Advertisement

ಎಳ್ಳಾರೆ ಚೆನ್ನಿಬೆಟ್ಟು : ತಂಗುದಾಣ ಇದೆ, ಗ್ರಾಮಸ್ಥರಿಗಿಲ್ಲ ಬಸ್‌ ವ್ಯವಸ್ಥೆಯ ಭಾಗ್ಯ

11:22 PM Mar 07, 2021 | Team Udayavani |

ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಳ್ಳಾರೆ, ಚೆನ್ನಿಬೆಟ್ಟು ಗ್ರಾಮಸ್ಥರಿಗೆ ಬಸ್‌ ಸಂಚಾರದ ಭಾಗ್ಯವೇ ಇಲ್ಲ ಏನೋ ಎಂಬ ಸಂಶಯ ಸ್ಥಳೀಯರನ್ನು ಕಾಡಿದೆ. ಸುತ್ತಲಿನ ಎಲ್ಲ ಗ್ರಾಮಗಳು ಸಾರಿಗೆ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿದ್ದರೆ ಎಳ್ಳಾರೆ ಗ್ರಾಮ ಇಂದಿಗೂ ಸಹ ಬಸ್‌ ಸಾರಿಗೆ ವ್ಯವಸ್ಥೆಯ ಮುಖವನ್ನೇ ಕಂಡಿಲ್ಲ. ಸೂಕ್ತ ಬಸ್‌ ಸಂಚಾರ ವ್ಯವಸ್ಥೆ ಗ್ರಾಮಕ್ಕಿಲ್ಲದೇ ಇರುವುದರಿಂದ ಜನರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

Advertisement

ಎಳ್ಳಾರೆ ಸುತ್ತಲ ಗ್ರಾಮಗಳಾದ ಕಡ್ತಲ, ಕುಕ್ಕುಜೆ, ಮುನಿಯಾಲು, ಪಡುಕುಡೂರು, ಪೆರ್ಡೂರು ಗ್ರಾಮ ಗಳಲ್ಲಿ ಬಸ್‌ ಸಂಚಾರ ವ್ಯವಸ್ಥೆಯಿದ್ದು ಎಳ್ಳಾರೆ -ಚೆನ್ನಿಬೆಟ್ಟು ಭಾಗಕ್ಕೆ ಈ ವ್ಯವಸ್ಥೆ ಇಲ್ಲ.

ಸುತ್ತಲ ಗ್ರಾಮಗಳಿಂದ ಇರುವ ದೂರ
ಎಳ್ಳಾರೆ ಗ್ರಾಮವು ಕಡ್ತಲದಿಂದ ಸುಮಾರು 5 ಕಿ.ಮೀ., ಖಜಾನೆಯಿಂದ 7 ಕಿ.ಮೀ., ಮುನಿಯಾಲುವಿನಿಂದ 6 ಕಿ.ಮೀ., ಪೆರ್ಡೂರಿನಿಂದ 9 ಕಿ.ಮೀ., ದೊಂಡೆರಂಗಡಿಯಿಂದ 6 ಕಿ.ಮೀ. ದೂರದಲ್ಲಿದ್ದರೂ ಸಹ ಸಾರಿಗೆ ವ್ಯವಸ್ಥೆ ಮಾತ್ರ ಮರೀಚಿಕೆಯಾಗಿದೆ.

ಸುಮಾರು 6 ಗ್ರಾಮಗಳನ್ನು ಸಂಪರ್ಕಿಸುವ ಕೇಂದ್ರ ಗ್ರಾಮ ಎಳ್ಳಾರೆಯಾದರೂ ಸಹ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮದ ಜನತೆ ದೂರದ ಪ್ರದೇಶಗಳಿಗೆ ತೆರಳಬೇಕಾದರೆ ಕನಿಷ್ಠ 6 ರಿಂದ 7 ಕಿ.ಮೀ. ನಡೆದುಕೊಂಡೇ ಹೋಗಿ ಅನಂತರ ಬಸ್‌ ಹಿಡಿಯಬೇಕಾಗಿದೆ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಎಳ್ಳಾರೆ ಗ್ರಾಮದಲ್ಲಿ ಕೇವಲ ಪ್ರಾಥಮಿಕ ಹಂತದ ಶಾಲೆಗಳಿದ್ದು ಪ್ರೌಢ, ಕಾಲೇಜು ಶಿಕ್ಷಣಕ್ಕೆ ನಗರ ಪ್ರದೇಶಗಳಿಗೆ ತೆರಳ ಬೇಕಾಗಿದೆ. ಗ್ರಾಮದಲ್ಲಿ ಬಸ್‌ ಸೌಕರ್ಯ ಇಲ್ಲದಿರುವುದರಿಂದ ಹೆಚ್ಚಿನ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಕೃಷಿಕರೇ ಹೆಚ್ಚಾಗಿ ಇರುವುದರಿಂದ ಖಾಸಗಿ ವಾಹನ ಮಾಡಿ ಮಕ್ಕಳನ್ನು ಶಿಕ್ಷಣಕ್ಕೆ ಕಳುಹಿಸುವ ಪರಿಸ್ಥಿತಿ ಇವರಲ್ಲಿ ಇಲ್ಲ ವಾಗಿದ್ದು ಈ ಗ್ರಾಮದ ಸ್ಥಿತಿವಂತರಿಗಷ್ಟೆ ಉನ್ನತ ಶಿಕ್ಷಣ ಎಂಬಂತಾಗಿದೆ. ಅಲ್ಲದೆ ನಿತ್ಯ ಉದ್ಯೋಗಕ್ಕೆ ತೆರಳುವವರು, ಮಹಿಳೆಯರು ಬಸ್‌ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

