Advertisement

ಶಿರಸಿ-ಸಿದ್ದಾಪುರದಲ್ಲಿ ಆನೆ ಕಾಟ

03:23 PM Nov 18, 2019 | Team Udayavani |

ಶಿರಸಿ: ಆನೆ ಸಾಕೋದೂ ಕಷ್ಟ, ಊರಿಗೆ ಬಂದರೆ ಓಡಿಸೋದೂ ಕಷ್ಟ ಹೀಗೊಂದು ಹೊಸ ಗಾದೆ ಸೃಷ್ಟಿಸುವ ಮಟ್ಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಶಿರಸಿ ತಾಲೂಕಿನ ವಿವಿಧೆಡೆ, ಸಿದ್ದಾಪುರ ತಾಲೂಕಿನ ತ್ಯಾಗಲಿ ಭಾಗದಲ್ಲಿ ಆನೆಗಳ ಹಿಂಡು ಓಡಾಡುತ್ತಿರುವುದು ಉಪ ಅರಣ್ಯ ವಿಭಾಗದ ಅಧಿಕಾರಿಗಳಿಗೆ, ಸಿಬ್ಬಂದಿಗೆ ತಲೆನೋವಾಗಿದೆ.

Advertisement

ಇದೇ ಪ್ರಥಮ ಬಾರಿಗೆ ಮೂರು ದೊಡ್ಡ ಹಾಗೂ ಒಂದು ಮರಿ ಆನೆಯ ಜೊತೆಗೆ ನಾಲ್ಕು ಗಜಗಳ ಹಿಂಡು ದಿಕ್ಕು ತಪ್ಪಿ ಶಿರಸಿ ಭಾಗದ ಉಂಚಳ್ಳಿ, ಕುಳವೆ, ಉಗ್ರೇಮನೆ, ಸಿದ್ದಾಪುರದ ತ್ಯಾಗಲಿ ಪ್ರಾಂತದಲ್ಲಿ ಓಡಾಡುತ್ತಿದ್ದು, ಬನವಾಸಿ ವಲಯರಣ್ಯ ಪ್ರದೇಶದಿಂದ ಶಿರಸಿ ವಲಯಾರಣ್ಯದ ವ್ಯಾಪ್ತಿಗೆ ಸಂಚಾರ ವಿಸ್ತರಿಸಿಕೊಂಡಿದ್ದು ಹೊಸ ಕಾರಿಡಾರ್‌ ಆಗುತ್ತದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಹತ್ತು ದಿನಗಳಲ್ಲಿ 15ಕ್ಕೂ ಅಧಿಕ ರೈತರ ಹೊಲಗಳಿಗೆ ಧಾಂಗುಡಿ ಇಟ್ಟಿದ್ದು, ಸುಮಾರು 20 ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ನಾಶವಾಗಿದೆ. ಇವುಗಳ ಸರ್ವೇ ಕಾರ್ಯವನ್ನುಉಭಯ ವಲಯಗಳಲ್ಲೂ ನಡೆಸಲಾಗುತ್ತಿದ್ದರೂ ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ಆನೆಗಳನ್ನು ಊರಿಗೆ ಬಾರದಂತೆ, ಏನೂ ತೊಂದರೆ ಆಗದಂತೆ ನೋಡಿಕೊಳ್ಳುವುದೇ ಇಲಾಖೆಗೆ ಸವಾಲಾಗಿದೆ.

ದೀಪಾವಳಿ ಮುಗಿದರೂ ಪಟಾಕ್ಷಿ ಸದ್ದು ಹಳ್ಳಿಗಳಲ್ಲಿ ನಿಂತಿಲ್ಲ. ಅರಣ್ಯ ಇಲಾಖೆ ಆನೆ ಬೀಡು ಬಿಟ್ಟ ಕಾಡಿನ ಅಂಚಿನಲ್ಲಿ ನಾಲ್ಕು ಜೀಪುಗಳ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಮರಳಿ ಅವುಗಳನ್ನು ಕಾಡಿಗೆ ಬಿಡುವುದು ಧ್ಯೇಯವಾಗಿದೆ. ಪ್ರತೀ ದಿನ ರಾತ್ರಿಯಿಂದ ಬೆಳಗಿನ ತನಕವೂ ಪಟಾಕ್ಷಿ ಹೊಡೆದು ಓಡಿಸವುದೂ ಇಲಾಖೆಯ ಕಾರ್ಯವಾಗಿದೆ.

