ಸುಬ್ರಹ್ಮಣ್ಯ: ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಕಾಡಾನೆಯೊಂದು ಗುರುವಾರ ಬೆಳಗ್ಗೆ ಸಂಚರಿಸಿ ಜನತೆಯಲ್ಲಿ ಆತಂಕವನ್ನುಂಟು ಮಾಡಿತು. ಒಂಟಿ ಸಲಗವು ಗುರುವಾರ ಬೆಳಗ್ಗಿನ ಜಾವ ಕಾಶಿಕಟ್ಟೆ ಗಣಪತಿ ದೇವಸ್ಥಾನ ಸಮೀಪದಿಂದ ಸಂಚರಿಸಿ ಮಯೂರ ವಸತಿಗೃಹದ ಮಾರ್ಗವಾಗಿ ನೂಚಿಲ ಕಡೆಗೆ ರಸ್ತೆಯಲ್ಲೇ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಾಹನ ಸಂಚಾರವಿರುವಾಗಲೇ ರಾಜ ಗಾಂಭೀರ್ಯದಿಂದ ಆನೆ ನಡೆದಾಡಿದೆ. ಮೊದಲಿಗೆ ಕ್ಷೇತ್ರದ ಆನೆಯಾಗಿರಬಹುದೆಂದು ಭಾವಿಸಿದ ಭಕ್ತರಿಗೆ ಬಳಿಕ ಅದು ಕಾಡಾನೆ ಎಂದು ಅರಿವಾದಾಗ ಭಯಭೀತರಾದರು. ಆನೆ ಪೇಟೆ ಸವಾರಿ ಮಾಡಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ವಾರಗಳ ಹಿಂದೆ ಹರಿಹರ ಪಳ್ಳತ್ತಡ್ಕ ಪೇಟೆಯಲ್ಲಿ ಕಾಡಾನೆ ಸಂಚರಿಸಿದ ಬಗ್ಗೆ ಪೇಟೆಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದಾದ ಬಳಿಕ ಬೆಳಗ್ಗಿನ ಜಾವ ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾಲೇಜು ಸಿಬಂದಿಯೋರ್ವರಿಗೆ ಅರಂಪಾಡಿ ಬಳಿ ಆನೆ ರಸ್ತೆ ದಾಟುತ್ತಿರುವುದು ಕಂಡುಬಂದಿತ್ತು. ಇದೀಗ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲೇ ಕಾಡಾನೆ ಸಂಚರಿಸಿರುವುದು ಆತಂಕಕ್ಕೆಡೆ ಮಾಡಿದೆ.