Advertisement

ಬಸ್‌ ಇಲ್ಲ, ತಂಗುದಾಣ ಇದೆ
ಗ್ರಾಮಕ್ಕೆ ಬಸ್‌ ಇಲ್ಲದಿದ್ದರೂ ಸಹ ಬಹಳಷ್ಟು ವರ್ಷಗಳ ಹಿಂದೆಯೇ ಬಸ್‌ ತಂಗುದಾಣ ಗ್ರಾಮದ ವಿವಿಧೆಡೆ ನಿರ್ಮಾಣವಾಗಿದೆ.

ಅಭಿವೃದ್ಧಿಗೆ ತೊಡಕು

ಗ್ರಾಮದ ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆ ಹೆಚ್ಚಿನ ಪಾತ್ರ ವಹಿಸುತ್ತದೆ. ಆದರೆ ಎಳ್ಳಾರೆ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೇ ಇಲ್ಲ. ಇಲ್ಲಿ ಗುಣಮಟ್ಟದ ರಸ್ತೆ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಈ ಗ್ರಾಮಕ್ಕೆ ಬಸ್‌ ವ್ಯವಸ್ಥೆಯಾದಲ್ಲಿ ಚೆನ್ನಿಬೆಟ್ಟು, ಚಟ್ಕಲ್ಪಾದೆ, ಕುಂಟಲಕಟ್ಟೆ, ಗ್ರಾಮಗಳ ಅಭಿವೃದ್ಧಿಯ ಜತೆಗೆ ಹೊಗೆಜಡ್ಡು, ಮುಳಾRಡು ಪರಿಸರದ ನಾಗರಿಕರಿಗೂ ಅನುಕೂಲವಾಗಲಿದೆ.

ನಿರಂತರ ಮನವಿ
ಎಳ್ಳಾರೆ ಗ್ರಾಮಕ್ಕೆ ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನಿರಂತರ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಕಳೆದ 5 ವರ್ಷಗಳಲ್ಲಿ 3 ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಕುಂಟಲ್ಕಟ್ಟೆ, ಕಡ್ತಲ ಪಂ. ವ್ಯಾಪ್ತಿಯ ಎಳ್ಳಾರೆ ಮಾರ್ಗವಾಗಿ ಬಸ್‌ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಸ್‌ ಸಂಚಾರಕ್ಕೆ ತ್ವರಿತ ಕ್ರಮ
ಎಳ್ಳಾರೆ ಗ್ರಾಮದ ಜನತೆಯ ಬಹಳ ಹಿಂದಿನ ಬೇಡಿಕೆಯಾಗಿದ್ದು ಆರ್‌ಟಿಒ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದ್ದು ಖಾಸಗಿ ಅಥವಾ ಸರಕಾರಿ ಸಾರಿಗೆ ಬಸ್‌ ಸಂಚಾರಕ್ಕೆ ತ್ವರಿತ ಕ್ರಮ ಕೈಗೊಳ್ಳಲಾಗುವುದು.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ

ಜಿಲ್ಲಾ ಧಿಕಾರಿಗಳಿಗೆ ಮತ್ತೆ ಮನವಿ ಸಲ್ಲಿಕೆ
ಎಳ್ಳಾರೆ ಗ್ರಾಮಕ್ಕೆ ಬಸ್‌ ಸಂಚಾರ ಪ್ರಾರಂಭ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮತ್ತೆ ಮನವಿ ಮಾಡಲಾಗಿದೆ. ಪಂಚಾಯತ್‌ ಆಡಳಿತ ಹಾಗೂ ಗ್ರಾಮಸ್ಥರ ನಿಯೋಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಮಾಲತಿ ಕುಲಾಲ್‌, ಅಧ್ಯಕ್ಷರು, ಕಡ್ತಲ ಗ್ರಾಮ ಪಂಚಾಯತ್‌

ಮನವಿ ನೀಡಿದರೂ ಪ್ರಯೋಜನವಿಲ್ಲ
ಗ್ರಾಮಕ್ಕೆ ಬಸ್‌ ವ್ಯವಸ್ಥೆ ಮಾಡುವಂತೆ ನಿರಂತರ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಥಳೀಯರ ಸಮಸ್ಯೆ ಮನಗಂಡು ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.
-ಎಂ. ರವೀಂದ್ರ ಪ್ರಭು, ಚೆನ್ನಿಬೆಟ್ಟು

– ಜಗದೀಶ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next