ಹುಬ್ಬಳ್ಳಿ: ದೇಶದಲ್ಲಿ ಯುವಜನಾಂಗಕ್ಕೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಅದರಲ್ಲಿ ಸಮಸ್ಯೆಗಳು ಸಹಜ. ಅವುಗಳಿಗೆ ಪರಿಹಾರ ಕಂಡುಕೊಂಡು ಮುನ್ನುಗ್ಗುವ ಕಲೆ ವಿದ್ಯಾರ್ಥಿಗಳಲ್ಲಿ ಬೆಳೆಸುವುದೇ ದೇಶಪಾಂಡೆ ಫೌಂಡೇಶನ್‌ನ ಎಲಿವೇಟ್ ಸ್ಕಿಲ್ನ ಉದ್ದೇಶ ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಹೇಳಿದರು.
ಗೋಕುಲ ರಸ್ತೆ ವಿಮಾನ ನಿಲ್ದಾಣ ಸಮೀಪದ ದೇಶಪಾಂಡೆ ಎಜುಕೇಶನ್ ಟ್ರಸ್ಟ್‌ನಲ್ಲಿ ಶನಿವಾರ ನಡೆದ ದೇಶಪಾಂಡೆ ಫೌಂಡೇಶನ್‌ನ ಎಲಿವೇಟ್ ಕೌಶಲಾಭಿವೃದ್ಧಿಯ ಮೊದಲ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದನ್ನು ಹೊರಹಾಕುವಲ್ಲಿ ಎಡವುತ್ತಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಂವಹನ ಕೊರತೆ, ಹಿಂಜರಿಕೆಯಿಂದಾಗಿ ಪದವಿ ಪೂರ್ಣಗೊಳಿಸಿದರೂ ಉತ್ತಮ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಏನಾದರೂ ಮಾಡಬೇಕೆಂಬ ಛಲ ಇರಬೇಕು ಎಂದರು. ತರಬೇತಿ ಪಡೆದ 53 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ದೇಶಪಾಂಡೆ ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ಮತ್ತು ಬೆಂಗಳೂರು ಐಐಎಂ ಮಾಜಿ ನಿರ್ದೇಶಕ ಡಾ| ಸುಶೀಲ ವಚಾನಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಕ್ಷಣಕ್ಕೆ ವ್ಯಯಿಸುವ ಹಣ ದೊಡ್ಡ ಹೂಡಿಕೆಯಾಗಿದೆ. ಉತ್ತಮ ಶಿಕ್ಷಣದಿಂದ ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಸಮಸ್ಯೆ ಎದುರಾದಾಗ ಎದೆಗುಂದದೇ ಮುನ್ನುಗ್ಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದರು.
ಗದಗ ಎಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಗುಳೇದಗುಡ್ಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಬುದ್ಧಿವಂತಿಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಅಂಕ ಪಡೆಯುವುದು ಮಹತ್ವದ್ದಲ್ಲ, ಪ್ರತಿಭೆ ಹೊರಹೊಮ್ಮಿಸುವುದು ಮಹತ್ವದ್ದಾಗಿದೆ. ರಾಜ್ಯದ ಪ್ರತಿಯೊಂದು ಕಾಲೇಜುಗಳು ದೇಶಪಾಂಡೆ ಫೌಂಡೇಶನ್ ಆಯೋಜಿಸುತ್ತಿರುವ ಎಲಿವೇಟ್ ಸ್ಕಿಲ್ ತರಬೇತಿಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಲ್ಲವಿ ಹಿರೇಮಠ ಪ್ರಾರ್ಥಿಸಿದರು. ಪ್ರಶಾಂತ ಮೋಟಗಿ ಸ್ವಾಗತಿಸಿದರು. ಗುರುನಗೌಡ ಕುರಕುಂದ ಪ್ರಾಸ್ತಾವಿಕ ಮಾತನಾಡಿದರು. ಶಿವು ಪಾಟೀಲ ಪರಿಚಯಿಸಿದರು. ಪ್ರಭಾವತಿ ನಿರೂಪಿಸಿದರು. ಪ್ರಸನ್ನ ಕುಲಕರ್ಣಿ ವಂದಿಸಿದರು.