Advertisement

ದೋಟಿಹಾಳ: ಸಂಭ್ರಮದ ಎಳ್ಳ ಅಮವಾಸ್ಯೆ ‘ಚೆರಗ ಚೆಲ್ಲೂ’ಹಬ್ಬ ಆಚರಿಸಿದ ರೈತರು

07:57 PM Jan 02, 2022 | Team Udayavani |

ದೋಟಿಹಾಳ: ಉತ್ತರ ಕರ್ನಾಟಕದ ಭಾಗದಲ್ಲಿ ಆಚರಿಸಲ್ಪಡುವ ಜಾನಪದ ಹಬ್ಬಗಳು ಅನೇಕ. ಅವುಗಳಲ್ಲಿ ಎಳ್ಳ ಅಮವಾಸ್ಯೆಯಂದು ರವಿವಾರ ಗ್ರಾಮ ಮತ್ತು ಗ್ರಾಮದ ಸುತ್ತಮುತ್ತ ಗ್ರಾಮಗಳ ಸೀಮಿಯಲ್ಲಿ ‘ಚೆರಗ ಚೆಲ್ಲುವ ಹಬ್ಬ’ ವಿಶಿಷ್ಟವಾಗಿ ಆಚರಿಸುವುದು ಕಂಡು ಬಂತು.

Advertisement

ತಾವು ನಂಬಿರುವ ಮಣ್ಣನ್ನು ದೈವಭಾವದಿಂದ ಪೂಜಿಸುವ ಆಚರಣೆ ಇದಾಗಿದೆ. ತಮ್ಮ ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲನ್ನು ಕೊಡುವ ಭೂಮಿತಾಯಿಯನ್ನು ಪೂಜಿಸಿ, ಹೊಲದ ತುಂಬೆಲ್ಲಾ ಚೀಲಗಳು ಪೂರ್ತಿತುಂಬಿ ಹೊರಗೆ ಚೆಲ್ಲುವಷ್ಟು ಫಸಲನ್ನು ನೀಡಲಿ ಎಂದು ಆಚರಿಸುವ ಹಬ್ಬವೇ ಗ್ರಾಮೀಣ ಭಾಗದ ರೈತರ ‘ಚೆರಗ ಚೆಲ್ಲುವ ಹಬ್ಬ’ವಾಗಿದೆ.

ರೈತರು ತಮ್ಮ ತಮ್ಮ ಹೊಲಗಳಲ್ಲಿ ‘ಚೆರಗ ಚೆಲ್ಲುವ ಹಬ್ಬ’ವನ್ನು ಆಚರಿಸುತ್ತಿದರುವದು ರವಿವಾರ ಗ್ರಾಮದ ಸುತ್ತಮುತಲು ಗ್ರಾಮಗಳ ಹೊಲಗಳಲ್ಲಿ ಕಂಡುಬಂತು. ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ ಹೊಲಗಳಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿ ಮರಗಳಿಗೆ, ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ “ಹುಲ್ ಹುಲ್‌ಗೋ ಚಲಾಂಬರಗೋ’ಎಂದು ಕೂಗುತ್ತ ಮನೆಯಿಂದ ತಂದ ಆಹಾರವನ್ನು ಹೊಲದಲ್ಲಿ ಚೆಲುತ್ತಾರೆ. ಇದನೇ ಚರಗ ಚೆಲ್ಲುವುದು ಎಂದು ಕರೆಯುತ್ತಾರೆ. ಈ ಹಬ್ಬದ ವಿಶೇಷ. ಅಮವಾಸ್ಯೆ 3-4 ದಿನ ಇರುವಾಗಲೇ ರೈತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಎಳ್ಳು ಹಚ್ಚಿದ ಸಜ್ಜೆ, ಜೋಳದ ರೋಟ್ಟಿ ತಯಾರಿಸುವುದು, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಮತ್ತು ಸೇಂಗಾ ಹೋಳಿಗೆ ತಯಾರಿಸಲಾಗುತ್ತದೆ.

ಅಮಾವಾಸ್ಯೆ ದಿನ ಬೆಳಗ್ಗೆ ಎದ್ದವರೇ ರೈತರು ಬಂಡಿ ಸಿದ್ಧಗೊಳಿಸಿದರು. ಮನೆಯಲ್ಲಿ ಮಾಡಿದ್ದ ಬಗೆ ಬಗೆಯ ಸಿಹಿಯನ್ನು ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯನ್ನು ಕುಳಿತು ಹೊಲಕ್ಕೆ ಹೋಗುವುದು ದೊಡ್ಡ ಸಡಗರದಂತೆ ಸುತ್ತ-ಮುತ್ತ ಗ್ರಾಮಗಳಲ್ಲಿ ಕಾಣುತ್ತದೆ. ಜತೆಗೆ ತಮ್ಮ ಸಂಬಂಧಿಗಳು, ಊರಿನ ಇತರರು, ಹಿತೈಷಿಗಳನ್ನು ಹೊಲಕ್ಕೆ ಕರೆದೊಯ್ದು, ಚರಗ ಚೆಲ್ಲಿದ ನಂತರ ಹೊಲಗಳಲ್ಲಿ ಸಾಮೂಹಿಕ ಊಟ ಸವಿದು ಆತ್ಮೀಯತೆ ಮೆರೆತರು.

ಎತ್ತಿನ ಬಂಡಿಯ ಅಲಂಕಾರ: ಎತ್ತುಗಳಿಗೆ ಝೂಲ ಹಾಕಿ ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಶೃಂಗರಿಸುವುದು ಒಂದು ವಿಶೇಷವಾಗಿರುತ್ತದೆ. ಎತ್ತುಗಳು ಕೊರಳ ಮತ್ತು ಹಣೆಗೆಜ್ಜೆಯನ್ನು ನುಡಿಸುತ್ತ ಹೊಲಗಳ ಕಡೆಗೆ ಬಂಡಿ ಎಳೆದುಕೊಂಡು ಸಾಗುವುದು ಗ್ರಾಮೀಣ ಸೊಗಡು ರವಿವಾರ ಮತ್ತೆ ಕಂಡು ಬಂತು.

Advertisement

ಈ ಹಬ್ಬ ರೈತರ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲ. ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ ಕುಟುಂಬಗಳೂ ಎಳ್ಳು ಅಮಾವಾಸ್ಯೆಯಂದು ಹೊಲಕ್ಕೆ ಹೋಗಿ ಚರಗ ಚೆಲ್ಲುವುದು ಈ ಭಾಗದಲ್ಲಿ ಕಂಡುಬರುತ್ತದೆ. ಹಿರಿಯ ರೈತರಿಗೆ ಭೂವಿಗೆ ಪೂಜೆ ಸಲ್ಲಿಸಿದ ಧನ್ಯತೆಯಾದರೆ ಮಕ್ಕಳಿಗೆ ಹಸಿ ಕಡಲೆ ಕಿತ್ತು ತಿನ್ನುವ ಸಂಭ್ರಮ. ಹೀಗೆ ಹೊಲದಲ್ಲಿ ಸಂಜೆವರೆಗೆ ಆಟವಾಡುವ ಖುಷಿ ಇರುತ್ತದೆ. ಹೆಚ್ಚಾಗಿ ಎರೆ ಭೂಮಿ ಪ್ರದೇಶದಲ್ಲಿ ಈ ಹಬ್ಬ ಸಾಕಷ್ಟು ವಿಜೃಂಭಣೆಯಿಂದ ಆಚರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next