Advertisement

Belthangady ಚಾರ್ಮಾಡಿಯ ಬಾರೆಯಲ್ಲಿ ಆನೆ ಕಂದಕ

12:38 AM Oct 28, 2023 | Team Udayavani |

ಬೆಳ್ತಂಗಡಿ: ಆನೆ ಹಾವಳಿಯಿಂದ ತತ್ತರಿಸಿದ್ದ ಚಾರ್ಮಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೋಟತ್ತಾಡಿ-ಚಿಬಿದ್ರೆ ಗ್ರಾಮಗಳ ಗಡಿ ಭಾಗವಾದ ಬಾರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ನಿರ್ಮಾಣ ಶುಕ್ರವಾರ ಆರಂಭವಾಗಿದೆ.

Advertisement

ಸುಮಾರು 1.5 ಕಿ.ಮೀ. ಪ್ರದೇಶದಲ್ಲಿ 5.40 ಲಕ್ಷ ರೂ. ವೆಚ್ಚದಲ್ಲಿ ಕಂದಕ ನಿರ್ಮಾಣವಾಗಲಿದೆ. ಧರ್ಮಸ್ಥಳ -ಮುಂಡಾಜೆ ರಕ್ಷಿತಾರಣ್ಯದ ಪಕ್ಕದಲ್ಲಿರುವ ಬಾರೆಯಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದು, ಅಪಾರ ಪ್ರಮಾಣದ ಕೃಷಿ ನಾಶವಾಗಿದೆ.

ಇಲ್ಲಿ 3 ತಿಂಗಳ ಹಿಂದೆ ನಾಗರಹೊಳೆಯಿಂದ ಪರಿಣಿತ ಆನೆಕಾವಾಡಿಗರನ್ನು ಕರೆಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಹಲವು ದಿನಗಳ ಕಾಲ ನಡೆದಿತ್ತು. ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಮೆಣಸಿನ ಹೊಗೆ ಹಾಕುವ ಕುರಿತು ಪ್ರಾತ್ಯಕ್ಷಿಕೆಯೂ ನಡೆದಿತ್ತು. ಇದಾವುದೂ ಹೆಚ್ಚಿನ ಪರಿಣಾಮ ಬೀರದ ಕಾರಣ ಕೃಷಿಕರು ಕಂಗಾಲಾಗಿದ್ದಾರೆ. ಪ್ರಸ್ತುತ 2 ಮೀಟರ್‌ ಆಳ, 3 ಮೀಟರ್‌ ಅಗಲದ ಆನೆ ಕಂದಕ ನಿರ್ಮಾಣವಾಗುತ್ತಿದೆ.

ಆನೆ ಕಂದಕವನ್ನು ಕುಂಟಾಡಿ ತನಕ ವಿಸ್ತರಿಸಬೇಕು ಎಂದು ಆಗ್ರಹಿಸಿರುವ ಸ್ಥಳೀಯರು ಆಗ ಮಾತ್ರ ಉಳಿದ ಪ್ರದೇಶಗಳಲ್ಲೂ ಆನೆಗಳ ಹಾವಳಿ ಕಡಿಮೆಯಾಗಬಹುದು ಎಂದಿದ್ದಾರೆ.

ದುರಸ್ತಿಗಿಲ್ಲ ಅನುದಾನ
ಅರಣ್ಯ ಇಲಾಖೆಯು ಆನೆ ಕಂದಕ ನಿರ್ಮಾಣಕ್ಕೆ ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡುತ್ತಿದೆ. ಆದರೆ ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ಕಡಿರುದ್ಯಾವರ ಗ್ರಾಮಗಳಲ್ಲಿ ಅನೇಕ ವರ್ಷಗಳ ಹಿಂದೆ ನಿರ್ಮಿಸಲಾದ ಕಂದಕಗಳು ಅನುದಾನ ಬಾರದ ಕಾರಣ ದುರಸ್ತಿ ಕಾಣದೆ ನಿಷ್ಪ್ರಯೋಜಕವಾಗಿವೆ. ಮಳೆಗಾಲದಲ್ಲಿ ಮಣ್ಣು ಕುಸಿದು ಕಂದಕಗಳು ಮುಚ್ಚಿ ಹೋಗಿ ಗಿಡ, ಮರಗಳು ಬೆಳೆದಿವೆ. ಅಲ್ಲಿಂದ ಆನೆಗಳು ಸುಲಭವಾಗಿ ದಾಟಿ ಬರುತ್ತಿವೆ. ಈ ಹಿಂದೆ ನಿರ್ಮಾಣವಾಗಿರುವ ಆನೆ ಕಂದಕಗಳನ್ನು ದುರಸ್ತಿ ಪಡಿಸಬೇಕಿದೆ. ಮೃತ್ಯುಂಜಯ ನದಿ ಸಮೀಪದ ನಳಿಲು ಪ್ರದೇಶದಲ್ಲಿ ನೆರೆ ಸಮಯ ಮುಚ್ಚಿ ಹೋಗಿರುವ ಆನೆ ಕಂದಕವನ್ನು ಮರು ನಿರ್ಮಿಸುವ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next