ಬೆಳ್ತಂಗಡಿ: ಮುಂಡಾಜೆ ಗ್ರಾಮದ ಧುಂಬೆಟ್ಟು , ಮಜಲು, ಕಜೆ ಮೊದಲಾದ ಪ್ರದೇಶಗಳಲ್ಲಿ ರವಿವಾರ ರಾತ್ರಿ ಕೃಷಿ ತೋಟಗಳಲ್ಲಿ ಆನೆಗಳು ತಿರುಗಾಟ ನಡೆಸಿವೆ.
ರವಿವಾರ ರಾತ್ರಿ ಧುಂಬೆಟ್ಟು ಪರಿಸರದಲ್ಲಿ ಎರಡು ಕಾಡಾನೆಗಳು ಸ್ಥಳೀಯರಿಗೆ ಕಾಣಸಿಕ್ಕಿವೆ. ತತ್‌ಕ್ಷಣ ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸಲಾಯಿತಾದರೂ ಜಗ್ಗದ ಕಾಡಾನೆಗಳು ಕಜೆ ಶ್ರೀಕೃಷ್ಣಭಟ್, ಧುಂಬೆಟ್ಟಿನ ಶಶಿಧರ್ ಖಾಡಿಲ್ಕಾರ್ ಸೇರಿದಂತೆ ಹಲವರ ತೋಟಗಳಿಗೆ ನುಗ್ಗಿ ಬಾಳೆಗಿಡ, ಅಡಿಕೆ, ತೆಂಗಿನ ಮರಗಳನ್ನು ಮುರಿದು ಹಾಕಿ ಕೃಷಿಗೆ ಹಾನಿ ಉಂಟು ಮಾಡಿವೆ.ಸೋಮವಾರ ಮುಂಜಾನೆಯೂ ಪರಿಸರದಲ್ಲಿ ಬೀಡುಬಿಟ್ಟಿದ್ದ ಆನೆಗಳು ಸಮೀಪದ ಕಾಡಿಗೆ ನುಗ್ಗಿವೆ.
ಮುಂಡಾಜೆಯ ಸಚಿನ್ ಭಿಡೆ ಅವರು ನಿರ್ಮಿಸಿರುವ ಕಾರ್ಗಿಲ್ ವನಕ್ಕೆ ದಾಳಿ ನಡೆಸಿದ ಕಾಡಾನೆಗಳು ಸೋಲಾರ್ ಬೇಲಿ, ಗೇಟು ಸಹಿತ ಸಾವಿರಾರು ಮೌಲ್ಯದ ಸೊತ್ತುಗಳಿಗೆ ಹಾನಿ ಉಂಟು ಮಾಡಿವೆ.
ಇದನ್ನೂ ಓದಿ:2021 ಜುಲೈ-ಸೆಪ್ಟೆಂಬರ್‌ನಲ್ಲಿ 3.10 ಕೋಟಿ ನವೋದ್ಯೋಗ : ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ
ಈ ಪ್ರದೇಶದಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇದುವರೆಗೆ ಭೇಟಿ ನೀಡಿಲ್ಲ. ಇಲ್ಲಿನ ನಳೀಲು ಎಂಬಲ್ಲಿರುವ ಆನೆ ಕಂದಕ ನಿರ್ವಹಣೆ ಇಲ್ಲದೆ ಇರುವುದರಿಂದ ಆನೆಗಳು ಧುಂಬೆಟ್ಟು ಕಡೆ ಲಗ್ಗೆ ಇಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.