ಕಳೆದ ಹತ್ತು ದಿನಗಳಲ್ಲಿ ಸುಮಾರು 20 ಸಾವಿರ ರೂ.ಗಳಷ್ಟು ಪಟಾಕ್ಷಿ ಹೊಡೆದು ಆನೆ ಓಡಿಸುತ್ತಿದ್ದು, ಯಾವಾಗ ಮೂಲ ಕಾಡು ಸೇರುತ್ತದೆ ಎಂದೂ ನೋಡುವಂತಾಗಿದೆ. ಆನೆಗಳ ಹಿಂಡು ಉತ್ತರ ಕನ್ನಡದಲ್ಲಿ 18-21 ಇವೆ. ಅಸಲಿಗೆ ಇನ್ನಷ್ಟು ಆನೆಗಳಿವೆ ಎಂಬುದೂ ಹಾಗೂ ಅವುಗಳ ಮೂಲ ಎಲ್ಲಿ ಎಂಬುದೂ ತಿಳಿದಿಲ್ಲ.

ಸಾಮಾನ್ಯವಾಗಿ ಬನವಾಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆನೆಗಳು ಬರುವುದುಂಟು. ಆದರೆ ಶಿರಸಿ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದಿದ್ದಿಲ್ಲ. ಹೀಗೆ ದಿಕ್ಕು ತಪ್ಪಿ ಬಂದಿರುವ ಆನೆಗಳ ಹಿಂಡು ಬಂದ ಮಾರ್ಗದಲ್ಲಿ ವಾಪಸ್‌ ಸಾಗುವ ಸಾಧ್ಯತೆಗಳಿವೆ. ಹೀಗಾಗಿ ಸೊರಬದ ಕಡೆ ಸಾಗಿದ ಆನೆಗಳು ಪುನಃ ವಾಪಸ್‌ ಬರುತ್ತಿವೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಅಮಿತ್‌ ಚವ್ಹಾಣ. ಆನೆಗಳು ಬಂದಿರುವ ಮಾಹಿತಿ ಆಧರಿಸಿ ಆ ಪ್ರದೇಶಗಳಿಗೆ ಜನರು ಓಡಾಡದಂತೆ ಅರಣ್ಯ ಇಲಾಖೆ ಮಾಹಿತಿ ನೀಡುತ್ತಿದೆ. ಅದರಲ್ಲೂ ಅವು ರೈತರ ಜಮಿನುಗಳಿಗೆ ನುಗ್ಗದೇ, ಜನರಿಗೆ ತೊಂದರೆ ಮಾಡದೇ ಅರಣ್ಯಗಳಲ್ಲೇ ತೆರಳುವಂತಾಗಲು ಪಟಾಕಿ ಸಿಡಿಸಲಾಗುತ್ತಿದೆ.

Advertisement

ಅವುಗಳ ಚಲನವಲನಗಮನಿಸಿದರೆ ಪುನಃ ತೆರಳುವ ಸಾಧ್ಯತೆ ಕಂಡುಬರುತ್ತಿದೆ ಎಂಬುದು ಅರಣ್ಯಾಧಿಕಾರಿಗಳ ಲೆಕ್ಕಾಚಾರ.ಈ ಮಧ್ಯೆ ಆನೆಗಳ ಹಿಂಡು ಯಾವುದೇ ಮದದಿಂದ ಇರದೇ ಇರುವುದು ಸಮಾಧಾನದ ಸಂಗತಿ. ಅವು ಮದ ಏರದಂತೆ ನೋಡಿಕೊಳ್ಳಬೇಕಾದ್ದೂ ಜನರ, ಅರಣ್ಯಾಧಿಕಾರಿಗಳ ಕರ್ತವ್ಯ. ಹಾಗಂತ ಮದ ಏರಿದ ಆನೆಗಳನ್ನು ಹಿಡಿದು, ಅರವಳಿಕೆ ನೀಡಿ ತಜ್ಞರ, ಉನ್ನತಾಧಿಕಾರಿಗಳ ಅನುಮತಿ ಪಡೆದು ಸಾಗಾಟ ಮಾಡಬಹುದು. ಆದರೆ, ಸಾಮಾನ್ಯ ಓಡಾಟ ಮಾಡುವ ಆನೆಗಳಿಗೆ ಇಂಥ ಕಾರ್ಯಾಚರಣೆಗೆ ಅವಕಾಶ ಇಲ್ಲ. ಇವುಗಳನ್ನು ಬಂದಲ್ಲಿ ಜಾಗಟೆ, ಪಟಾಕಿ ಹೊಡೆದು ಓಡಿಸುವದೇ ಕೆಲಸವಾಗಿದೆ!

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next