ಕೋಲ್ಕತಾ: ಸೇನಾ ಕ್ಯಾಂಟೀನ್ ಒಳಗೆ ನುಗ್ಗಿದ ಆನೆ ಟೇಬಲ್, ಕುರ್ಚಿಗಳನ್ನು ಎಸೆದಿರುವ ಘಟನೆ ಪಶ್ಚಿಮಬಂಗಾಳದ ಹಾಸಿಮಾರಾದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೇರವಾಗಿ ಸೇನಾ ಕ್ಯಾಂಟಿನ್ ಒಳನುಗ್ಗಿದ ಆನೆ ಪ್ಲಾಸ್ಟಿಕ್ ಟೇಬಲ್, ಕುರ್ಚಿಯನ್ನು ಎತ್ತಿ ಎಸೆದಿತ್ತು. ನಂತರ ಆನೆ ಒಳನುಗ್ಗುತ್ತಿರುವುದನ್ನು ಗಮನಿಸಿದ ಸಿಬ್ಬಂದಿಯೊಬ್ಬರು ಬೆಂಕಿಯ ದೊನ್ನೆ ಹಿಡಿದು ಮುನ್ನುಗ್ಗಿದ್ದರು. ಬೆಂಕಿಯನ್ನು ಕಂಡು ಹೆದರಿದ ಆನೆ ಹೊರಗೆ ಓಡಿಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಸಿಬ್ಬಂದಿ ಬೆಂಕಿಯ ದೊನ್ನೆ ಹಿಡಿದು ಆನೆಯನ್ನು ಸೇನಾ ಕ್ಯಾಂಟಿನ್ ಆವರಣದ ಹೊರಗೆ ಓಡಿಸಿರುವುದಾಗಿ ವರದಿ ತಿಳಿಸಿದೆ. ಚಿಲಾಪಾಟಾ ಅರಣ್ಯ ಹಾಸಿಮರಾ ಆರ್ಮಿಯ ಸೇನಾ ಕ್ಯಾಂಟೀನ್ ಸಮೀಪದಲ್ಲಿಯೇ ಇದೆ. ಇದರ ಪರಿಣಾಮ ಆನೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಬರುತ್ತಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಸಿಮಾರಾದಿಂದ ಭೂತಾನ್ ಕೇವಲ 15 ಕಿಲೋ ಮೀಟರ್ ದೂರದಲ್ಲಿದೆ.