Advertisement

ಜಂಬೂಸವಾರಿಗೆ ಹೊರಟ ಗಜಸವಾರಿ

06:00 AM Sep 03, 2018 | |

ಮೈಸೂರು: ನಾಡಹಬ್ಬ, ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಮೊದಲ ತಂಡ ಭಾನುವಾರ ಅರಮನೆ ನಗರಿ ಮೈಸೂರಿಗೆ ಪ್ರಯಾಣ ಬೆಳೆಸಿತು. ಆರು ಆನೆಗಳ ಪೈಕಿ ಐದು ಆನೆಗಳನ್ನು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯಿಂದ ಸಾಂಪ್ರದಾಯಿಕ ಗಜಪಯಣದ ಮೂಲಕ ಮೈಸೂರಿಗೆ ಕಳುಹಿಸಿಕೊಡಲಾಯಿತು. ಬಂಡೀಪುರದ ಆನೆ ಶಿಬಿರದಲ್ಲಿರುವ ಚೈತ್ರ ಆನೆಯನ್ನು ಅಲ್ಲಿಂದ ನೇರವಾಗಿ ಮೈಸೂರಿಗೆ ಕರೆತರಲಾಯಿತು. 

Advertisement

ಬಳ್ಳೆ ಆನೆ ಶಿಬಿರದಿಂದ ಅರ್ಜುನ, ಮತ್ತಿಗೋಡು ಆನೆ ಶಿಬಿರದಿಂದ ವರಲಕ್ಷ್ಮೀ, ದುಬಾರೆ ಆನೆ ಶಿಬಿರದಿಂದ ಗೋಪಿ, ವಿಕ್ರಮ, ಧನಂಜಯ ಆನೆಗಳನ್ನು ಮಾವುತ ಮತ್ತು ಕವಾಡಿಗಳು ನಾಗರಹೊಳೆಗೆ ಕರೆ ತಂದರು. ನಾಗರಹೊಳೆ ಅರಣ್ಯ ಪ್ರದೇಶದ ಮೂರ್ಕಲ್‌ ಕೆರೆಯಲ್ಲಿ ಆನೆಗಳ ಮೈತೊಳೆದು ಶುಚಿಗೊಳಿಸಲಾಯಿತು. ಬಳಿಕ, ಅವುಗಳನ್ನು ಸಿಂಗರಿಸಿ, ಅಲ್ಲಿನ ಗಣಪತಿ ದೇವಸ್ಥಾನಕ್ಕೆ ಕರೆತರಲಾಯಿತು. ಕಳೆದ 21 ವರ್ಷದಿಂದ ಗಜಪೂಜೆ ನೆರವೇರಿಸುತ್ತಾ ಬಂದಿರುವ ಅರ್ಚಕ ಪ್ರಹ್ಲಾದರಾವ್‌ ಅವರು ಬೆಳಗ್ಗೆ 10.30 ರಿಂದ 11.30ರ ಸಪ್ತಮಿ, ಸಿಂಹಲಗ್ನ, ಕೃತಿಕಾ ನಕ್ಷತ್ರದಲ್ಲಿ ಪೂಜೆ ಸಲ್ಲಿಸಿದರು. ಬಳಿಕ, ವೀರನಹೊಸಹಳ್ಳಿ ಬಳಿಯ ಹೆಬ್ಟಾಗಿಲಿಗೆ ಆನೆಗಳನ್ನು ಕರೆ ತರಲಾಯಿತು.
 
ಐದು ಆನೆಗಳನ್ನೂ ಸಾಲಾಗಿ ನಿಲ್ಲಿಸಿ, ಕಾಲು ಕೊಳೆದು ಅರಿಶಿಣ-ಕುಂಕುಮ ಹಚ್ಚಿ, ಹೂ ಮಾಲೆಗಳನ್ನು ಹಾಕಿ ಪೂಜೆ ಸಲ್ಲಿಸಲಾಯಿತು. ಪಂಚಫ‌ಲ, ಚಕ್ಕುಲಿ, ಕೋಡಬಳೆ, ಮೋದಕ, ದ್ರಾಕ್ಷಿ-ಗೋಡಂಬಿ, ಕಬ್ಬು, ತೆಂಗಿನ ಕಾಯಿ, ಬೆಲ್ಲಗಳನ್ನು ತಿನ್ನಿಸಿದ ನಂತರ, ಷೋಡಶೋಪಚಾರ ಪೂಜೆ, ಗಣಪತಿ ಅರ್ಚನೆ ಮಾಡಿ, ವನದೇವತೆ ಮತ್ತು ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಹುಣಸೂರು ಶಾಸಕ ಅಡಗೂರು ಎಚ್‌.ವಿಶ್ವನಾಥ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ದಕ್ಷಿಣ ವಲಯ ಐಜಿಪಿ ಶರತ್‌ ಚಂದ್ರ ಹಾಗೂ ಇತರರು ಹೆಬ್ಟಾಗಿಲ ಬಳಿ ಇರುವ ಪುರಾತನವಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.  ಬಳಿಕ, ಆನೆಗಳಿಗೆ ಪುಷ್ಪವೃಷ್ಟಿಗರೆಯುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಇದೇ ವೇಳೆ, ಇಲ್ಲಿಂದ ಅರ್ಧಮೈಲು ದೂರದಲ್ಲಿ ಬೃಹತ್‌ ವೇದಿಕೆ ನಿರ್ಮಿಸಿ, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಆದಿವಾಸಿ ಹಾಡಿಯ ಮಕ್ಕಳು, ಟಿಬೇಟ್‌ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ಇದೇ ವೇಳೆ, ಕೀನ್ಯಾ ದೇಶದ ವಿದ್ಯಾರ್ಥಿಗಳು ಕೂಡ ಆಗಮಿಸಿ, ಗಜಪಯಣದ ಸಂಭ್ರಮ ವೀಕ್ಷಿಸಿದರು. ಅಲ್ಲಿಂದ ಪೂರ್ಣಕುಂಭ ಸ್ವಾಗತ, ಡೊಳ್ಳು ಕುಣಿತ, ಕಂಸಾಳೆ ತಂಡಗಳ ಜತೆ ಮೆರವಣಿಗೆಯಲ್ಲಿ ಆನೆಗಳನ್ನು ಮತ್ತೆ ನಾಗರಹೊಳೆ ಅರಣ್ಯದೊಳಗೆ ಕರೆದೊಯ್ದು, ಲಾರಿಗಳಿಗೆ ಹತ್ತಿಸಿ, ಮೈಸೂರಿಗೆ ಕಳುಹಿಸಿ ಕೊಡಲಾಯಿತು. ಈ ಮಧ್ಯೆ, ಮತ್ತಿಗೋಡು ಆನೆ ಶಿಬಿರದ 18 ವರ್ಷದ ಬಲಭೀಮ ಹಾಗೂ ಅಭಿಮನ್ಯು ಆನೆಗಳು ರಾಮನಗರದಲ್ಲಿ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಮೊದಲ ಹಂತದ ತಂಡದಲ್ಲಿ ಬಂದಿಲ್ಲ.

