Advertisement

ಸಾಹಿತ್ಯದ ತೇರೆಳೆಯಲು ಎಲಿಮಲೆ ಪ್ರೌಢಶಾಲೆ ವಠಾರ ಸಜ್ಜು

12:40 AM Jan 19, 2020 | mahesh |

ಗುತ್ತಿಗಾರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಎಲಿಮಲೆ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಂಟಮಲೆ ತಪ್ಪಲು ಎಲಿಮಲೆಯ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಜ. 19ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲಿಮಲೆಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾಹಿತ್ಯಾಸಕ್ತರ ಸ್ವಾಗತಕ್ಕೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ದೇವಚಳ್ಳ ಗ್ರಾಮದ ಎಲಿಮಲೆಯ ತುಂಬಾ ಕನ್ನಡ ಧ್ವಜಗಳು, ಬ್ಯಾನರ್‌ಗಳು, ಸ್ವಾಗತ ಕಮಾನುಗಳನ್ನು ಹಾಕಲಾಗಿದ್ದು, ಕನ್ನಡ ಭುವನೇಶ್ವರ ತಾಯಿಯ ವೈಭವದ ನುಡಿತೇರಿಗೆ ಕಾತರದಿಂದ ಕಾಯುತ್ತಿದೆ.

Advertisement

ವೈಭವದ ಮೆರವಣಿಗೆ
ಎಲಿಮಲೆಯ ಎತ್ತಿನಹೊಳೆ ಜಂಕ್ಷನ್‌ನಿಂದ ಎಲಿಮಲೆ ಪ್ರೌಢಶಾಲೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ಸಾಗಿ ಬರಲಿದ್ದು, ವಿವಿಧ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಸ್ತಬ್ಧಚಿತ್ರಗಳು, ಕಲಾವಿದರ ನೃತ್ಯ ಪ್ರಕಾರಗಳು ಮೆರವಣಿಗೆಗೆ ರಂಗು ತುಂಬಲಿವೆ. ಸಮ್ಮೇಳನ ನಡೆಯುವ ದಿ| ದೇವಕಿ ವೆಂಕಪ್ಪ ಗೌಡ ವೇದಿಕೆ ಹಾಗೂ ದಿ| ಸುಬ್ರಾಯ ಭಟ್‌ ಕೇರ ಸಭಾಂಗಣವನ್ನು ಸುಂದರವಾಗಿ ಸಿಂಗಾರಗೊಳಿಸಲಾಗಿದ್ದು, ಸಾಹಿತ್ಯ ಪ್ರೇಮಿಗಳಿಗೆ ಕುಳಿತುಕೊಳ್ಳಲು ವಿಶಾಲ ಚಪ್ಪರದ ಅಡಿಯಲ್ಲಿ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಗ್ರಾಮೀಣ ಶೈಲಿಯ ಆತಿಥ್ಯ
ಆಗಮಿಸುವ ಅತಿಥಿ, ಅಭ್ಯಾಗತರು, ಸಾಹಿತ್ಯಾಸಕ್ತರಿಗೆ ಗ್ರಾಮೀಣ ಶೈಲಿಯ ಆತಿಥ್ಯ ವ್ಯವಸ್ಥೆ ಇರಲಿದೆ. ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರಲಿದ್ದು, ಊಟದ ಮೆನುವಿನಲ್ಲಿ ಉಪ್ಪಿನಕಾಯಿ, ಅನ್ನ, ಸಾರು, ಸಾಂಬಾರು, ಚಟ್ನಿ, ಪಾಯಸ, ಪಲ್ಯ, ಮಜ್ಜಿಗೆ ಹೀಗೆ ಆರೋಗ್ಯಕರ ಆಹಾರ ಇರಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರವನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

ಕನ್ನಡ ಅಕ್ಷರ ಜಾತ್ರೆಯಲ್ಲಿ, ಎರಡು ವಿಚಾರಗೋಷ್ಠಿ, ಹೊಸ ಕೃತಿಗಳ ಅನಾವರಣ, ಕವಿಗೋಷ್ಠಿ, ಸಾಧಕರಿಗೆ ಸಮ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರು ಹಾಗೂ ಜಿಲ್ಲಾ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.

1,500 ಜನರ ನಿರೀಕ್ಷೆ
ಸಾಹಿತಿಗಳನ್ನು ನಾಡಿಗೆ ಪರಿಚಯಿಸಿದ ಎಲಿಮಲೆಗೆ ಸಾವಿರಾರು ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಹರಿದು ಬರುವ ನಿರೀಕ್ಷೆ ಇದೆ. ಸುಮಾರು 1,500 ಜನರನ್ನು ನಿರೀಕ್ಷಿಸಲಾಗಿದ್ದು, ಸುಂದರ ಪರಿಸರದಲ್ಲಿ ನಡೆಯುವ ನುಡಿ ಜಾತ್ರೆಗೆ ಬರುವ ಸಾಹಿತ್ಯಾಸಕ್ತರನ್ನು ಎಲಿಮಲೆ ಸಂತಸದಿಂದ ಬರಮಾಡಿಕೊಳ್ಳಲಿದೆ.

