ಸೇಡಂ: ಅಪೌಷ್ಟಿಕತೆಯಿಂದ ಯಾವ ಮಗುವೂ ಬಳಲಬಾರದು ಎನ್ನುವ ಸಂಕಲ್ಪ ಮಾಡಬೇಕು. ಅಪೌಷ್ಟಿಕತೆ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕರಣ ಗುಜ್ಜರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಅಪೌಷ್ಟಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿರುವ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಸಕಾಲಕ್ಕೆ ಪೌಷ್ಟಿಕ ಆಹಾರ ನೀಡಬೇಕು. ಈ ಕುರಿತಂತೆ ತಹಶೀಲ್ದಾರ್, ಸಿಡಿಪಿಒ ಜವಾಬ್ದಾರಿ ಹೆಚ್ಚು ಇರುತ್ತದೆ. ಸಮರ್ಪಕ ಆಹಾರ ಪೂರೈಕೆ ಮಾಡಲಾಗುತ್ತಿದೆಯಾ? ಪೂರೈಕೆಯಾಗುವ ಆಹಾರದಲ್ಲಿ ಸಪರ್ಮಕವಾದ ಪೌಷ್ಟಿಕತೆ ಇದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಹೇಳಿದರು. ಸರ್ಕಾರದ ಬಹುತೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡಲಾಯಿತು. ನಂತರ ಅಂಗನವಾಡಿ ಕಾರ್ಯಕರ್ತೆಯರು ಮಾಡಿದ ವಿವಿಧ ಖಾದ್ಯಗಳನ್ನು ನ್ಯಾಯಾಧೀಶರು ಸವಿದರು. ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಎಸ್. ಜಟ್ಲಾ, ಸಿವಿಲ್ ನ್ಯಾಯಾಧೀಶ ಸುನೀಲ ಎಸ್. ತಳವಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ನ್ಯಾಯವಾದಿಗಳ ಸಂಘದ ಸತೀಶ ಪಾಟೀಲ ತರನಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಜಕುಮಾರ ಸ್ವಾಮಿ, ಸಿಡಿಪಿಒ ಗೌತಮ ಸಿಂಧೆ, ಸಿಪಿಐ ಎಸ್. ಎನ್. ಆನಂದರಾವ್, ಹಿರಿಯ ನ್ಯಾಯವಾದಿ ಎನ್.ಬಸಿರೋದ್ದಿನ್ ಇದ್ದರು. ಸಿಡಿಪಿಒ ಗೌತಮ ಸಿಂಧೆ ಪ್ರಾಸ್ತವಿಕ ಮಾತನಾಡಿದರು. ಅನಿತಾ ಪ್ರಾರ್ಥಿಸಿದರು. ಪದ್ಮಾವತಿ ಸ್ವಾಗತಿಸಿದರು. ಇಂದುಮತಿ ನಿರೂಪಿಸಿದರು. ಭಾಗ್ಯಲಕ್ಷ್ಮೀ ವಂದಿಸಿದರು.