಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಆದರೆ ಇದು ಒಂದು ಅಂದಾಜಿನ ಲೆಕ್ಕಾಚಾರವಾಗಿದ್ದು, ಈ ಪ್ರಯೋಗಕ್ಕಾಗಿ ಎಷ್ಟು ಪ್ರಾಣಿಗಳು ಜೀವ ತೆತ್ತಿವೆ ಎಂಬುದನ್ನು ಕಂಪನಿ ಬಹಿರಂಗಪಡಿಸುತ್ತಿಲ್ಲ ಎಂದು ವರದಿ ತಿಳಿಸಿದೆ.