Advertisement
ಕೇಶವ ಬಾಬು ಎಂಬ ಹೆಸರಿನ ಆನೆ ಸಾಕುತ್ತಿರುವ ಜಯಶ್ರೀ ಬಾಲ್ಯದಿಂದಲೇ ಆನೆ ನೋಡಿಕೊಂಡೇ ಬೆಳೆದವರು. ಮಹಿಳಾ ಮಾವುತರಾಗಿಯೂ ಅವರು ಚಿರಪರಿಚಿತೆ. ದೇವಸ್ಥಾನಗಳ ಉತ್ಸವಗಳಿಗೆ ಬಾಬುವನ್ನು ಕರೆದುಕೊಂಡು ಹೋಗುವ ಜಯಶ್ರೀ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.
ಚಾಂತಪುರ ಗ್ರಾಮದ ನಾರಾಯಣ ಅಯ್ಯರ್ ಮತ್ತು ಅವರ ಮಗ “ಆನ ಅಯ್ಯರ್’ ಎಂದೇ ಕರೆಯಲ್ಪಡುತ್ತಿದ್ದ ಅಪ್ಪು ಅಯ್ಯರ್ 5 ಆನೆಗಳನ್ನು ಸಾಕಿದ್ದರು. ಅಪ್ಪು ಆನೆಗಳನ್ನು ಚಿತ್ರಗಳ ಶೂಟಿಂಗ್‌ಗಾಗಿ ಚೆನ್ನೈಗೂ ಕರೆದೊಯ್ಯುತ್ತಿದ್ದರು. ಇವರ ಮಗಳೇ ಜಯಶ್ರೀ. ಚಿಕ್ಕಂದಿನಿಂದಲೇ ತಂದೆಯೊಂದಿಗೆ ಉತ್ಸವಗಳಿಗೆ ತೆರಳುತ್ತಿದ್ದ ಜಯಶ್ರೀಗೆ ಸಹಜವಾಗಿ ಆನೆಯ ಮೇಲೆ ವಾತ್ಸಲ್ಯ ಬೆಳೆಯಿತು. ಅನಂತರ ತಂದೆಯ ಮರಣಾನಂತರ ತಾನೇ ಬಾಬುವನ್ನು ಸಾಕತೊಡಗಿದರು. ಆನೆ ಚಾಕರಿಗೆ ಇಬ್ಬರು ಸಹಾಯಕರಿದ್ದರೂ ಜಯಶ್ರೀಗೆ ತಾನೇ ಆನೆಗೆ ಕೈ ತುತ್ತು ತಿನ್ನಿಸಿದರಷ್ಟೇ ಸಮಾಧಾನ. ಬಾಬುವನ್ನಗಲಿ ಇರಲು ಸಾಧ್ಯವೇ ಇಲ್ಲ, ಬಾಬು ನಮ್ಮ ಮನೆ ಮಗನಿದ್ದಂತೆ ಎಂದು ಭಾವುಕರಾಗಿ ನುಡಿಯುತ್ತಾರೆ ಜಯಶ್ರೀ. ನಾವು ಪ್ರೀತಿಸಿದರೆ ಆನೆಗಳೂ ನಮ್ಮನ್ನು ಅಷ್ಟೇ ಪ್ರೀತಿಸುತ್ತವೆ. ಆನೆ ಬಹಳ ಬುದ್ಧಿವಂತ ಪ್ರಾಣಿ ಎನ್ನುತ್ತಾರೆ ಜಯಶ್ರೀ. ಆನೆ ಬಂದ ಕಥೆ
ಬಹಳ ವರ್ಷಗಳ ಹಿಂದೆ. ದೇವಸ್ಥಾನದ ಉತ್ಸವಕ್ಕಾಗಿ ಅಪ್ಪು ಅಯ್ಯರ್ ಹೊರಟಿದ್ದರು. ಮರಳಿ ಬರುವಾಗ ಏನು ತರಬೇಕೆಂದು ಮಕ್ಕಳಲ್ಲಿ ಕೇಳಿದರು. ಜಯಶ್ರೀ ಮತ್ತು ಆಕೆಯ ಸಹೋದರಿಯರಾದ ಸಾವಿತ್ರಿ, ಲಕ್ಷ್ಮೀ ಒಕ್ಕೊರಲಿಂದ “ಆನೆ’ ಎಂದರು. ಮುಂದಿನ ನಾಲ್ಕು ದಿನ ಈ ಮೂವರು ಮಕ್ಕಳಿಗೆ ಕಾತರದ ದಿನಗಳಾಗಿದ್ದವು. ಅಪ್ಪ ಯಾವ ರೀತಿಯ ಗೊಂಬೆ ತರಬಹುದು ಎನ್ನುವುದು ಕಲ್ಪನೆಯಲ್ಲೇ ದಿನ ದೂಡಿದರು. ಕೊನೆಗೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಅಪ್ಪು ಅಯ್ಯರ್ ನಿಜ ಆನೆಯೊಂದಿಗೆ ಮನೆಗೆ ಮರಳಿದ್ದರು. ಆ ಆನೆಗೆ ಕೇಶವ ಬಾಬು ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಜಯಶ್ರೀ ಆನೆ ಜತೆಗೆ ಬೆಳೆಯತೊಡಗಿದಳು. ಆ ಆನೆ ನಿಧನ ಹೊಂದಿದ ಅನಂತರ ಮತ್ತೆ ಕರೆದುಕೊಂಕೊಂಡು ಬಂದ(ಈಗಿರುವ)ಆನೆಗೂ ಕೇಶವ ಬಾಬು ಎಂದೇ ಹೆಸರಿಟಿದ್ದೇವೆ ಎನ್ನುತ್ತಾರೆ ಜಯಶ್ರೀ.
Related Articles
ಬಾಬು ಎಂದರೆ ಜಯಶ್ರೀಗೆ ಮಗನಷ್ಟೇ ಅಕ್ಕರೆ. ನಾವು ಸೇವಿಸುವ ಆಹಾರವನ್ನೇ ಅವನಿಗೂ ನೀಡುತ್ತೇವೆ ಎನ್ನುತ್ತಾರೆ. ಆನೆಯನ್ನು ಉತ್ಸವಗಳ ಮೆರವಣಿಗೆಗೆ ಜಯಶ್ರೀ ಕರೆದೊಯ್ಯುವುದು ಬಿಟ್ಟರೆ ಬೇರೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದೇ ಇಲ್ಲ. “ಸಾಕಷ್ಟು ವಿಶ್ರಾಂತಿ ನೀಡಿದ ಬಳಿಕವೇ ಉತ್ಸವಗಳಿಗೆ ಕರೆದೊಯ್ಯುತ್ತೇವೆ. ದೂರದ ಊರಿಗೆ ಕಳುಹಿಸುವುದಿಲ್ಲ’ ಎಂದು ಜಯಶ್ರೀ ವಿವರಿಸುತ್ತಾರೆ. ದಿನಕ್ಕೆ ಎರಡು ಹೊತ್ತು ಆನೆಗೆ ಆಹಾರ ಒದಗಿಸಲಾಗುತ್ತದೆ. ರಾತ್ರಿ 10 ಗಂಟೆಗೆ ಬಾಬುಗೆ ಗುಡ್‌ನೈಟ್ ಹೇಳಿಯೇ ಜಯಶ್ರೀ ವಿಶ್ರಮಿಸುವುದು ವಾಡಿಕೆ.
Advertisement
– ರಮೇಶ್ ಬಿ., ಕಾಸರಗೋಡು