ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದ್ದ ಟ್ವಿಟರ್ ಖರೀದಿ ಡೀಲ್ ನ್ನು ತಾನು ಕೈಬಿಡುತ್ತಿರುವುದಾಗಿ ಟೆಸ್ಲಾ ಮುಖ್ಯಸ್ಥ, ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಹೇಳಿದ್ದಾರೆ.
‘ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ’ ಎಂದು ಮಸ್ಕ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಟ್ವಿಟ್ಟರ್ ನ ಪ್ರತಿ ಷೇರನ್ನು 54.20 ಡಾಲರ್‌ಗಳಿಗೆ (₹4,299) ಖರೀದಿಸುವುದಾಗಿ ಮಸ್ಕ್ ಏಪ್ರಿಲ್‌ನಲ್ಲಿ ತಿಳಿಸಿದ್ದರು. ಮಸ್ಕ್ ನಿರ್ಧಾರದ ಬೆನ್ನಿಗೇ ಟ್ವಿಟರ್‌ನ ಷೇರುಗಳು ಶೇಕಡ 7ರಷ್ಟು ಕುಸಿತ ಕಂಡಿದ್ದವು.
ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳನ್ನು ವೀಕ್ಷಿಸುತ್ತಿರುವ ಬಳಕೆದಾರರ ಪೈಕಿ ನಕಲಿ ಮತ್ತು ಬೋಟ್ ಖಾತೆಗಳು ಶೇ 5ಕ್ಕಿಂತ ಕಡಿಮೆ ಇವೆ ಎಂಬುದನ್ನು ಟ್ವಿಟರ್ ಪುರಾವೆ ಸಹಿತ ತೋರಿಸದಿದ್ದರೆ ಒಪ್ಪಂದವನ್ನು ಮುರಿಯುವುದಾಗಿ ಮಸ್ಕ್ ಈ ಹಿಂದೆ ಎಚ್ಚರಿಸಿದ್ದರು.
ಇದನ್ನೂ ಓದಿ:ನನ್ನ ಸ್ನೇಹಿತ, ಅಬೆ ಸ್ಯಾನ್ : ಅಗಲಿದ ಗೆಳೆಯನ ಆತ್ಮಕ್ಕೆ ಬ್ಲಾಗ್‌ನಲ್ಲಿ ಶಾಂತಿ ಕೋರಿದ ಮೋದಿ
ಕಾನೂನು ಹೋರಾಟ: ಒಪ್ಪಂದದಿಂದ ಹಿಂದೆ ಸರಿದ ಎಲಾನ್ ಮಸ್ಕ್ ವಿರುದ್ಧ ತಾನು ಕಾನೂನು ಹೋರಾಟ ನಡೆಸುವುದಾಗಿ ಟ್ವಿಟರ್ ಹೇಳಿಕೊಂಡಿದೆ.
‘ಮಸ್ಕ್ ಅವರೊಂದಿಗೆ ಒಪ್ಪಿದ ಬೆಲೆ ಮತ್ತು ನಿಯಮಗಳಂತೆ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಲು ಟ್ವಿಟ್ಟರ್ ಮಂಡಳಿಯು ಬದ್ಧವಾಗಿದೆ. ಒಪ್ಪಂದ ಮುಂದುವರಿಸುವಂತೆ ಮಾಡಲು ಕಾನೂನು ಕ್ರಮವನ್ನು ಅನುಸರಿಸಲು ಯೋಜಿಸಲಾಗಿದೆ’ ಎಂದು ಆಡಳಿತ ಮಂಡಳಿ ಅಧ್ಯಕ್ಷ ಬ್ರೆಟ್ ಟೇಲರ್ ಟ್ವೀಟ್ ಮಾಡಿದ್ದಾರೆ.