Advertisement

ಸಕಲ ವ್ಯವಸ್ಥೆ
ಆಗಮಿಸುವ ಎಲ್ಲ ಸಾಹಿತ್ಯಾಸಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. 1,500 ಜನ ಸೇರುವ ನಿರೀಕ್ಷೆ ನಮ್ಮದು. ಎಲಿಮಲೆ ಪೇಟೆಯಿಂದ ಪ್ರೌಢಶಾಲೆಯವರೆಗೆ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿದ್ದು, ಎಲಿಮಲೆ ಹಿಂದೆಂದೂ ಕಾಣದ ಆತಿಥ್ಯವನ್ನು ನುಡಿಜಾತ್ರೆಯಲ್ಲಿ ನೀಡಲಿದೆ.
– ಶೈಲೇಶ್‌ ಅಂಬೆಕಲ್ಲು , ಕಾರ್ಯಾಧ್ಯಕ್ಷ, ಸ್ವಾಗತ ಸಮಿತಿ

24ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸುಳ್ಯ ಜ. 18: ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನವು ಎಲಿಮಲೆ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ರವಿವಾರ ನಡೆಯಲಿದೆ. ವಿಮರ್ಶಕ ಕೃ.ಶಾ. ಮರ್ಕಂಜ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ ಎಲಿಮಲೆಯ ಎತ್ತಿನಹೊಳೆಯಿಂದ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಲಿದ್ದು, ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ ಚಾಲನೆ ನೀಡುವರು. ಬಳಿಕ ಧ್ವಜಾರೋಹಣ ನಡೆಯಲಿದ್ದು, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ ರಾಷ್ಟ್ರ ಧ್ವಜಾರೋಹಣ, ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ ಪರಿಷತ್‌ನ ಧ್ವಜಾರೋಹಣ, ತಾಲೂಕು ಅಧ್ಯಕ್ಷ ಹರಪ್ರಸಾದ್‌ ತುದಿಯಡ್ಕ ಅವರಿಂದ ಕನ್ನಡ ಧ್ವಜಾರೋಹಣ ನಡೆಯಲಿದೆ. ವಸ್ತು ಮತ್ತು ಪುಸ್ತಕ ಪ್ರದರ್ಶನವನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸುವರು. ಸಮ್ಮೇಳನವನ್ನು ಹಿರಿಯ ಪತ್ರಕರ್ತ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಉದ್ಘಾಟಿಸಲಿದ್ದು, ಶಾಸಕ ಎಸ್‌. ಅಂಗಾರ ಸ್ಮರಣ ಸಂಚಿಕೆ ಅನಾವರಣ ಮಾಡುವರು. ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌ ಹೊಸ ಕೃತಿಗಳನ್ನು ಬಿಡುಗಡೆ ಮಾಡಲಿದ್ದು, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಪೂರ್ವಾಧ್ಯಕ್ಷ ನಿತ್ಯಾನಂದ ಮುಂಡೋಡಿ ಅತಿಥಿಗಳಾಗಿ ಪಾಲ್ಗೊಳ್ಳುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಲಲಿತಾಜ ಮಲ್ಲಾರ ಉಪಸ್ಥಿತರಿರುವರು.

ಬಳಿಕ ಕವಿ ಜನಾರ್ದನ ಕಣಕ್ಕೂರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಅಗಲಿದ ಸಾಹಿತಿ ಯು.ಸು.ಗೌ. ಗುತ್ತಿಗಾರು ಅವರಿಗೆ ನುಡಿ ನಮನ, ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಸಮಾರೋಪ ನಡೆಯಲಿದ್ದು, ಪ್ರದೀಪ್‌ಕುಮಾರ್‌ ಕಲ್ಕೂರ ಅಧ್ಯಕ್ಷತೆ ವಹಿಸಲಿರುವರು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ವರದರಾಜ್‌ ಚಂದ್ರಗಿರಿ ಸಮಾರೋಪ ಭಾಷಣ ಮಾಡುವರು.
ಸುಳ್ಯ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಸಮ್ಮಾನ ನೆರವೇರಿಸುವರು. ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ತಹಶೀಲ್ದಾರ್‌ ಎನ್‌.ಎ. ಕುಂಞಿ ಅಹ್ಮದ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಗೌಡ ಉಪಸ್ಥಿತರಿರುವರು. ಸಾಧಕರಿಗೆ ಸಮ್ಮಾನ ನಡೆಯಲಿದೆ. ಸಮ್ಮೇಳನದಲ್ಲಿ ಕನ್ನಡ ಗೀತಗಾಯನ, ಸಾಂಸ್ಕೃತಿಕ ಸಂಭ್ರಮ, ನಾಟಕ ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next