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ದಿನ ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ಅರ್ಜುನ, 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಮೇಲೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹ ಹೊತ್ತು ಸಾಗಲಿದ್ದಾನೆ. ಆತನಿಗೆ ವರಲಕ್ಷ್ಮೀ, ಗೋಪಿ, ವಿಕ್ರಮ, ಧನಂಜಯ, ಚೈತ್ರ ಸಾಥ್‌ ನೀಡಲಿವೆ. ನಾಡಿದ್ದು ಅರಮನೆ ಪ್ರವೇಶ ಸಂಜೆಯ ವೇಳೆಗೆ ಮೈಸೂರು ತಲುಪಿದ ಆನೆಗಳು
ಅಶೋಕಪುರಂನಲ್ಲಿರುವ ಅರಣ್ಯಭವನದ ಆವರಣದಲ್ಲಿ ವಾಸ್ತವ್ಯ ಹೂಡಿದ್ದು, ಬುಧವಾರ ಸಂಜೆ 4.30ಕ್ಕೆ ಶಾಸ್ತ್ರೋಕ್ತವಾಗಿ ಅರಮನೆ ಆವರಣ ಪ್ರವೇಶಿಸಲಿವೆ. ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ
ಜಿ.ಟಿ.ದೇವೇಗೌಡ ಆನೆಗಳನ್ನು ಸ್ವಾಗತಿಸಲಿದ್ದಾರೆ.

ನಾಡಹಬ್ಬ ದಸರಾ ಮೈಸೂರಿಗೆ ಸೀಮಿತವಲ್ಲ. ವಿಶ್ವವಿಖ್ಯಾತಿಗಳಿಸಿರುವ ಮೈಸೂರು ದಸರಾವನ್ನು ವಿಶ್ವಮಟ್ಟಕ್ಕೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಈ ಬಾರಿ ವೈಭವಯುತ ದಸರಾ ಆಯೋಜನೆ ಮಾಡಲಾಗುವುದು.
● ಜಿ.ಟಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ.

Advertisement

ದಸರಾ ವಸ್ತು ಪ್ರದರ್ಶನವನ್ನು ಮೈಸೂರಿಗೆ ಮಾತ್ರ ಸೀಮಿತಗೊಳಿಸದೆ, ಇಡೀ ರಾಜ್ಯಕ್ಕೆ ವಿಸ್ತರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ.
● ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ.

ದಸರಾ ಮೈಸೂರಿಗೆ ಮಾತ್ರವೇ ಸೀಮಿತವಲ್ಲ. ಮೈಸೂರು ದಸರಾ ಎಂದರೆ ಇಡೀ ಪ್ರಪಂಚ ಇತ್ತ ಬಿಟ್ಟ ಕಣ್ಣಿನಿಂದ ನೋಡುತ್ತೆ. ಸಂಪ್ರದಾಯಗಳನ್ನು ಉಳಿಸಿಕೊಂಡು ಈ ಬಾರಿ ವೈಭವಯುತ ದಸರಾ ಆಚರಣೆ ಮಾಡೋಣ. ಕೊಡಗಿನಲ್ಲಿ ಉಂಟಾದ ಜಲಪ್ರವಾಹದ ಸಂಕಷ್ಟದ ಮಧ್ಯೆ ದಸರಾ ಆಚರಣೆ ಮಾಡುತ್ತಿದ್ದೇವೆ. ತಾಯಿ ಚಾಮುಂಡಿ ಸಂತುಷ್ಟವಾದರೆ, ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ.
● ಡಾ.ಜಯಮಾಲ, ಕನ್ನಡ ಮತ್ತು ಸಂಸ್ಕೃತಿ ಸಚಿವೆ.

ಸಂಪ್ರದಾಯಕ್ಕೆ ಯಾವುದೇ ಕೊರತೆಯಾಗದಂತೆ ದಸರಾ ಆಚರಣೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಸಂಪ್ರದಾಯ, ಸಂಸ್ಕೃತಿ, ನಂಬಿಕೆಯೇ ದಸರಾ. ದಸರಾ ಎಂದರೆ ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷಣೆ. ಹೀಗಾಗಿ, ಮಳೆ-ಬರ ಎನ್ನದೇ ಎಂಥದ್ದೇ ಪರಿಸ್ಥಿತಿಯಲ್ಲೂ ದಸರಾ ನಿಲ್ಲಬಾರದು.
● ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next