ಈಗಾಗಲೇ ಕೆಲವು ಸಿನಿಮಾಗಳ ಮುಹೂರ್ತ, ಪೋಸ್ಟರ್ ರಿಲೀಸ್ ಅನ್ನು ಆ ತಂಡದ ಸದಸ್ಯರ ತಾಯಂದಿರಿಂದ ಮಾಡಿಸಿರುವ ಉದಾಹರಣೆ ಇದೆ. ಈಗ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರತಂಡ ಕೂಡಾ ತಾಯಂದಿರನ್ನು ವೇದಿಕೆ ಮೇಲೆ ಕರೆಸಿ ಅವರಿಂದಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಿದೆ. ಈ ಮೂಲಕ ತಾಯಂದಿರಿಗೆ ಗೌರವ ಅರ್ಪಿಸಿದೆ. ಸೃಜನ್ ಲೋಕೇಶ್ ನಾಯಕರಾಗಿರುವ ಈ ಚಿತ್ರವನ್ನು ಲೋಕೇಶ್ ಪ್ರೊಡಕ್ಷನ್‌ನಡಿ ನಿರ್ಮಿಸಲಾಗಿದೆ. ತಾಯಂದಿರಿಂದ ಆಡಿಯೋ ರಿಲೀಸ್ ಮಾಡಿಸಿದ ಬಗ್ಗೆ ಮಾತನಾಡುವ ಸೃಜನ್, ‘ಹುಟ್ಟಿದ ತಕ್ಷಣ ಮಗುವಿನ ಅಳು ಸಂಗೀತವಾಗಿರುತ್ತದೆ. ಇದಕ್ಕೆ ಕಾರಣ ತಂದೆ-ತಾಯಿ. ಆ ಕಾರಣದಿಂದಲೇ ಅಮ್ಮಂದಿರಿಂದ ಆಡಿಯೋ ರಿಲೀಸ್ ಮಾಡಿಸಿದೆವು’ ಎಂದರು ಸೃಜನ್ ಲೋಕೇಶ್.
ಅಂದು ಸೃಜನ್ ಲೋಕೇಶ್ ತಾಯಿ ಗಿರಿಜಾ ಲೋಕೇಶ್ ಮಗನ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ‘ಸೃಜನ್ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕೆಂದು ಯಜಮಾನರ ಆಸೆಯಾಗಿತ್ತು. ಅವರು ತೀರಿಕೊಂಡ ಸಂದರ್ಭದಲ್ಲಿ ಮುಂದೇನು ಎಂದು ನಾನು ಚಿಂತಿಸುತ್ತಿದ್ದೆ. ಆಗ ನಾನು ದುಡಿದು ಸಾಕುತ್ತೇನೆಂದು ಸೃಜನ್ ಹೇಳಿದ. ಅದರಂತೆ ಇಂದು ಸ್ವ-ಸ್ವಾಮರ್ಥ್ಯದಿಂದ ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದಾನೆ. ಅವನ ಈ ಬೆಳವಣಿಗೆ ನೋಡಿದಾಗ ಖುಷಿಯಾಗುತ್ತದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡುವ ಸೃಜನ್, ಚಿತ್ರಕ್ಕೆ ದುಡಿದ ತಂತ್ರಜ್ಞ ರ ಬಗ್ಗೆ ಮಾತನಾಡಿದರು. ಚಿತ್ರದ ನಿಜವಾದ ಹೀರೋಗಳೆಂದರೆ ಅವರೇ. ಅವರಿಂದಲೇ ಇಲ್ಲಿ ತನಕ ಬರಲು ಸಾಧ್ಯವಾಯಿತು ಎನ್ನುವುದು ಅವರ ಮಾತು. ‘ಕೇವಲ ದುಡ್ಡಿನಿಂದ ಚಿತ್ರ ಆಗುವುದಿಲ್ಲ. ಒಳ್ಳೆಯ ಚಿತ್ರವಾಗಲು ಬೇಕಾಗಿರುವುದು ಶ್ರದ್ಧೆ,ಆಸಕ್ತಿ. ಹನ್ನೆರಡು ಬಾರಿ ಈ ಚಿತ್ರದ ಚಿತ್ರಕತೆಯನ್ನು ಬದಲಾವಣೆ ಮಾಡಿಕೊಂಡಿದ್ದೇವೆ. ಸೆಟ್‌ನಲ್ಲಿ ನಿರ್ದೇಶಕರೊಂದಿಗೆ ಸಾಕಷ್ಟು ವಾದ ಮಾಡಿದ್ದೇನೆ. ಅದಕ್ಕೆ ಕಾರಣ, ನನಗೆ ಬರುವ ಸಂದೇಹ ಪ್ರೇಕ್ಷಕರಿಗೆ ಬರಬಾರದು ಎಂಬುದು. ಇಷ್ಟು ವರ್ಷ ದುಡಿದಿರುವ ಹಣದಲ್ಲಿ ಬಂಡವಾಳ ಹೂಡಿದ್ದೇನೆ. ಸೋಲು-ಗೆಲುವಿನ ಬಗ್ಗೆ ಯೋಚಿಸಿಲ್ಲ. ಜನರು ನ್ಯಾಯಯುತ ಚಿತ್ರ ಮಾಡಿದ್ದೇನೆಂದು ಹೇಳಿದರೆ ನಮ್ಮ ಪ್ರಯತ್ನ ಸಾರ್ಥಕ’ ಎಂದರು ಸೃಜನ್. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಸೃಜನ್ ಪುತ್ರ ಮಾಸ್ಟರ್ ಸುಕೃತ್ ಕೂಡಾ ನಟಿಸಿದ್ದಾರೆ. ಈ ಮೂಲಕ ಒಂದು ಕುಟುಂಬದ ನಾಲ್ಕು ತಲೆಮಾರು ಬಣ್ಣ ಹಚ್ಚಿದಂತಾಗುತ್ತದೆ. ಈ ಬಗ್ಗೆ ಮಾತನಾಡುವ ಸೃಜನ್, ಒಂದೇ ಕುಟುಂಬದ ನಾಲ್ಕು ತಲೆಮಾರು ಬಣ್ಣ ಹಚ್ಚಿರುವುದು ದಕ್ಷಿಣ ಭಾರತದಲ್ಲಿ ನಮ್ಮದು ಮೊದಲು ಎನ್ನಬಹುದು. ಮಗ ಮಾ.ಸುಕೃತ್ ಸಣ್ಣ ಪಾತ್ರದಲ್ಲಿ ಅಮ್ಮನೊಂದಿಗೆ ನಿರೂಪಣೆ ಮಾಡಿದ್ದಾನೆ’ ಎಂದರು. ಈ ಚಿತ್ರವನ್ನು ತೇಜಸ್ವಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದು, ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಉಳಿದಂತೆ ಚಿತ್ರದಲ್ಲಿ ನಟಿಸಿದ ತಾರಾ, ಯಶಸ್ ಸೂರ್ಯ, ಎಂ.ಎಸ್.ಉಮೇಶ್, ಗಿರಿ ಕೂಡಾ ಮಾತನಾಡಿದರು. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ವೇಣು ಛಾಯಾಗ್ರಹಣವಿದೆ.