ಬಳ್ಳಾರಿ: ಪ್ರೌಢಶಾಲಾ ಮುಖ್ಯಶಿಕ್ಷಕರ ವೇತನ, ಭತ್ಯೆಗಳಲ್ಲಿ ಆಗುತ್ತಿರುವ ತಾರತಮ್ಯ, ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸಂಘದಿಂದ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಮನವಿ ಸಲ್ಲಿಸಲಾಯಿತು.
ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ 500 ರೂ., ಪಿಯು ಕಾಲೇಜು ಪ್ರಾಚಾರ್ಯರಿಗೆ 1000 ರೂ. ವಿಶೇಷ ಭತ್ಯೆ ನೀಡಲು ಸರ್ಕಾರ ಸಮ್ಮತಿಸಿದೆ. ಅದರಂತೆ ಪ್ರಾಚಾರ್ಯರಿಗೆ, ಉಪನ್ಯಾಸಕರಿಗೆ ಭತ್ಯೆ ನೀಡಿ ಮುಖ್ಯಶಿಕ್ಷಕರಿಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ. 2012ರಲ್ಲಿ ಕೆಪಿಎಸ್‌ಸಿಯಿಂದ ನೇರ ನೇಮಕಾತಿ ಹೊಂದಿದ ಪ್ರೌಢಶಾಲಾ ಮುಕ್ಯಶಿಕ್ಷಕರಿಗೆ ಹುದ್ದೆಗಳನ್ನು ಸೃಷ್ಟಿಸಿ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. 2014ರಲ್ಲಿ ಮುಖ್ಯಶಿಕ್ಷಕರನ್ನು ಸರ್ಕಾರವೇ ಕೌನ್ಸೆಲಿಂಗ್ ಮಾಡಿ ಕಾಯಂ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ವರ್ಗಾವಣೆ ಮಾಡಲಾಗಿತ್ತು. ಆದರೆ, 2017ರ ವರ್ಗಾವಣೆ ನಿಯಮದಲ್ಲಿ ಒಂದೇ ವಲಯದಲ್ಲಿ ಬೇರೆ-ಬೇರೆ ವೃಂದಗಳಲ್ಲಿ ಸೇವೆ ಸಲ್ಲಿಸಿದ್ದರೂ, ನಿರಂತರವಾಗಿರಬೇಕು. ಅದೇ ವಲಯದಲ್ಲಿ ಕನಿಷ್ಠ 5 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮದಿಂದ ಮುಖ್ಯಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ಈ ನಿಯಮ ಸಡಿಲಗೊಳಿಸಬೇಕು
ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಶಿಕ್ಷಕರಾದ ಎಚ್.ರವೀಂದ್ರ, ಜಿ.ರಾಮಾಂಜಿನಿ, ಶಿವ ನಾಯ್ಕ, ರೇವಣ ಸಿದ್ದಪ್ಪ, ಶಿವಲಿಂಗಾರೆಡ್ಡಿ, ರೂಪ, ಶಿವಕುಮಾರ, ಮನೋಹರ, ಪಂಪನಗೌಡ್ರು ಇದ್ದರು. ಶಿಕ್ಷಕಿ ಮನವಿ: ಹೆಚ್ಚುವರಿ ಶಿಕ್ಷಕರನ್ನು ಕೈಬಿಡುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಗರದ ಬಾಪೂಜಿ ನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸಭಾಪತಿ ಹೊರಟ್ಟಿಗೆ ಮನವಿ ಸಲ್ಲಿಸಿದರು. ಶೈಕ್ಷಣಿಕ ಮಧ್ಯಂತರ ಅವಧಿಯಲ್ಲಿ ಶಿಕ್ಷಕರನ್ನು ಏಕಾಏಕಿ ಬಿಡಿಸುವುದರಿಂದ ಮಕ್ಕಳ ಶಿಕ್ಷಣದ ಮೇಲೆ, ಶಿಕ್ಷಕರ ಹಾಗೂ ಕುಟುಂಬದ ಮೇಲೆ ತೀವ್ರ ಪರಿಣಾಮ ಬಿಳಲಿದೆ. ಕೂಡಲೇ ಈ ಬಗ್ಗೆ ಸರ್ಕಾರ ಗಮನಹರಿಸಿ ಹೆಚ್ಚುವರಿ ಶಿಕ್ಷಕರನ್ನು ಕೈಬಿಡುವ ನಿರ್ಧಾರ ಹಿಂಪಡೆಯಬೇಕು ಎಂದು ಶಿಕ್ಷಕಿ ಎನ್.ಕವಿತಾ ಒತ್ತಾಯಿಸಿದರು.